ಬಹುನಿರೀಕ್ಷಿತ 13ನೇ ಆವೃತ್ತಿಯ ICC ಏಕದಿನ ವಿಶ್ವಕಪ್‌ 2023 ವೇಳಾಪಟ್ಟಿ ಪ್ರಕಟ!

masthmagaa.com:

ಬಹುನಿರೀಕ್ಷಿತ 13ನೇ ಆವೃತ್ತಿಯ ICC ಏಕದಿನ ವಿಶ್ವಕಪ್‌ 2023ರ ವೇಳಾಪಟ್ಟಿ ಪ್ರಕಟಗೊಂಡಿದೆ. ICC ಏಕದಿನ ವಿಶ್ವಕಪ್ ಟೂರ್ನಿ ಅಕ್ಟೋಬರ್‌ 5 ರಿಂದ ನವೆಂಬರ್‌ 19 ರವರೆಗೆ ನಡೆಯಲಿದೆ. ಸೆಮಿಫೈನಲ್ ಪಂದ್ಯಗಳು ಮುಂಬೈ ಮತ್ತು ಕೋಲ್ಕತ್ತಾದಲ್ಲಿ ನವೆಂಬರ್ 15 ಮತ್ತು 16ರಂದು ಆಯೋಜಿಸಲಾಗಿದ್ದು, ಅಂತಿಮ ಫೈನಲ್ ಪಂದ್ಯ ನವೆಂಬರ್ 19ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ. ಇನ್ನು ಭಾರತ ತಂಡ ಅಕ್ಟೋಬರ್ 8ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ಟೂರ್ನಿ ಆರಂಭಿಸಲಿದೆ. ಪಾಕಿಸ್ತಾನ ಆಕ್ಷೇಪಗಳ ನಡುವೆಯೂ, ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಅಕ್ಟೋಬರ್ 15ರಂದು ಅಹಮದಾಬಾದ್‌ನಲ್ಲೇ ನಡೆಯಲಿದೆ. ಈ ಪಂದ್ಯವನ್ನು ಚೆನ್ನೈ, ಬೆಂಗಳೂರು ಅಥವಾ ಕೋಲ್ಕತ್ತಾಗೆ ಸ್ಥಳಾಂತರಿಸುವಂತೆ ಪಾಕಿಸ್ತಾನ ಮನವಿ ಮಾಡಿತ್ತು. ಆದರೆ, ಇದೀಗ ಅಂತಿಮವಾಗಿ ಅಹ್ಮದಾಬಾದ್​ನಲ್ಲೇ ನಡೆಸಲು ಒಪ್ಪಿಗೆ ನೀಡಿದೆ. ಇನ್ನೊಂದ್‌ ಕಡೆ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಟ್ರೋಫಿಯನ್ನು ವಿಶಿಷ್ಟ ರೀತಿಯಲ್ಲಿ ಬಾಹ್ಯಾಕಾಶದಲ್ಲಿ ಅನಾವರಣಗೊಳಿಸಲಾಗಿದೆ. ಈ ಮೂಲಕ ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಕ್ರೀಡಾ ಟ್ರೋಫಿ ಎನಿಸಿಕೊಂಡಿದ್ದು ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಈ ಟ್ರೋಫಿಯನ್ನ1,20,000 ಫೀಟ್‌ ಎತ್ತರಕ್ಕೆ ಏರ್‌ ಬಲೂನ್‌ ಮೂಲಕ ಕಳುಹಿಸಿ ಅನಾವರಣಗೊಳಿಸಲಾಗಿದೆ. ಇನ್ನು ಸ್ಪೇಸ್‌ನಲ್ಲೇ ತೆಗೆದ ಫೋಟೊಗಳನ್ನ ICC ತನ್ನ ಸೋಷಿಯಲ್‌ ಮೀಡಿಯಾಗಳಲ್ಲಿ ಶೇರ್‌ ಮಾಡಿದ್ದು, ಭಾರಿ ವೈರಲ್‌ ಆಗಿದೆ. ಅಂದ್ಹಾಗೆ ಈ ಟ್ರೋಫಿ ವರ್ಲ್ಡ್‌ ಟೂರ್‌ ಮಾಡಲಿದ್ದು, ಇಂಗ್ಲೆಂಡ್‌, ಪಾಕಿಸ್ತಾನ, ಫ್ರಾನ್ಸ್‌, ಕುವೈತ್‌ ಸೇರಿದಂತೆ 18 ರಾಷ್ಟ್ರಗಳಲ್ಲಿ ಸಂಚರಿಸಲಿದ್ದು, ಸೆಪ್ಟೆಂಬರ್ 4ರಂದು ಭಾರತದಲ್ಲಿ ಮುಕ್ತಾಯಗೊಳ್ಳಲಿದೆ.

-masthmagaa.com

Contact Us for Advertisement

Leave a Reply