ನಾಳೆ ಕಂಠೀರವ ಸ್ಟೇಡಿಯಂನಲ್ಲಿ ಸಿಎಂ ಪದಗ್ರಹಣ! ಬರಲಿರುವ ಎಲ್ಲಾ ಮುಖ್ಯಮಂತ್ರಿಗಳಿಗೆ Z+ ಭದ್ರತೆ!

masthmagaa.com:

5 ದಿನಗಳ ನಿರಂತರ ಹಗ್ಗ-ಜಗ್ಗಾಟದ ನಂತರ ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್‌ ನಾಳೆ ಅದ್ದೂರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಈ ಸಮಾರಂಭ ನಡೆಯಲಿದ್ದು, ಭರ್ಜರಿ ತಯಾರಿ ನಡೆಯುತ್ತಿದೆ. ನಿಯೋಜಿತ ಡಿಸಿಎಂ ಡಿಕೆ ಶಿವಕುಮಾರ್‌ ಇಂದು ಕಂಠೀರವ ಸ್ಟೇಡಿಯಂಗೆ ಆಗಮಿಸಿ ಕಾರ್ಯಕ್ರಮದ ತ ಯಾರಿಯನ್ನ ಖುದ್ದು ಪರಿಶೀಲಿಸಿದ್ದಾರೆ. ಜೊತೆಗೆ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲ ಕಾರ್ಯಕರ್ತರು ಆಗಮಿಸುವಂತೆ ಮಾಧ್ಯಮಗಳ ಮೂಲಕ ಆಹ್ವಾನ ನೀಡಿದ್ದಾರೆ. ಇದೇ ವೇಳೆ JDS ಹಾಗೂ BJP ಮುಖಂಡರಿಗೆ ಕೂಡ ಆಹ್ವಾನ ನೀಡಿದ್ದು, ಇದು ಪಕ್ಷಾತೀತವಾದ ಕಾರ್ಯಕ್ರಮ. ಸರ್ಕಾರದ ಕಾರ್ಯಕ್ರಮ, ನೀವು ಕೂಡ ಸರ್ಕಾರದ ಭಾಗವಾಗಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಅಂತ ಮನವಿ ಮಾಡಿದ್ದಾರೆ. ಇನ್ನು ರಾಜ್ಯದ ಕಾರ್ಯಕ್ರಮದಲ್ಲಿ ವಿವಿಧ 8 ರಾಜ್ಯಗಳ ಸಿಎಂಗಳಿಗೆ ಆಮಂತ್ರಣ ನೀಡಲಾಗಿದೆ. ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್, ಹಿಮಾಚಲ ಪ್ರದೇಶ ಸಿಎಂ ಸುಖ್‌ವಿಂದರ್ ಸಿಂಗ್ ಸುಖು, ಛತ್ತೀಸ್​​​​ಗಢ ಸಿಎಂ ಭೂಪೇಶ್ ಬಘೇಲ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಿಹಾರ ಸಿಎಂ ನಿತೀಶ್​ ಕುಮಾರ್, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್, ಪುದುಚೆರಿ ಸಿಎಂ ರಂಗಸ್ವಾಮಿ, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಮತ್ತು NCP ಮುಖ್ಯಸ್ಥ ಶರದ್​​ ಪವಾರ್​ ಅವ್ರಿಗೆ ಆಮಂತ್ರಣ ನೀಡಲಾಗಿದೆ. ಇನ್ನು ಇವರಿಗೆಲ್ಲ ನಾಳೆಯ ಕಾರ್ಯಕ್ರಮದಲ್ಲಿ Z+ ಭದ್ರತೆ ಒದಗಿಸಲಾಗ್ತಿದೆ. ಆದ್ರೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗ್ತಿಲ್ಲ. ಈ ವಿಷಯವನ್ನ ಕಾಂಗ್ರೆಸ್‌ ನಾಯಕ ಡೆರೇಕ್ ಒಬ್ರಿಯಾನ್ ತಿಳಿಸಿದ್ದಾರೆ. ಮಮತಾ ಬ್ಯಾನರ್ಜಿ ಅವರ ಬದಲಿಗೆ ಪಕ್ಷದ ನಾಯಕ ಕಾಕೋಲಿ ಘೋಷ್ ದಸ್ತಿದಾರ್ ಆಗಮಿಸುತ್ತಿದ್ದಾರೆ ಅಂತ ಹೇಳಿದ್ದಾರೆ. ಇನ್ನು ತೆಲಂಗಾಣ ಸಿಎಂ ಕೆಸಿಆರ್, ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌, ಕೇರಳ, ಆಂಧ್ರಪ್ರದೇಶ ಸಿಎಂಗಳಿಗೆ ಆಮಂತ್ರಣ ಕಳಿಸಿಲ್ಲ ಅಂತ ಮಾಹಿತಿ ಲಭ್ಯವಾಗಿದೆ. ಕೆಸಿಆರ್ ಗೆ ಕೇವಲ ಬಾಯಿಮಾತಿನ ಆಮಂತ್ರಣ ಕೊಟ್ಟಿದ್ದಾರೆ. ಅಫಿಶಿಯಲ್ ಇನ್ವಿಟೇಶನ್ ಕೊಟ್ಟಿಲ್ಲ ಅಂತಲೂ ಹೇಳಲಾಗ್ತಿದೆ. ಇದೆ ವೇಳೆ ಈ ಸಮಾರಂಭಕ್ಕೆ ವರುಣ ಅಡ್ಡಿಯಾಗುವ ಸಾಧ್ಯತೆ ಇದೆ. ಬಿಸಿಲಿನಿಂದ ಕಂಗೆಟ್ಟಿರುವ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಶನಿವಾರ ಮತ್ತು ಭಾನುವಾರ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

-masthmagaa.com

Contact Us for Advertisement

Leave a Reply