ಅಯ್ಯೋ! ಹೊಸ ಕೊರೋನ ಅಲೆ! ಮತ್ತೆ ಮಾಸ್ಕ್‌, ಸ್ಯಾನಿಟೈಸರ್ ಕಾಲ!

masthmagaa.com:

2020 ಹಾಗೂ 2021ರಲ್ಲಿ ಕೊರೊನಾದಿಂದ ಕಂಗೆಟ್ಟು ಸ್ಥಿತಿ ಸುಧಾರಿಸ್ತಿರೊ ಹೊತ್ತಲ್ಲಿ ಮತ್ತೆ ಕೊರೊನಾ ಭೀತಿ ಎದುರಾಗಿದೆ. ಚೀನಾ ಹಾಗೂ ಇತರ ದೇಶಗಳಲ್ಲಿ ಕೊರೋನ ಕೇಸ್‌ಗಳು ತೀವ್ರವಾಗಿ ಏರಿಕೆಯಾಗ್ತಿವೆ. ಚೀನಾದಲ್ಲಿ ತಾಂಡವವಾಡ್ತಿರೊ Omicron subvariant BF.7ನ 4 ಪ್ರಕರಣಗಳು ಈಗ ದೇಶದಲ್ಲಿ ವರದಿಯಾಗಿವೆ. ಗುಜರಾತ್‌ನಲ್ಲಿ 2 ಪ್ರಕರಣಗಳು ವರದಿಯಾದ್ರೆ, ಒಡಿಶಾದಲ್ಲಿ ಓಂದು ಪ್ರಕರಣ ದಾಖಲಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಉನ್ನತ ಮಟ್ಟದ ಸಭೆಯನ್ನ ಮಾಡಿ ಹಲವು ಸೂಚನೆಗಳನ್ನ ಬಿಡುಗಡೆ ಮಾಡಿದೆ. ಅದ್ರಲ್ಲಿ ಅತಿ ಹೆಚ್ಚು ಜನ ಇರೋ ಕಡೆಗಳಲ್ಲಿ ಮಾಸ್ಕ್‌ಗಳನ್ನ ಧರಿಸುವಂತೆ ತಿಳಿಸಿದೆ. ಜೊತೆಗೆ ವಾರಕ್ಕೊಮ್ಮೆ ಸಭೆ ನಡೆಸಿ ದೇಶದ ಕೋವಿಡ್‌ ಸ್ಥಿತಿ ಬಗ್ಗೆ ಮಾನಿಟರ್‌ ಮಾಡಲಾಗುವುದು ಅಂತ ತಿಳಿಸಿದೆ. ಇನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರತಿದಿನ ಕೋವಿಡ್‌ ಪಾಸಿಟಿವ್‌ ಬಂದಿರೋ ಸ್ಯಾಂಪಲ್‌ಗಳನ್ನ ಲ್ಯಾಬ್‌ಗೆ ಕಡ್ಡಾಯವಾಗಿ ಕಳಿಸ್ಬೇಕು ಅಂತ ಸರ್ಕಾರ ಹೇಳಿದೆ. ಇತ್ತ ಜನ್ರು ಭಯ ಪಡೋ ಅಗತ್ಯ ಇಲ್ಲ, ಯಾಕಂದ್ರೆ ಭಾರತ ಅತ್ಯುತ್ತಮವಾಗಿ ವ್ಯಾಕ್ಸಿನ್‌ ಕವರೇಜ್‌ ಮಾಡಿದೆ. ಆದ್ರೆ ಸರ್ಕಾರದ ಗೈಡ್‌ಲೈನ್ಸ್‌ ಅನ್ನ ಸರಿಯಾಗಿ ಫಾಲೋ ಮಾಡಿ ಅಂತ ಪುಣೆಯ Serum Institute of India (SII)ದ ಸಿಇಒ ಅದಾರ್‌ ಪೂನವಾಲ ಹೇಳಿದ್ದಾರೆ. ಇತ್ತ ಚೀನಾದಲ್ಲಿ ಕೊರೋನ ಸ್ಫೋಟವಾಗ್ತಿರೋ ಹಿನ್ನೆಲೆಯಲ್ಲಿ ಚೀನಾ ಮತ್ತು ಭಾರತದ ನಡುವಿನ ಎಲ್ಲಾ ತರದ ಪ್ರಯಾಣವನ್ನ ಬ್ಯಾನ್‌ ಮಾಡಿ ಅಂತ ಕಾಂಗ್ರೆಸ್‌ ನಾಯಕ ಮನೀಶ್‌ ತಿವಾರಿ ಆಗ್ರಹಿಸಿದ್ದಾರೆ.

ರಾಜ್ಯದಲ್ಲೂ ಕೋವಿಡ್‌ ಏರಿಕೆ ಆತಂಕ ಸೃಷ್ಟಿಯಾಗಿದ್ದು, ಕೇಂದ್ರ ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದೇನೆ ಹಾಗೂ ಮುಂಜಾಗೃತಾ ಕ್ರಮವಾಗಿ ಸಿಎಂ ನೇತೃತ್ವದಲ್ಲಿ ಸಭೆ ಮಾಡ್ತೇವೆ ಅಂತ ಆರೋಗ್ಯ ಇಲಾಖೆ ಸಚಿವ ಕೆ.ಸುಧಾಕರ್‌ ಹೇಳಿದ್ದಾರೆ. ಸಭೆಯ ನಂತ್ರ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು. ಜೊತೆಗೆ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಹೆಚ್ಚು ನಿಗಾ ವಹಿಸೋಕೆ ಸೂಚನೆ ನೀಡಲಾಗುವುದು ಅಂತ ಸುಧಾಕರ್‌ ತಿಳಿಸಿದ್ದಾರೆ. ಇತ್ತ ಕೋವಿಡ್‌ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರಿನಲ್ಲಿ ಮಾಸ್ಕ್ ಕಡ್ಡಾಯಗೊಳಿಸೋಕೆ ಬಿಬಿಎಂಪಿ ಮುಂದಾಗಿದೆ. ಈ ಬಗ್ಗೆ ಕೋವಿಡ್ ಸಲಹಾ ಸಮಿತಿಗೆ ಈಗಾಗಲೇ ಮನವಿ ಸಲ್ಲಿಸಿರೋದಾಗಿ ಬಿಬಿಎಂಪಿ ಹೇಳಿದೆ.

ಇನ್ನೊಂದ್‌ ಕಡೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೊ ಯಾತ್ರೆಗೂ ಕೊರೊನಾ ಬಿಸಿ ತಟ್ಟಿದೆ. ಕೋವಿಡ್‌ ನಿಯಮಗಳನ್ನ ಫಾಲೋ ಮಾಡಿ ಇಲ್ಲ ಅಂದ್ರೆ ಯಾತ್ರೆಯನ್ನ ನಿಲ್ಲಿಸಿ ಅಂತ ಕೇಂದ್ರ ಆರೋಗ್ಯ ಸಚಿವ ಮಾನ್ಸುಖ್‌ ಮಾಂಡವೀಯ, ರಾಹುಲ್‌ ಗಾಂಧಿಗೆ ಪತ್ರ ಬರೆದಿದ್ದಾರೆ. ಯಾತ್ರೆ ವೇಳೆ ಮಾಸ್ಕ್‌ ಮತ್ತು ಸ್ಯಾನಿಟೈಜರ್‌ ಸೇರಿದಂತೆ ಇತರ ಕೋವಿಡ್‌ ಪ್ರೊಟೊಕಾಲ್‌ಗಳನ್ನ ಕಟ್ಟುನಿಟ್ಟಾಗಿ ಪಾಲಿಸ್ಬೇಕು. ಜೊತೆಗೆ ವ್ಯಾಕ್ಸಿನ್‌ ಹಾಕಿಸಿಕೊಂಡವ್ರಿಗೆ ಮಾತ್ರ ಯಾತ್ರೆಯಲ್ಲಿ ಭಾಗವಹಿಸೋಕೆ ಅನುಮತಿ ಕೊಡ್ಬೇಕು ಅಂತ ಹೇಳಿದ್ದಾರೆ.  ಆದ್ರೆ ಈ ಪತ್ರದ ವಿರುದ್ಧ ಕಾಂಗ್ರೆಸ್‌ ಆಕ್ರೋಶ ಹೊರಹಾಕಿದೆ. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ಜನರಿಂದ ಭಾರೀ ಪ್ರತಿಕ್ರಿಯೆ ಸಿಗುತ್ತಿದೆ. ಬಿಜೆಪಿಗೆ ಇದನ್ನು ಸಹಿಸಿಕೊಳ್ಳಲು ಆಗ್ತಿಲ್ಲ. ಯಾತ್ರೆಗೆ ಅಡ್ಡಿಪಡಿಸಲು ಈ ರೀತಿ ಮಾಡಲಾಗ್ತಿದೆ. ಗುಜರಾತ್ ಚುನಾವಣೆ ವೇಳೆ, ಪ್ರಧಾನಿ ಮೋದಿ ಅವರು ವೋಟ್ ಕೇಳಲು ಮನೆ ಮನೆ ಹೋಗಿದ್ದಾಗ ಮಾಸ್ಕ್ ಧರಿಸಿದ್ರಾ ಅಂತ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಪ್ರಶ್ನಿಸಿದ್ದಾರೆ.

-masthmagaa.com

Contact Us for Advertisement

Leave a Reply