4 ‘ಬೆತ್ತಲೆ’ ಕ್ರೂರಿಗಳು ಅರೆಸ್ಟ್! ಮಣಿಪುರ ಅಗ್ನಿಕುಂಡ!

masthmagaa.com:

ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಬುಡಕಟ್ಟು ಸಮುದಾಯದ ಇಬ್ಬರು ಮಹಿಳೆಯರನ್ನ ಬೆತ್ತಲೆ ಮೆರವಣಿಗೆ ಮಾಡಿದ ಕೇಸ್‌ಗೆ ಸಂಬಂಧಿಸಿದಂತೆ 4 ಆರೋಪಿಗಳನ್ನ ಬಂಧಿಸಲಾಗಿದೆ. ನಿನ್ನೆ ಸಂಜೆ ಹೊತ್ತಿಗೆ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿತ್ತು. ಬಳಿಕ ಕೆಲ ಗಂಟೆಗಳ ನಂತ್ರ ಇನ್ನೂ ಇಬ್ಬರನ್ನ ಬಂಧಿಸಲಾಗಿದೆ ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ. ಬಳಿಕ ಕೋರ್ಟ್‌ ಮುಂದೆ ಹಾಜರು ಪಡಿಸಿದ್ದು, 11 ದಿನಗಳ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶಿಸಲಾಗಿದೆ. ಇತ್ತ ಈ ಅಮಾನವೀಯ ಘಟನೆಯ ಪ್ರಮುಖ ಆರೋಪಿ ಹೀರುಮ್‌ ಹೆರಾದಾಸ್‌ ಮನೆಗೆ ಉದ್ರಿಕ್ತ ಪ್ರತಿಭಟನಾಕಾರರ ಗುಂಪೊಂದು ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದೆ. ಕಳೆದೆರೆಡು ತಿಂಗಳಿಂದ ಸಮುದಾಯಗಳ ನಡುವಿನ ಆಂತರಿಕ ಜಗಳಗಳಿಂದ ಮಣಿಪುರ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಇನ್ನೊಂದ್‌ ಕಡೆ ಬೆತ್ತಲೆ ಮೆರವಣಿಗೆ ಮಾಡಲಾದ ಇಬ್ಬರು ಮಹಿಳೆಯರಲ್ಲಿ ಓರ್ವ ಮಹಿಳೆ ಮಾಜಿ ಯೋಧನ ಪತ್ನಿ ಅಂತ ಗೊತ್ತಾಗಿದೆ. ಈ ಬಗ್ಗೆ ಮಾತಾಡಿರೋ ಮಾಜಿ ಸೈನಿಕ, ಕಾರ್ಗಿಲ್‌ ಯುದ್ಧದಲ್ಲಿ ದೇಶಕ್ಕಾಗಿ ಹೋರಾಡಿದ್ದ ನನಗೆ ಮನೆ, ಹ‍ಳ್ಳಿಯ ಜನರು ಹಾಗೂ ನನ್ನ ಪತ್ನಿಯನ್ನ ರಕ್ಷಣೆ ಮಾಡೋಕೆ ಆಗ್ಲಿಲ್ಲ ಅಂತ ತಮ್ಮ ನೋವನ್ನ ತೋಡಿಕೊಂಡಿದ್ದಾರೆ.

ಇತ್ತ ಮಣಿಪುರ ಆಡಳಿತದಲ್ಲಿ ಭಾರಿ ವೈಫಲ್ಯ ಉಂಟಾಗಿದೆ ಅಂತ ಆರೋಪಿಸಿ ಕಾಂಗ್ರೆಸ್‌ ಸೇರಿದಂತೆ ಹಲವರು ಮಣಿಪುರ ಸಿಎಂ ರಾಜೀನಾಮೆ ನೀಡ್ಬೇಕು ಅಂತ ಆಗ್ರಹಿಸಿದ್ದಾರೆ. ಆದ್ರೆ ಸಿಎಂ ಬದಲಾಯಿಸುವ ಬಗ್ಗೆ ಯಾವುದೇ ಚರ್ಚೆ ಇಲ್ಲ, ಬದಲಿಗೆ ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಣದಲ್ಲಿ ಇಡೋದ್ರ ಕಡೆಗೆ ಗಮನ ಹರಿಸಲಾಗುತ್ತೆ. ಅಲ್ದೆ ಸದ್ಯ ಮಣಿಪುರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವ್ರು ಇಂದು ಬೆಳಗ್ಗೆ ಕುಕಿ ಬುಡಕಟ್ಟು ಗುಂಪಿನ ಜೊತೆಯಲ್ಲಿ ಮಾತನಾಡಿದ್ದಾರೆ. ಜೊತೆಗೆ ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುತ್ತೆ ಅಂತ ಭರವಸೆ ನೀಡಿದ್ದು, ಕೇಂದ್ರ ಸರ್ಕಾರ ಮಣಿಪುರದೊಂದಿಗೆ ನಿರಂತರ ಸಂಪರ್ಕದಲ್ಲಿದೆ ಅಂತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಮತ್ತೊಂದ್‌ ಕಡೆ ಈ ದುಷ್ಕ್ರೃತ್ಯದ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಜೂನ್‌ 12ರಂದೇ ದೂರು ನೀಡಿದ್ದರು ಆಯೋಗ ಯಾವುದೇ ಕ್ರಮ ಕೈಗೊಂಡಿಲ್ಲ ಅಂತ ಆರೋಪಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, ಮಹಿಳೆಯರ ಮೇಲಿನ ದೌರ್ಜನ್ಯದ ಘಟನೆಗಳ ಕುರಿತು ಕ್ರಮ ಕೈಗೊ‍ಳ್ಳುವಂತೆ ಮಣಿಪುರದ ಅಧಿಕಾರಿಗಳನ್ನ ಹಲವು ಬಾರಿ ಸಂಪರ್ಕಿಸಲಾಗಿತ್ತು. ಆದ್ರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ.

ಇತ್ತ ಮಣಿಪುರದ ಹಿಂಸಾಚಾರ ಭಾರತದ ಆಂತರಿಕ ವಿಷಯವಾಗಿದೆ. ಆದ್ರೆ ಅದು ಹೃದಯವಿದ್ರಾವಕ ಅಂತ ಭಾರತದಲ್ಲಿರುವ ಅಮೆರಿಕ ರಾಯಭಾರಿ ಎರಿಕ್‌ ಗಾರ್ಸೆಟ್ಟಿ ಹೇಳಿದ್ದಾರೆ. ಇದೇ ವೇಳೆ ನಾನು ವಿಡಿಯೋ ನೋಡಿಲ್ಲ ಆದ್ರೆ ಇದೇ ಮೊದಲ ಬಾರಿಗೆ ಇದ್ರ ಬಗ್ಗೆ ಕೇಳಿದ್ದು, ನಮ್ಮ ನೆರೆಹೊರೆಯಲ್ಲಾಗಲಿ ಅಥ್ವಾ ಜಗತ್ತಿನಾದ್ಯಂತ ನಾವು ವಾಸಿಸೋ ದೇಶದಲ್ಲಿ ಮನುಷ್ಯರು ಈ ರೀತಿ ನೋವು ಅನುಭವಿಸೋದನ್ನ ನೋಡಿದಾಗೆಲ್ಲಾ ಹೃದಯ ಒಡೆದು ಹೋಗುತ್ತೆ ಅಂತ ಗಾರ್ಸೆಟ್ಟಿ ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನೊಂದ್‌ ಕಡೆ ಮೋದಿಯವರು 2017ರಲ್ಲಿ ಮಣಿಪುರ ಹಿಂಸಾಚಾರದ ಕುರಿತು ಟ್ವೀಟ್ ಮಾಡಿದ್ರು ಅಂತ ಹೇಳಲಾದ ಟ್ವೀಟ್‌ ಒಂದನ್ನ ಆಪ್‌ ಉಲ್ಲೇಖಿಸಿದೆ. ʻಮಣಿಪುರದಲ್ಲಿ ಶಾಂತಿ ಮತ್ತು ಭದ್ರತೆಯನ್ನ ಸ್ಥಾಪಿಸಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ, ಒಂದು ಕ್ಷಣವೂ ಅಧಿಕಾರದಲ್ಲಿರಲು ಸರ್ಕಾರಕ್ಕೆ ಹಕ್ಕಿಲ್ಲ ಮತ್ತು ಆ ಸರ್ಕಾರವನ್ನು ವಜಾಗೊಳಿಸಬೇಕುʼ ಅಂತ ಟ್ವೀಟ್ ಮಾಡಿದ್ದರು. ಈಗ ಮಣಿಪುರ ಸರ್ಕಾರವನ್ನ ವಜಾ ಮಾಡುವ ಸಮಯ ಬಂದಿದೆ. ರಾಜ್ಯಗಳಲ್ಲಿ ಶಾಂತಿ ಸ್ಥಾಪಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿಯೂ ಆಗಿದೆ ಅಂತ ಸಂವಿಧಾನದ 355ನೇ ವಿಧಿ ಹೇಳುತ್ತದೆ ಅಂತ ಆಪ್‌ ಟ್ವೀಟ್‌ ಮಾಡಿದೆ.

-masthmagaa.com

Contact Us for Advertisement

Leave a Reply