ಮುಂದುವರೆದ ಮಹಾʻಡ್ರಾಮಾʼ, ಹೊಸ ಹೆಸ್ರು ಇಟ್ಕೊಂಡ ಶಿಂಧೆ ಬಣ !

masthmagaa.com:

ಮಹಾರಾಷ್ಟ್ರ ರಾಜಕೀಯದ ಮಹಾಪ್ರಹಸನ ಯಾವುದೇ ಅಡ್ಡಿ-ಆತಂಕ ಇಲ್ಲದೇ ಸತತ ಐದನೇ ದಿನಕ್ಕೆ ಕಾಲಿಟ್ಟಿದ್ದು ಯಶಸ್ವೀ ಪ್ರದರ್ಶನ ನೀಡ್ತಾ ಇದೆ. ಸಿಎಂ ಉದ್ಧವ್‌ ಠಾಕ್ರೆಯ ಶಿವಸೇನೆ ಇಂದ ಬಂಡಾಯ ಎದ್ದಿರೋ ರೆಬಲ್‌ ಶಾಸಕರು ತಮ್ಮ ಬಣಕ್ಕೆ ಹೊಸ ಹೆಸರನ್ನೇ ಇಟ್ಕೊಂಡಿದ್ದಾರೆ. ಏಕ್‌ನಾಥ್‌ ಶಿಂಧೆ ನೇತೃತ್ವದ ಸೇನೆಯನ್ನ ಇನ್ಮೇಲೆ ʻಶಿವಸೇನಾ ಬಾಳಾ ಸಾಹೇಬ್‌ ಠಾಕ್ರೆʼ ಅಂತ ಕರೀಬೇಕು ಅಂತ ರೆಬಲ್‌ ಶಾಸಕರು ಅನೌನ್ಸ್‌ ಮಾಡಿದ್ದಾರೆ. ಇದ್ರ ಬೆನ್ನಲ್ಲೇ ಅತ್ತ ರಾಷ್ಟ್ರೀಯ ಕಾರ್ಯಕಾರಣಿ ಸಭೆ ನಡೆಸಿರೋ ಉದ್ಧವ್‌ ಸೇನೆ, ಬಾಳಾ ಸಾಹೇಬ್‌ರ ಹೆಸರನ್ನ ಯಾರು ಬಳಸೋ ಹಾಗಿಲ್ಲ. ಈ ರೀತಿ ಬಳಸಿರೋರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ನಿರ್ಣಯ ಒಂದನ್ನ ಪಾಸ್‌ ಮಾಡಿದೆ. ಜೊತೆಗೆ ಅದನ್ನೂ ಸೇರಿದಂತೆ ಆರು ನಿರ್ಣಯಗಳನ್ನ ಚುನಾವಣಾ ಆಯೋಗಕ್ಕೆ ಕಳಿಸಿಕೊಟ್ಟಿದೆ. ಇನ್ನು ಇದೇ ವೇಳೆ ಉದ್ಧವ್‌ ಠಾಕ್ರೆ, ತಾಕತ್ತಿದ್ರೆ ಏಕನಾಥ್‌ ಶಿಂಧೆ ಅವ್ರಪ್ಪನ್‌ ಹೆಸ್ರು ಬಳಸಿ ರಾಜಕೀಯ ಮಾಡ್ಲಿ ಅಂತ ಕಿಡಿಕಾರಿದ್ದಾರೆ ಎನ್ನಲಾಗಿದೆ. ಇನ್ನು ಇದಕ್ಕೂ ಮೊದಲು 33 ರೆಬಲ್‌ ಶಾಸಕರು ಮಹಾರಾಷ್ಟ್ರ ವಿಧಾನಸಭೆಯ ಡೆಪ್ಯೂಟಿ ಸ್ಪೀಕರ್‌ ವಿರುದ್ಧ ಅವಿಶ್ವಾಸಮತ ನಿರ್ಣಯ ಮಂಡಿಸಿದ್ರು. ಆದ್ರೆ ಇದನ್ನ ಸ್ಪೀಕರ್‌ ಆಫೀಸ್‌ಗೆ ನೇರವಾಗಿ ಕಳಿಸದೇ ಅನಾಮಧೇಯ ಇ-ಮೇಲ್‌ ಐಡಿಯಿಂದ ಕಳಿಸಿದ್ದಕ್ಕೆ ಡೆಪ್ಯುಟಿ ಸ್ಪೀಕರ್‌ ಅದನ್ನ ರಿಜೆಕ್ಟ್‌ ಮಾಡಿದ್ದಾರೆ. ಜೊತೆಗೆ 16 ರೆಬಲ್‌ ಶಾಸಕರನ್ನ ಅನರ್ಹಗೊಳಿಸುವಂತೆ ಉದ್ಧವ್‌ ಸೇನೆ ಮನವಿ ಮಾಡಿದ ಬೆನ್ನಲ್ಲೇ ಡೆಪ್ಯುಟಿ ಸ್ಪೀಕರ್‌ ಅವ್ರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಸೋಮವಾರ ಖುದ್ಧು ಹಾಜಾರಾಗಬೇಕು ಅಂತ ಹೇಳಿದ್ದಾರೆ. ಇನ್ನು ಅತ್ತ ಶಿವಸೇನೆ ಕಾರ್ಯಕರ್ತರು ರೆಬಲ್‌ ಶಾಸಕ ತಾನಾಜಿ ಸಾವಂತ್‌ ಅವ್ರ ಕಚೇರಿ ಮತ್ತು ಏಕನಾಥ್‌ ಶಿಂಧೆ ಮಗ ಸಂಸದ ಶ್ರೀಕಾಂತ್‌ ಶಿಂಧೆ ಕಚೇರಿ ಮೇಲೆ ದಾಳಿ ಮಾಡಿ ‍ಧ್ವಂಸಗೊಳಿಸಿದ್ದಾರೆ ಎನ್ನಲಾಗಿದೆ. ಈ ಬೆನ್ನಲ್ಲೇ ಪುಣೆ ಪೋಲಿಸ್‌ ಹೈ ಅಲರ್ಟ್‌ನಲ್ಲಿದ್ದಾರೆ. ಅತ್ತ ಮುಂಬೈನಲ್ಲೂ ಕೂಡ ಸೆಕ್ಷನ್‌ 144 ಜಾರಿ ಮಾಡಲಾಗಿದೆ. ಇನ್ನು ಇವತ್ತು ಬೆಳಗ್ಗೆ ಟ್ವೀಟ್‌ ಮಾಡಿದ ಏಕನಾಥ್‌ ಶಿಂಧೆ ರಾಜ್ಯ ಸರ್ಕಾರ 16 ಜನರ ಮನೆಗಳಿಗೆ ನೀಡಿದ ಸೆಕ್ಯುರಿಟಿಯನ್ನ ವಾಪಸ್‌ ಪಡೆದಿದೆ. ಇದು ರಾಜಕೀಯ ವೈಷಮ್ಯ ಅಂತ ಕಿಡಿಕಾರಿದ್ದಾರೆ. ಆದ್ರೆ ಸಂಜಯ್‌ ರಾವತ್‌ ಮಾತ್ರ ಇದನ್ನ ಅಲ್ಲಗಳೆದಿದ್ದಾರೆ.

-masthmagaa.com

Contact Us for Advertisement

Leave a Reply