ಈಗ ʻಪ್ರೈಮ್‌ ಮಿನಿಸ್ಟರ್‌ ಆಫ್‌ ಭಾರತʼ! ಬದಲಾಯ್ತಾ ದೇಶದ ಹೆಸರು?

masthmagaa.com:

ದೇಶದ ಹೆಸರನ್ನ ಇಂಡಿಯಾ ಬದಲು ಭಾರತ ಅಂತ ಮಾತ್ರ ಕರೆಯಲು ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತರಲಿದ್ಯಾ ಅಂತ ಹುಟ್ಕೊಂಡಿರುವ ಚರ್ಚೆ ಮುಂದುವರೆದಿದೆ. ನಿನ್ನೆ ಪ್ರೆಸಿಡೆಂಟ್‌ ಆಫ್‌ ಭಾರತದಂತೆ ಇಂದು ಕೂಡ ಕೇಂದ್ರ ಸರ್ಕಾರ ʻಪ್ರೈಮ್‌ ಮಿನಿಸ್ಟರ್‌ ಆಫ್‌ ಭಾರತ್‌ʼ ಅಂತ ಬಳಿಸಿದೆ. ಇದು ಈಗ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌, ಇಂಡಿಯಾ ಅಂದ್ರೆ ಭಾರತ, ಅದು ಸಂವಿಧಾನದಲ್ಲೇ ಇದೆ. ಹೀಗಾಗಿ ಅದೇ ರೀತಿ ಎಲ್ಲರೂ ಕರೆಯಬೇಕು ಅಂತ ನಾನು ಮನವಿ ಮಾಡ್ತೀನಿ ಅಂತ ಹೇಳಿದ್ದಾರೆ. ಇದೇ ವೇಳೆ ಕಳೆದ ಕೆಲವು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ವಸಾಹತುಶಾಹಿ ಹೆಸರುಗಳನ್ನ ಬದಲಾಯಿಸುವ ಮೂಲಕ ಬ್ರಿಟಿಷ್‌ ಆಳ್ವಿಕೆಯ ದೀರ್ಘಕಾಲದ ಚಿಹ್ನೆಗಳನ್ನ ತೆಗೆದುಹಾಕಲು ಕೆಲಸ ಮಾಡಿದೆ. ಈ ಮೂಲಕ ಭಾರತ ಗುಲಾಮಗಿರಿಯ ಮನಸ್ಥಿತಿಯನ್ನ ಓವರ್‌ಕಮ್‌ ಮಾಡಲು ಸಹಾಯ ಮಾಡುತ್ತೆ ಅಂತ ಜೈಶಂಕರ್‌ ಹೇಳಿದ್ದಾರೆ. ಇನ್ನು ಜೈಶಂಕರ್‌ ಈ ರೀತಿ ಹೇಳಿರೋದು ನೋಡಿದ್ರೆ ಕೇಂದ್ರ ಸರ್ಕಾರ ಇನ್ಮುಂದೆ ಭಾರತವೆಂದೇ ದೇಶದ ಹೆಸ್ರನ್ನ ಬಳಸಲು ಸಂಪೂರ್ಣ ತಯಾರಿ ಮಾಡಿಕೊಂಡಿರುವ ಥರ ಇದೆ ಎನ್ನಲಾಗ್ತಿದೆ.

ಇತ್ತ ಈ ಬಗ್ಗೆ ಮಾತಾಡಿರುವ ಕಾಂಗ್ರೆಸ್‌ ನಾಯಕ ಶಶಿ ತರೂರ್‌, ಪಾಕಿಸ್ತಾನ ಸಂಸ್ಥಾಪಕ ಮಹಮ್ಮದ್‌ ಅಲಿ ಜಿನ್ನಾ ಕೂಡ ‘ಇಂಡಿಯಾ’ ಅನ್ನೋ ಹೆಸರಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ನಮ್ಮ ದೇಶ ಬ್ರಿಟಿಷ್‌ರಾಜ್‌ನ ಉತ್ತರಾಧಿಕಾರಿ ರಾಷ್ಟ್ರವಾಗಲಿದೆ. ಜೊತೆಗೆ ಪಾಕಿಸ್ತಾನ ಅದರ ಪ್ರತ್ಯೇಕ ರಾಜ್ಯವಾಗಲಿದೆ ಅಂತ ಜಿನ್ನಾ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಜಿನ್ನಾ ಅವರ ನಿಲುವನ್ನೇ ಬಿಜೆಪಿ ಹೊಂದಿದೆ ಅಂತ ಆರೋಪಿಸಿದ್ದಾರೆ. ಅಷ್ಟೆ ಅಲ್ದೆ ಇಂಡಿಯಾವನ್ನು ಭಾರತ ಅಂತ ಕರೆಯಲು ಸಂವಿಧಾನದಲ್ಲಿ ಯಾವುದೇ ಆಕ್ಷೇಪಣೆಗಳಿಲ್ಲ. ಆದರೆ ಶತಮಾನಗಳಿಂದ ಸೃಷ್ಟಿಯಾಗಿರುವ ಇಂಡಿಯಾ ಹೆಸರಿನ ಬ್ರಾಂಡ್ ಮೌಲ್ಯವನ್ನು ಕಳೆದುಕೊಳ್ಳುವಷ್ಟು ಮೂರ್ಖತನದ ನಿರ್ಧಾರವನ್ನು ಕೇಂದ್ರ ಸರ್ಕಾರ ಮಾಡಲ್ಲ ಅಂತ ನಾನು ನಂಬುತ್ತೇನೆ ಅಂತ ಹೇಳಿದ್ದಾರೆ. ಇದೇ ವೇಳೆ ವಿಪಕ್ಷಗಳ ಒಕ್ಕೂಟ I.N.D.I.A ಗೆ BHARAT ಅಂತ ಹೆಸರಿಡುವಂತೆ ಸಲಹೆ ಕೊಟ್ಟಿರುವ ತರೂರ್‌, ಅದಕ್ಕೆ ವಿವರಣೆ ಕೂಡ ಕೊಟ್ಟಿದ್ದಾರೆ. ಒಕ್ಕೂಟದ ಹೆಸರನ್ನ ʻAlliance for Betterment, Harmony And Responsible Advancement for Tomorrowʼ (BHARAT) ಅಂತ ಚೇಂಜ್‌ ಮಾಡಬೇಕು. ಬಹುಶಃ ಆಗಲಾದ್ರೂ ಆಡಳಿತಾರೂಢ ಪಕ್ಷ ತನ್ನ ಹೆಸರು ಬದಲಾಯಿಸೋ ಆಟವನ್ನ ನಿಲ್ಲಿಸಬಹುದು ಅಂತ ಟಾಂಗ್‌ ಕೊಟ್ಟಿದ್ದಾರೆ.
ಅತ್ತ ಇಂಡಿಯಾ Vs ಭಾರತ ವಿಚಾರಕ್ಕೆ ಯಾವುದೇ ರೀತಿ ಕಮೆಂಟ್‌ ಮಾಡದಂತೆ ಪ್ರಧಾನಿ ನರೇಂದ್ರ ಮೋದಿಯವರು ಸಚಿವರಿಗೆ ಸಲಹೆ ನೀಡಿದ್ದಾರೆ. ಜೊತೆಗೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕೃತ ವ್ಯಕ್ತಿ ಮಾತ್ರ ಮಾತಾಡಬೇಕು ಅಂತ ಮೋದಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply