ಮಣಿಪುರ ಧಗಭಗ! ಕಂಡಲ್ಲಿ ಗುಂಡಿಕ್ಕಿ ಆದೇಶ! ಇದೇ ಡಬಲ್‌ ಇಂಜಿನ್‌ ಸರ್ಕಾರನಾ ಎಂದ ಕಾಂಗ್ರೆಸ್!

masthmagaa.com:

ಈಶಾನ್ಯ ರಾಜ್ಯ ಮಣಿಪುರದಲ್ಲಿ ಭಾರಿ ಹಿಂಸಾಚಾರ ನಡೆದಿದೆ. ಬುಡಕಟ್ಟು ಜಾತಿ ಅಲ್ಲದ ಮೇಟಿ ಅಥವಾ ಮೀಟಿಸ್ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ವಿರೋಧಿಸಿ ಬುಡಕಟ್ಟು ಗುಂಪುಗಳು ಪ್ರತಿಭಟನೆ ನಡೆಸಿವೆ. ಇದು ಹಿಂಸಾಚಾರಕ್ಕೆ ತಿರುಗಿದ್ದು ವಾಹನಗಳಿಗೆ, ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಪರಿಸ್ಥಿತಿ ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಿದ್ದು ಸೇನೆ ಹಾಗೂ ಅಸ್ಸಾಂ ರೈಫಲ್ಸ್‌ ಪಡೆಯನ್ನ ನಿಯೋಜನೆ ಮಾಡಲಾಗಿದೆ. ಮಣಿಪುರದ ಇಂಫಾಲ್, ಚುರಾಚಂದ್‌ಪುರ ಹಾಗೂ ಕಾಂಗ್‌ಪೋಕ್ಪಿಯಲ್ಲಿ ಹಿಂಸಾಚಾರ ನಡೆದಿದೆ. ಹೀಗಾಗಿ ನಿನ್ನೆ ರಾತ್ರಿಯಿಂದಲೇ ಮಣಿಪುರದ ಎಂಟು ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಅದ್‌ ಮಾತ್ರ ಅಲ್ಲ ಪರಿಸ್ಥಿತಿ ಎಲ್ಲೆಲ್ಲಿ ವಿಕೋಪಕ್ಕೆ ಹೋಗಿದೆಯೋ ಅಲ್ಲೆಲ್ಲಾ ಕಂಡಲ್ಲಿ ಗುಂಡು ಹಾರಿಸಿ ಅಂತ ಕೂಡ ಆದೇಶ ಕೊಡಲಾಗಿದೆ. ಇದಕ್ಕೆ ಅಲ್ಲಿನ ರಾಜ್ಯಪಾಲೆ Anusuiya Uikey ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಇತ್ತ ಮಣಿಪುರ ಸರ್ಕಾರ ರಾಜ್ಯದಲ್ಲಿ 5 ದಿನಗಳ ಕಾಲ ಇಂಟರ್ನೆಟ್ ಸೇವೆಯನ್ನು ಬಂದ್‌ ಮಾಡಿದೆ. ಸೇನೆ ಕೂಡ ಫೀಲ್ಡ್‌ಗಿಳಿದಿದ್ದು ಇದುವರೆಗೂ ಕನಿಷ್ಠ 7,500 ಜನರನ್ನ ಸುರಕ್ಷಿತ ಸ್ಥಳಕ್ಕೆ ಶಿಫ್ಟ್‌ ಮಾಡಲಾಗಿದೆ. ಹೆಚ್ಚಿನ ಭದ್ರತೆಗಾಗಿ ಮತ್ತಷ್ಟು ಸೇನಾಪಡೆಯನ್ನ ಕರೆಸಿಕೊಳ್ಳಲಾಗ್ತಿದ್ದು ಮಣಿಪುರದಾದ್ಯಂತ ಹೈ ಅಲರ್ಟ್‌ ಘೋಷಿಸಲಾಗಿದೆ. ಇತ್ತ ಇಷ್ಟೆಲ್ಲಾ ಬೆಳವಣಿಗೆಗಳು ಆಗ್ತಿದ್ದಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಣಿಪುರ ಸಿಎಂ ಬೈರೆನ್‌ ಸಿಂಗ್‌ಗೆ ಫೋನ್‌ ಮಾಡಿದ್ದಾರೆ. ಎಲ್ಲಾ ರೀತಿಯ ನೆರವು ನೀಡೋದಾಗಿ ಭರವಸೆ ನೀಡಿದ್ದಾರೆ. ಅಂದಹಾಗೆ ಬುಡಕಟ್ಟುಯೇತರ ಮೀಟೀಸ್ ಸಮುದಾಯ ಬುಡಕಟ್ಟು ಪಂಗಡದ ಮಾನ್ಯತೆ ನೀಡಬೇಕು ಅಂತ ಆಗ್ರಹಿಸಿತ್ತು. ಆದ್ರೆ ಬುಡಕಟ್ಟು ಸಮುದಾಯಗಳು ಇದನ್ನ ವಿರೋಧಿಸಿದ್ವು. ಅಲ್ದೇ ಅಖಿಲ ಮಣಿಪುರ ಬುಡಕಟ್ಟು ವಿದ್ಯಾರ್ಥಿ ಒಕ್ಕೂಟ ಬುಧವಾರ ಅಂದ್ರೆ ನಿನ್ನೆ, ‘ಬುಡಕಟ್ಟು ಐಕ್ಯಮತ್ಯ ಮೆರವಣಿಗೆ’ಗೂ ಕರೆ ನೀಡಿತ್ತು. ಸಾವಿರಾರು ಮಂದಿ ಈ ಮೆರವಣಿಗೆಯಲ್ಲಿ ಭಾಗವಹಿಸಿದ್ರು. ಈ ವೇಳೆ ಆದಿವಾಸಿಗಳು ಹಾಗೂ ಬುಡಕಟ್ಟೇತರ ಸಮುದಾಯದ ನಡುವೆ ಗಲಭೆ ನಡೆದಿದೆ. ಇದು ಈಗಾಗಲೇ ಮೂರು ಜಿಲ್ಲೆಗಳಲ್ಲಿ ಹಬ್ಬಿದ್ದು ರಾಜ್ಯದ್ಯಂತ ವಿಸ್ತರಣೆ ಆಗಬಾರದು ಅಂತ ಸೇನೆಯನ್ನ ಕರೆಸಲಾಗಿದೆ. ಸಧ್ಯ ಮಣಿಪುರದಲ್ಲಿ ಆಂತರಿಕ ಸಂಘರ್ಷದ ವಾತವರಣ ಉಂಟಾಗಿದೆ. ಇನ್ನು ಮಣಿಪುರ ಹಿಂಸಾಚಾರ ಕುರಿತಂತೆ ರಾಜ್ಯ ಕಾಂಗ್ರೆಸ್‌ ಘಟಕ ಬಿಜೆಪಿಯನ್ನ ತೀವ್ರ ತರಾಟೆಗೆ ತಗೊಂಡಿದೆ. ಮಣಿಪುರದಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರವಿದೆ. ಆದರೆ ಪ್ರಧಾನಿ ಮತ್ತು ಗೃಹ ಸಚಿವರು ಕರ್ನಾಟಕದಲ್ಲಿ ರೋಡ್ ಷೋ ಮಾಡುತ್ತ ಬ್ಯುಸಿಯಾಗಿದ್ದಾರೆ. ಎಲ್ಲಾ ಗಲಭೆಗಳು ಬಿಜೆಪಿ ಆಡಳಿತದಲ್ಲೇ ನಡೆಯೋದು ಯಾಕೆ ಅಂತ ಪ್ರಶ್ನೆ ಮಾಡಿದೆ. ಈ ಕಡೆ ನಮ್ಮ ರಾಜ್ಯ ಹೊತ್ತಿ ಉರಿಯುತ್ತಿದೆ. ದಯವಿಟ್ಟು ಕಾಪಾಡಿ ಅಂತ ಅಂತಾರಾಷ್ಟ್ರೀಯ ಕುಸ್ತಿಪಟು ಮೇರಿ ಕೋಮ್‌ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply