“ಲಹರಿ” ಗೆ ನಲವತ್ತೆಂಟು ವರ್ಷ: ರಿಕ್ಕಿಕೇಜ್ ಗೆ ಗ್ರ್ಯಾಮಿ ಬಂದ ಹರ್ಷ!

masthmagaa.com:

ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿರುವ “ಲಹರಿ” ಸಂಸ್ಥೆ ಆರಂಭವಾಗಿ ನಲವತ್ತೆಂಟು ವರ್ಷವಾಗಿದೆ.”ಲಹರಿ ಮ್ಯೂಸಿಕ್” ಮೂಲಕ ರಿಕ್ಕಿಕೇಜ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿದ್ದ ಡಿವೈನ್ ಟೈಡ್ಸ್ ಆಲ್ಬಂ ಗೆ ಸಂಗೀತ ಕ್ಷೇತ್ರದ ಮೇರು ಪ್ರಶಸ್ತಿಯಾದ ಗ್ರ್ಯಾಮಿ ಸಹ ಬಂದಿದೆ. ರಿಕ್ಕಿ ಕೇಜ್ ಅವರಿಗೆ ಈ ಪ್ರಶಸ್ತಿ ಸಂದಿದೆ. ಈ ಎರಡು ಸಂತಸವನ್ನು ಹಂಚಿಕೊಳ್ಳಲು ಲಹರಿ ವೇಲು ಪತ್ರಿಕಾಗೋಷ್ಠಿ ಆಯೋಜಿಸಿದ್ದರು.

ಕೇವಲ ಐನ್ನೂರು ರೂಪಾಯಿ ಬಂಡವಾಳದಿಂದ ನಮ್ಮ ಅಣ್ಣ ಮನೋಹರ ನಾಯ್ಡು ಅವರು ಈ ಸಂಸ್ಥೆಯನ್ನು ಆರಂಭಿಸಿದರು. ಈಗ ನಮ್ಮ ಸಂಸ್ಥೆ ಈ ಮಟ್ಟಕ್ಕೆ ಬರಲು ನಿಮ್ಮೆಲ್ಲರ ಹಾರೈಕೆ ಕಾರಣ. ಇದೇ ಮೊದಲ ಬಾರಿಗೆ ನಮ್ಮ ಸಂಸ್ಥೆ ಮೂಲಕ ಬಿಡುಗಡೆಯಾದ “ಡಿವೈನ್ ಟೈಡ್ಸ್ ” ಆಲ್ಬಂ ಗೆ ಸಂಗೀತ ನೀಡಿದ್ದಕ್ಕಾಗಿ ರಿಕ್ಕಿಕೇಜ್ ಅವರಿಗೆ ಗ್ರ್ಯಾಮಿ ಪ್ರಶಸ್ತಿ ಬಂದಿದೆ. ಈ ಗೌರವಕ್ಕೆ ಪಾತ್ರರಾದ ರಿಕ್ಕಿಕೇಜ್ ಅವರನ್ನು ಅಭಿನಂದಿಸುತ್ತೇನೆ. ಈ ಪ್ರಶಸ್ತಿ ಸಮಾರಂಭಕ್ಕೆ ನಾನು ವೀಸಾ ಸಿಗದ ಕಾರಣದಿಂದ ಹೋಗಿರಲಿಲ್ಲ. ನನ್ನ ಅಣ್ಣನ ಮಗ ಚಂದ್ರು , ರಿಕ್ಕಿಕೇಜ್ ಅವರ ಜೊತೆಗೆ ಹೋಗಿದ್ದರು. ನಾವೆಲ್ಲರೂ ಮನೆಯಿಂದಲೇ ನೋಡಿ ಸಂತಸಪಟ್ಟೆವು. ಸದ್ಯದಲ್ಲೇ ರಿಕ್ಕಿಕೇಜ್ ಅವರ ಸಂಗೀತ ನಿರ್ದೇಶನದಲ್ಲಿ ಉತ್ತಮ ಚಿತ್ರವೊಂದನ್ನು ನಮ್ಮ ಸಂಸ್ಥೆ ಮೂಲಕ ನಿರ್ಮಿಸುವ ತಯಾರಿ ನಡೆಯುತ್ತಿದೆ ಎಂದು ಲಹರಿ ವೇಲು ತಿಳಿಸಿದರು.

ನನಗೆ ಎರಡನೇ ಬಾರಿ ಈ ಪ್ರಶಸ್ತಿ ಬಂದಿರುವುದು ಸಂತೋಷ ತಂದಿದೆ. ಪ್ಯಾಂಡಮಿಕ್ ಸಮಯದಲ್ಲಿ ಈ ಆಲ್ಬಂ ನಿರ್ಮಾಣವಾಯಿತು. ಅನೇಕ ಕಲಾವಿದರನ್ನು ಜೂಮ್ ಕಾಲ್ ಹಾಗೂ ಮೆಸೇಜ್ ಗಳ ಮೂಲಕ ಸಂಪರ್ಕ ಮಾಡಿದ್ದೆ. ನೂರೈವತ್ತಕ್ಕೂ ಅಧಿಕ ಕಲಾವಿದರು ಹಾಗೂ ತಂತ್ರಜ್ಞರು ಈ ಹಾಡಿಗೆ ಕೆಲಸ ಮಾಡಿದ್ದಾರೆ. ಅದರಲ್ಲಿ ‌ಅರವತ್ತಕ್ಕೂ ಅಧಿಕರು ಭಾರತದವರು. ಮಿಕ್ಕವರು ಹೊರ ದೇಶದವರು. ಇಲ್ಲಿನ ವಾರಿಜಾಶ್ರೀ, ಅರುಣ್ ಕುಮಾರ್, ಸುಮಾ ರಾಣಿ, ಚೈತ್ರ ಮುಂತಾದ ಕಲಾವಿದರು ಈ ಆಲ್ಬಂ ನಲ್ಲಿದ್ದಾರೆ. ನಾನು ಕನ್ನಡದಲ್ಲಿ “ಆಕ್ಸಿಡೆಂಟ್”, ” ವೆಂಕಟ ಇನ್ ಸಂಕಟ” ಹಾಗೂ “ಕ್ರೇಜಿ ಕುಟುಂಬ” ಚಿತ್ರಗಳಿಗೆ ಸಂಗೀತ ನೀಡಿದ್ದೇನೆ. ಆ ಮೂರು ಸಿನಿಮಾಗಳ ನಾಯಕ ರಮೇಶ್ ಅರವಿಂದ್ ಅವರೆ. ರಮೇಶ್ ನನ್ನ ಆತ್ಮೀಯ ಸ್ನೇಹಿತರು. ನನಗೆ ಸಿನಿಮಾಗಿಂತ ವಿಭಿನ್ನ ಆಲ್ಬಂಗಳನ್ನು ಮಾಡುವುದರಲ್ಲೇ ಆಸಕ್ತಿ ಹೆಚ್ಚು ಎಂದು ತಿಳಿಸಿದ ರಿಕ್ಕಿಕೇಜ್, ಪ್ರಶಸ್ತಿ ಪಡೆಯಲು ಲಹರಿ ಸಂಸ್ಥೆಯ ಚಂದ್ರು ಅವರೊಂದಿಗೆ ಹೋದ ಸಂದರ್ಭವನ್ನು ನೆನಪಿಸಿಕೊಂಡರು. ಹಾಗೂ ಮುಂದೆ ಸಹ ಲಹರಿ ಸಂಸ್ಥೆಯವರೊಂದಿಗೆ ಇರುವುದಾಗಿ ಹೇಳಿದರು.

ಇಷ್ಟು ಎತ್ತರಕ್ಕೆ ಬೆಳೆದಿದ್ದರೂ ರಿಕ್ಕಿಕೇಜ್, ನಮ್ಮ ಸಂಸ್ಥೆಯ ಕಾರ್ಯಗಳಿಗೆ ಕೈ ಜೋಡಿಸಿರುವುದು ನಿಜಕ್ಕೂ ಹೆಮ್ಮೆ. ಅವರು ನಮ್ಮೊಂದಿಗೆ ಯಾವುದೇ ಅಗ್ರಿಮೆಂಟ್ ಸಹ ಮಾಡಿಕೊಂಡಿಲ್ಲ. ಇದೇ ಅವರ ಪ್ರೀತಿಗೆ ಸಾಕ್ಷಿ ಎಂದರು ಲಹರಿ ಸಂಸ್ಥೆಯ ಚಂದ್ರು. ರಿಕ್ಕಿಕೇಜ್ ಅವರೊಂದಿಗೆ ಹದಿನೈದು ವರ್ಷಗಳಿಂದ ಜೊತೆಗಿರುವ ವಾಡಿಯಲ್ ಸಹ ಪತ್ರಿಕಾಗೋಷ್ಠಿಯಲ್ಲಿದ್ದರು.

-masthmagaa.com

Contact Us for Advertisement

Leave a Reply