ಮಹತ್ವ ಪಡೆದ ನೇಹಾ ಕೊಲೆ ಕೇಸ್:‌ ಗೃಹ ಸಚಿವರಿಗೆ ತಟ್ಟಿದ ಪ್ರತಿಭಟನೆ ಬಿಸಿ!

masthmagaa.com:

ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣ ರಾಜ್ಯದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ. ನೇಹಾ ಹತ್ಯೆ ಖಂಡಿಸಿ ರಾಜ್ಯದ ಹಲವು ಕಡೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಫಯಾಜ್‌ ಹುಟ್ಟೂರು ಸವದತ್ತಿ ತಾಲೂಕಿನ ಮುನವಳ್ಳಿಯಲ್ಲೂ ಸ್ವಯಂ ಪ್ರೇರಿತ ಬಂದ್‌ ಘೋಷಿಸಿಲಾಗಿದ್ದು, ಅಂಗಡಿ ಮುಂಗಟ್ಟುಗಳನ್ನ ಮುಚ್ಚಿ ಪ್ರತಿಭಟನೆಗೆ ವ್ಯಾಪಾರಿಗಳು ಕೂಡ ಬೆಂಬಲ ಸೂಚಿಸಿದ್ದಾರೆ. ಇನ್ನು ಹುಬ್ಬಳ್ಳಿಯಲ್ಲಿ ದಿಂಗಾಲೇಶ್ವರ ಶ್ರೀ ನೇತೃತ್ವದಲ್ಲಿ ಮಠಾಧೀಶರು ಕೂಡ ಧರಣಿ ನಡೆಸಿದ್ದಾರೆ. ಹಾಗೇ ನೇಹಾ ಹತ್ಯೆ ಖಂಡಿಸಿ ಆರೋಪಿ ಫಯಾಜ್‌ನನ್ನ ಗಲ್ಲಿಗೇರಿಸುವಂತೆ ಬೆಂಗಳೂರು, ಉಡುಪಿ, ಕಲಬುರಗಿ, ಯಾದಗಿರಿ, ವಿಜಯಪುರ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಎಬಿವಿಪಿ, ಬಿಜೆಪಿ ಸೇರಿದಂತೆ ಹಲವು ಸಂಘಟನೆಗಳು ಭಾರಿ ಪ್ರತಿಭಟನೆಗಳು ನಡೆಸಿವೆ. ಇನ್ನೊಂದು ಕಡೆ ತನಿಖೆಯಲ್ಲಿ ಈ ಕೇಸ್‌ನ ದಿಕ್ಕು ತಪ್ಪಿಸೊ ಕೆಲ್ಸ ನಡಿತಿದೆ ಅಂತ ಮೃತ ನೇಹಾಳ ತಂದೆ ನಿರಂಜನ್‌ ಗಂಭೀರ ಆರೋಪ ಮಾಡಿದಾರೆ. ʻಅಲ್ದೆ ಮುಂದಿನ ದಿನಗಳಲ್ಲಿ ನಮಗೆ ನ್ಯಾಯ ಸಿಗದೇ ಹೋದ್ರೆ. ಇದಕ್ಕೆಲ್ಲ ಸಿಎಂ, ಸರ್ಕಾರವೇ ಜವಾಬ್ದಾರಿ, ನಾವು ಸಿಎಂ ಹಾಗೂ ಸರ್ಕಾರದ ವಿರುದ್ದ ಡೆಟ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ತೀವಿ ಅಂತ ಹೇಳಿದ್ದಾರೆ. ಜೊತೆಗೆ ನೇಹಾ ಕೊಲೆ ವಿಚಾರವಾಗಿ ನನಗೆ ಡಿಸಿಎಂ ಡಿಕೆ ಶಿವಕುಮಾರ್‌ ಅವ್ರು ಕರೆ ಮಾಡಿದ್ರು. ಆದ್ರೆ ನನಗೆ ಅವ್ರ ಜೊತೆ ಮಾತನಾಡಲು ಸಾಧ್ಯವಾಗ್ಲಿಲ್ಲ ಅಂತ ನಿರಂಜನ್‌ ಹೇಳಿದ್ದಾರೆ. ಇನ್ನು ಫಯಾಜ್‌ ವಿರುದ್ದ ನೇಹಾ ತಂದೆ ಎಫ್‌ಐಆರ್‌ ಕೂಡ ದಾಖಲಿಸಿದ್ದಾರೆ. ಅದರಲ್ಲಿ ʻʻಫಯಾಜ್ ನಮ್ಮ ಮಗಳ ಸಹಪಾಠಿ. ನನ್ನ ಮಗಳನ್ನು ಪ್ರೀತಿ ಮಾಡುವಂತೆ ಆತ ಬಲವಂತ ಮಾಡುತ್ತಿದ್ದ. ಅಲ್ಲದೇ ಮದುವೆ ಮಾಡಿಕೊಡುವಂತೆ ನಮ್ಮ ಕುಟುಂಬಸ್ಥರಿಗೂ ಪದೇ ಪದೇ ದೂರವಾಣಿ ಕರೆ ಮಾಡಿ ಕೇಳುತ್ತಿದ್ದ. ಆದ್ರೆ ನಮ್ಮ ಮನೆಯವರು ನಮ್ಮ ಮಗಳು ನಿನ್ನನ್ನು ಇಷ್ಟಪಡುತ್ತಿಲ್ಲ. ಅವಳು ಹೆಚ್ಚಿನ ವ್ಯಾಸಂಗ ಮಾಡಬೇಕು ಅಂದುಕೊಂಡಿದ್ದಾಳೆ ಅಂತ ಹೇಳ್ತಿದ್ರು. ಇದರಿಂದ ಹತಾಷೆಗೊಂಡ ಫಯಾಜ್ ಇದೇ ತಿಂಗಳ 18ರಂದು ಹತ್ಯೆ ಮಾಡಿದ್ದಾನೆ ಅಂತ ಹೇಳಿಕೆ ದಾಖಲಿಸಿದ್ದಾರೆ.

ಇನ್ನು ಘಟನೆ ಕುರಿತು ಫಯಾಜ್‌ ತಂದೆ ಬಾಬಾಸಾಹೇಬ್‌ ಮಾತನಾಡಿ, ಜಗತ್ತಿನಲ್ಲಿ ಅತ್ಯಂತ ಪವಿತ್ರವಾದ ದೇಶ ನಮ್ಮದು, ಇಂತಹ ನಾಡಲ್ಲಿ ನನ್ನ ಮಗನಿಂದ ಒಂದು ಕೆಟ್ಟ ಘಟನೆ ನಡೆದಿದೆ. ನಾಡಿನ ಜನತೆಯಲ್ಲಿ ಕೈ ಮುಗಿದು ಕ್ಷಮೆಯಾಚನೆ ಮಾಡ್ತೇನೆ. ಒಂದು ವರ್ಷದ ಹಿಂದೆ ನೇಹಾಳ ತಂದೆ ನನಗೆ ಎರಡು ಸಲ ಕರೆ ಮಾಡಿ ನಿಮ್ಮ ಮಗ ನಮ್ಮ ಮಗಳಿಗೆ ತೊಂದರೆ ಕೊಡ್ತಿದ್ದಾನೆ ಅವ್ನಿಗೆ ಬುದ್ದಿ ಹೇಳಿ ಅಂತೇಳಿದ್ರು. ಪಾಪ ನೇಹಾಳ ಮನೆಯವ್ರು ತುಂಬಾ ಒ‍ಳ್ಳೆಯವ್ರು. ಆದ್ರೆ ನಮ್ಮಿಬ್ಬರದು ಲವ್‌ ಇತ್ತು ಅಂತೇಳಿ ನೇಹಾಳ ಜೊತೆ ನನ್ನ ಮದುವೆ ಮಾಡ್ಸು ಅಂತ ನನ್ನ ಮಗ ಹೇಳಿದ್ದ. ಆದ್ರೆ ನಾನು ಆಗಲ್ಲ ಅಂತೇಳಿದ್ದೆ. ಇದಲ್ಲದೆ ಕಳೆದೆರಡು ವರ್ಷದಿಂದ ನನ್ನ ಮಗ ನನ್ನ ಜೊತೆ ಇರಲಿಲ್ಲ. ನನ್ನ ಪತ್ನಿ ಜೊತೆ ನನ್ನ ಮಗ-ಮಗಳು ಇಬ್ರು ಇದ್ರು. ಆರು ವರ್ಷದಿಂದ ನನ್ನ ದಾಂಪತ್ಯ ಜೀವನ ಸರಿಯಿಲ್ಲದ್ದಕ್ಕೆ ನಾನು ನನ್ನ ತೋಟದ ಮನೆಯಲ್ಲಿದ್ದಿನಿ ಅಂತ ಫಯಾಜ್‌ ತಂದೆ ಹೇಳಿದ್ದಾರೆ. ಅತ್ತ ಫಯಾಜ್‌ ತಾಯಿ ಕೂಡ ಈ ಕುರಿತು ಮಾತಾಡಿದ್ದಾರೆ. ನನ್ನ ಮಗ ಬಾಡಿ ಬಿಲ್ಡಿಂಗ್‌ನಲ್ಲಿ ಯುನಿವರ್ಸಿಟಿ ಬ್ಲ್ಯೂ ಆಗಿದ್ದ. ನನ್ನ ಮಗ ಯಾವ ಹುಡುಗಿ ಸಹವಾಸಕ್ಕೂ ಹೋಗ್ತಿರಲಿಲ್ಲ. ಯಾವ ಹುಡುಗಿ ಜೊತೆನೂ ಮಾತಾಡ್ತಿರಲಿಲ್ಲ. ಆದ್ರೆ ಒಂದ್ಸಲ ಕಾಲೇಜ್‌ ಕ್ಯಾಂಟೀನ್‌ನಲ್ಲಿ ಫಯಾಜ್‌ ಕುಳಿತಾಗ ಆ ಮಗು ನೇಹಾ ಬಂದು ನನ್ನ ಮಗನ ಹತ್ರ ಪೋನ್‌ ನಂಬರ್‌ ತಗೊಂದಿದ್ಳು. ಫಯಾಜ್‌ ಕೂಡ ಮಮ್ಮಿ ನಾನು ಬಾಡಿ ಬಿಲ್ಡಿಂಗ್‌ ಮಾಡಿದಾಗಿನಿಂದ ನನಗೆ ಹೆಚ್ಚೆಚ್ಚು ಹುಡುಗಿರು ಫ್ಯಾನ್ಸ್‌ ಆಗಿದ್ದಾರೆ. ಅದ್ರಲ್ಲೂ ನೇಹಾ ಅನ್ನೊ ಹುಡುಗಿ ನನ್ನ ತುಂಬಾ ಹಚ್ಕೊಂಡ ಬಿಟ್ಟಿದ್ದಾಳೆ. ಅವ್ಳು ನನ್ನ ತುಂಬಾ ಲೈಕ್‌ ಮಾಡ್ತಾಳೆ, ಲವ್‌ ಮಾಡ್ತಾಳೆ ಅಂತ ಫಯಾಜ್‌ ಹೇಳಿದ್ದ. ಅಲ್ದೇ ಇದು ಒನ್‌ ಸೈಡ್‌ ಲವ್‌ ಅಲ್ಲ. ಬದಲಿಗೆ ಇಬ್ಬರಲ್ಲೂ ಲವ್‌ ಇತ್ತು ಅಂತ ಮುಮ್ತಾಜ್‌ ಹೇಳಿದ್ದಾರೆ. ಇನ್ನು ನೇಹಾ ತಾಯಿ ಇದಕ್ಕೆ ರಿಯಾಕ್ಟ್‌ ಮಾಡಿದ್ದಾರೆ. ನನ್ನ ಮಗಳು ನೇಹಾ ಹೊಲಸು ಕೆಲ್ಸ ಮಾಡಲ್ಲ. ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗಬೇಕೆಂದ್ರೆ ಅವ್ನು ಬದುಕಬಾರ್ದು. ಕೊಲೆ ಮಾಡಿದವನನ್ನ ಜನರ ಕೈಗೆ ಕೊಡಿ. ಕಾಲೇಜಿಗೆ ಮೂರು ಗೇಟ್‌ ಇದೆ. ಯಾರಾದ್ರೂ ಸಹ ಬರ್ತಾರೆ. ಸೊ ನನ್ನ ಮುಂದೆಯೇ ನನ್ನ ಮಗಳನ್ನ ಕೊಲೆ ಮಾಡಲಾಗಿದೆ. ಯಾರ ಕ್ಷಮೆ ತಗೊಂಡು ನಾನೇನ್‌ ಮಾಡ್ಲಿ ಅಂತ ನೇಹಾ ತಾಯಿ ಅಳಲು ತೊಡ್ಕೊಂಡಿದ್ದಾರೆ.

ಇನ್ನು ಆರೋಪಿ ಫಯಾಜ್‌ ಹಿಸ್ಟರಿ ಕುರಿತು ಕೂಡ ಒಂದಷ್ಟು ಮಾಹಿತಿಗಳು ಬಯಲಾಗಿವೆ. 3 ತಿಂಗಳ ಹಿಂದಷ್ಟೇ ಆಸ್ತಿ ವಿಚಾರವಾಗಿ ತನ್ನ ತಂದೆ ಜೊತೆಗೇ ಆರೋಪಿ ಫಯಾಜ್ ಗಲಾಟೆ ಮಾಡ್ಕೊಂಡು ಹಲ್ಲೆಗೂ ಯತ್ನಿಸಿದ್ದ ಅಂತ ಗೊತ್ತಾಗಿದೆ. ಹೀಗಾಗಿ ಬಾಬಾಸಾಹೇಬ್‌ ಅವ್ರು ಪೋಲಿಸ್‌ ಠಾಣೆ ಮೆಟ್ಟಿಲೇರಿದ್ರು. ಆಗ ಮುನವಳ್ಳಿ PSI ಆನಂದ್ ಅವ್ರು ಫಯಾಜ್‌ಗೆ ವಾರ್ನ್ ಮಾಡಿ ಮುಚ್ಚಳಿಕೆ ಪತ್ರ ಬರ್ಸೊಂಡು ಕಳುಹಿಸಿದ್ರು ಅಂತ ಮಾಹಿತಿಗಳು ಬರ್ತಿವೆ. ಇನ್ನು ತಾನು ಮದುವೆ ಮಾಡ್ಕೊಳ್ಳೊ ವಿಚಾರವಾಗಿ ನೇಹಾ ತನ್ನ ಸಂಬಂಧಿಕ ಸಹೋದರಿಯೊಬ್ಬರ ಜೊತೆ ವಾಟ್ಸಾಪ್‌ನಲ್ಲಿ ಚಾಟ್‌ ನಡೆಸಿದ್ದಾರೆ ಅನ್ನೋ ಆರೋಪಗಳನ್ನ ಮಾಡಲಾಗ್ತಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಒಂಷ್ಟು ಚಾಟ್‌ಗಳು ವೈರಲ್‌ ಆಗಿದ್ದು, ಅದು ಫಯಾಜ್‌ ವಿಚಾರವಾಗಿಯೇ ಚಾಟ್‌ ಮಾಡಿದ್ದಾರೆ ಅಂತ ಆರೋಪ ಕೇಳಿ ಬಂದಿದೆ. ಇನ್ನು ನೇಹಾ ಲವ್‌ ಮಾಡಿ ಅವೈಡ್‌ ಮಾಡಿದ್ದಕ್ಕೆ ಕೊಲೆಯಾಗಿದೆ ಅಂತೇಳಿದ್ದ ಗೃಹ ಸಚಿವ ಜಿ ಪರಮೇಶ್ವರ್ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ನಾವು ಬೇಜಬಾಬ್ದಾರಿ ಹೇಳಿಕೆ ನೀಡಿಲ್ಲ, ನಮಗೆ ಬಂದ ವರದಿಯನ್ನ ನಾವ್‌ ತಿಳಿಸಿದ್ದೇವೆ ಅಷ್ಟೇ. ತನಿಖೆಯಿಂದ ಸತ್ಯಾ ಸತ್ಯತೆ ಹೊರ ಬೀಳುತ್ತೆ. ನನ್ನ ಹೇಳಿಕೆಯಿಂದ ನೇಹಾ ತಂದೆ-ತಾಯಿಗೆ ನೋವಾಗಿದ್ರೆ ನಾನು ವಿಷಾದ ವ್ಯಕ್ತ ಪಡಿಸ್ತೀನಿ. ಆದ್ರೆ ಸತ್ಯವನ್ನ ಯಾರು ಮರೆಮಾಚೊಕೆ ಆಗಲ್ಲ ಅಂತ ಹೇಳಿದ್ದಾರೆ. ಇನ್ನು ಅದಕ್ಕೂ ಮುಂಚೆ ಪರಮೇಶ್ವರ್‌ ಅವರ ಹೇಳಿಕೆ ಖಂಡಿಸಿ ʻʻ ಅವ್ರ ಬೆಂಗಳೂರಿನ ಸದಾಶಿವನಗರ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ರು. ಅದಕ್ಕೂ ಪ್ರತಿಕ್ರಿಯಿಸಿದ ಗೃಹ ಸಚಿವರು, ABVP, BJPಯವ್ರಿಗೆ ಹತ್ಯೆ ಬಗ್ಗೆ ಸತ್ಯಾ ಸತ್ಯತೆ ಗೊತ್ತಿಲ್ಲ. ಬಿಜೆಪಿಯವ್ರು ರಾಜಕೀಯ ಮಾಡಲು ಹೊರಟಿದ್ದಾರೆ ಅಂತ ಹೇಳಿದ್ದಾರೆ.

ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಮಾತನಾಡಿ, ನಾನು ನೇಹಾಳ ಹತ್ಯೆಯನ್ನ ತೀವ್ರವಾಗಿ ಖಂಡಿಸ್ತೀನಿ. ಘಟನೆ ನಡೆದ ಕೂಡಲೇ ತಪ್ಪಿತಸ್ಥನನ್ನ ಅರೆಸ್ಟ್‌ ಮಾಡಿದ್ದೇವೆ. ಇದು ಲವ್ ಜಿಹಾದ್ ಅಲ್ಲ ಅಂತ ಇಂಪಾರ್ಟೆಂಟ್‌ ಸ್ಟೇಟ್‌ಮೆಂಟ್‌ ಕೊಟ್ಟಿದ್ದಾರೆ. ಅಲ್ದೆ ತನಿಖೆಯನ್ನ ಸಿರಿಯಸ್‌ ಆಗಿ ಮಾಡಿ ತಪ್ಪಿತಸ್ಥನಿಗೆ ಉಗ್ರವಾದ ಶಿಕ್ಷೆಯನ್ನ ಕೊಡಲಿಕ್ಕೆ ಪ್ರಯತ್ನ ಮಾಡ್ತಿವಿ ಅಂತೇಳಿದ್ದಾರೆ. ಡಿಸಿಎಂ ಡಿಕೆ ಕೂಡ ʻಯಾರೇ ತಪ್ಪು ಮಾಡಿದ್ರೂ ಒದ್ದು ಒಳಗಾಕ್ತೀವಿ. ಯಾರ ಮೇಲೆಯೂ ಕರುಣೆ ಇಲ್ಲ ಅಂತ ಹೇಳಿದ್ದಾರೆ. ಒಟ್ನಲ್ಲಿ ಇಡೀ ಪ್ರಕರಣ ರಾಜ್ಯ ಸರ್ಕಾರದ ವಿರುದ್ದ ಆಕ್ರೊಶ ಹೇಳುವಂತೆ ಮಾಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಇನ್ನು ನೇಹಾ ಹತ್ಯೆ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಪ್ರತಿಕ್ರಿಯೆ ಕೊಟ್ಟಿದ್ದಾರೆ. ʻʻಕಾಂಗ್ರೆಸ್‌ ಪಕ್ಷದ ಕಾರ್ಪೋರೇಟರ್‌ಗೆ ಸರಿಯಾದ ರಕ್ಷಣೆ ನೀಡದ ಈ ಇಬ್ಬರು ಮಹಾನುಭಾವರು ರಾಜ್ಯಕ್ಕೆ ಸರಿಯಾದ ರಕ್ಷಣೆ ಕೊಡ್ತಾರಾ? ಅಂತ ಪ್ರಶ್ನಿಸಿದ್ದಾರೆ. ಇನ್ನು ನೇಹಾ ಪಾಲಕರ ಮನೆಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ,‌ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್‌ ಯತ್ನಾಳ್‌, ಅರವಿಂದ್‌ ಬೆಲ್ಲದ್‌ ಸೇರಿದಂತೆ ಹಲವು ರಾಜಕೀಯ ನಾಯಕರು, ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply