ಮಿಮಿಕ್ರಿ ಘಟನೆಗೆ ಬೇಸರ ವ್ಯಕ್ತ ಪಡಿಸಿದ ಮೋದಿ ಮತ್ತು ಮುರ್ಮು!

masthmagaa.com:

ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಅವ್ರ ಮಿಮಿಕ್ರಿ ಮಾಡಿ ಬಿಜೆಪಿ ಕಣ್ಣು ಕೆಂಪಾಗಿಸಿದ್ದ TMC ಸಂಸದ ಕಲ್ಯಾಣ ಬ್ಯಾನರ್ಜಿ ಇದೀಗ ತಮ್ಮ ನಡೆಯನ್ನ ಸಮರ್ಥಿಸಿಕೊಂಡಿದ್ದಾರೆ. “ಮಿಮಿಕ್ರಿ ಒಂದು ಕಲೆ, ನನಗೆ ಉಪ ರಾಷ್ಟ್ರಪತಿ ಬಗ್ಗೆ ಬಹಳ ಗೌರವವಿದೆ. ನನಗ್ಯಾರನ್ನೂ ಹರ್ಟ್‌ ಮಾಡೋ ಉದ್ದೇಶವಿರಲಿಲ್ಲ, ಅದನ್ನ ಧನಕರ್‌ ವೈಯಕ್ತಿಕವಾಗಿ ತೆಗೆದುಕೊಂಡ್ರೆ ನಾನು ಅಸಹಾಯಕ, ಇದನ್ನ ಯಾರು ಸಿರೀಯಸ್ ಆಗಿ ತಗೋಬೇಡಿ. ನಾನ್‌ ನಟಿಸಿದಂತೆ ಧನಕರ್‌ ರಾಜ್ಯಸಭೆಯಲ್ಲಿ ವರ್ತನೆ ಮಾಡಿದ್ರಾ?” ಅಂತ ಬ್ಯಾನರ್ಜಿ ಪ್ರಶ್ನಿಸಿದ್ದಾರೆ. ಜೊತೆಗೆ ಈ ಹಿಂದೆ ಪ್ರಧಾನಿ ಮೋದಿ ಕೂಡ 2014-19 ಎಲೆಕ್ಷನ್‌ ವೇಳೆ ಸಾಕಷ್ಟು ಮಿಮಿಕ್ರಿ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ. ಇನ್ನೊಂದ್‌ ಕಡೆ TMC ಸಂಸದನ ದುರ್ವರ್ತನೆಗೆ ಸಂಸತ್‌ನಲ್ಲಿ ಆಕ್ಷೇಪ ವ್ಯಕ್ತ ಪಡಿಸಿದ ಕಮಲ ಪಡೆ, ಸುಮಾರು ಒಂದು ಗಂಟೆ ಎದ್ದು ನಿಂತು ಖಂಡಿಸಿದೆ. ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ನಾವು ಘಟನೆಯನ್ನ ತೀವ್ರವಾಗಿ ಖಂಡಿಸ್ತೇವೆ. ಸಾಂವಿಧಾನಿಕ ಹುದ್ದೆಯಲ್ಲಿರುವವರಿಗೆ ನಿರಂತರವಾಗಿ ಅವಮಾನ ಮಾಡಲಾಗ್ತಿದೆ. ಮೋದಿ ಹಿಂದುಳಿದ ವರ್ಗದಿಂದ ಪ್ರಧಾನಿಯಾಗಿದ್ದಕ್ಕೆ, ಬುಡಕಟ್ಟು ಜನಾಂಗದಿಂದ ರಾಷ್ಟಪತಿಯಾಗಿ ದ್ರೌಪದಿ ಮುರ್ಮು ಬಂದ ನಂತ್ರ ಸತತವಾಗಿ ಅಪಹಾಸ್ಯ ಮಾಡುತ್ತಲೇ ಬಂದಿದ್ದಾರೆ. ಇದೀಗ ನೀವೊಬ್ಬ ರೈತರ ಮಗನಾಗಿ ಜಾಟ್‌ ಸಮುದಾಯದಿಂದ ಬಂದ ಧನಕರ್‌ಗೂ ಇದೇ ರೀತಿ ಗೇಲಿ ಮಾಡ್ತಿದ್ದಾರೆ. ಈ ರೀತಿ ಸಂವಿಧಾನಿಕ ಹುದ್ದೆಯಲ್ಲಿರುವವರಿಗೆ ಅವಮಾನ ಮಾಡೋದನ್ನ ನಾವ್‌ ಸಹಿಸಲ್ಲ ಅಂತ ವಿರೋಧ ಪಕ್ಷಗಳ ವಿರುದ್ಧ ಜೋಶಿ ಕಿಡಿಕಾರಿದ್ದಾರೆ.

ಮಂಗಳವಾರ ಸಂಸತ್‌ ಆವರಣದಲ್ಲಿ ಉಪ ರಾಷ್ಟ್ರಪತಿ ಜಗದೀಪ ಧನಕರ್‌ ಬಗ್ಗೆ ಮಿಮಿಕ್ರಿ ಮಾಡಿರೋ ಘಟನೆಗೆ ಪ್ರಧಾನಿ ಮೋದಿ, ರಾಷ್ಟ್ರಪತಿ ಮುರ್ಮು ಬೇಸರ ವ್ಯಕ್ತಪಡಿಸಿದ್ದಾರೆ. ಈ ಘಟನೆ ಬಗ್ಗೆ ಬುಧವಾರ ಉಪ ರಾಷ್ಟ್ರಪತಿಗೆ ಕರೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ ಸಂಸತ್‌ನಲ್ಲಿ ಕೆಲವು ಸಂಸದರ ವರ್ತನೆಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡ ಉಪ ರಾಷ್ಟ್ರಪತಿ ಧನಕರ್‌, “ಈ ಘಟನೆ ಬಗ್ಗೆ ಪ್ರಧಾನಿ ಮೋದಿ ನನಗೆ ಕರೆ ಮಾಡಿದ್ರು, ಸಂಸತ್‌ನಲ್ಲಿ ಕೆಲ ಸಂಸದರ ದುರ್ವರ್ತನೆಗೆ ಅವ್ರು ಬೇಸರ ವ್ಯಕ್ತ ಪಡಿಸಿದ್ದಾರೆ. ಈ ತರಹದ ಗೇಲಿಗಳನ್ನ ಮೋದಿ ಕಳೆದ 20 ವರ್ಷಗಳಿಂದ ಅನುಭವಿಸುತ್ತಿದ್ದಾರಂತೆ. ಆದ್ರೆ ಈ ಘಟನೆ ಪಾರ್ಲಿಮೆಂಟ್‌ ಹಾಗೂ ಅದರ ಆವರಣದಲ್ಲಿ ಆಗಬಾರದಿತ್ತು. ಅದು ಉಪ ರಾಷ್ಟ್ರಪತಿ ಬಗ್ಗೆ ಅಪಹಾಸ್ಯ ಮಾಡಿರೋದು ದುರ್ದೈವ ಎಂದು ಘಟನೆ ಕುರಿತು ಮೋದಿ ವಿಷಾದ ವ್ಯಕ್ತ ಪಡಿಸಿದ್ದಾರೆ ಅಂತ ಧನಕರ್‌ ತಿಳಿಸಿದ್ದಾರೆ. ಆದ್ರೆ ನಾನು ನನ್ನ ಸಾಂವಿಧಾನಿಕ ಹುದ್ದೆಯನ್ನ ಚಾಚು ತಪ್ಪದೇ ಪಾಲಿಸ್ತೇನೆ, ಈ ರೀತಿಯ ಘಟನೆಗಳು ನನ್ನ ಕಾರ್ಯಕ್ಕೆ ಅಡ್ಡಿಯಾಗೋಕೆ ಸಾಧ್ಯವಿಲ್ಲವೆಂದು ಪ್ರಧಾನಿ ಮೋದಿಯವ್ರಿಗೆ ಹೇಳಿದ್ದೇನೆ ಅಂತ ಧನಕರ್‌ ಹೇಳಿದ್ದಾರೆ. ಘಟನೆ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದು, ಸಂಸತ್‌ ಆವರಣದಲ್ಲಿ ಉಪ ರಾಷ್ಟ್ರಪತಿಗೆ ಈ ರೀತಿ ಅವಮಾನ ಕಂಡು ಮನಸ್ಸಿಗೆ ಬೇಸರವಾಯ್ತು ಅಂತ ತಿಳಿಸಿದ್ದಾರೆ.

ಸಂಸತ್‌ನ ಭದ್ರತಾ ಲೋಪವನ್ನ ಖಂಡಿಸಿ ವಿರೋಧ ಪಕ್ಷಗಳ ಸಂಸದರು ಕಲಾಪಕ್ಕೆ ಅಡ್ಡಿ ಮಾಡಿದ ವಿಚಾರದಲ್ಲಿ ಬುಧವಾರ ಮತ್ತೆ ಇಬ್ಬರು ಸಂಸದರನ್ನ ಸ್ಫೀಕರ್‌ ಅಮಾನತು ಮಾಡಿದ್ದಾರೆ. ಈ ಮೂಲಕ ಸಂಸತ್‌ನ ಚಳಿಗಾಲದ ಅಧೀವೇಶನದಿಂದ ಸಸ್ಪೆಂಡ್‌ ಆದ ಸಂಸದರ ಸಂಖ್ಯೆ 143ಕ್ಕೆ ಏರಿದೆ.

-masthmagaa.com

Contact Us for Advertisement

Leave a Reply