ಪಾಕಿಸ್ತಾನದಲ್ಲಿ ಗಗನಕ್ಕೇರಿದ ಸಕ್ಕರೆ ಬೆಲೆ! ಒಂದು ಕೆಜಿಗೆ 220 ಪಾಕ್‌ ರೂಪಾಯಿ!

masthmagaa.com:

ತೀವ್ರ ಆರ್ಥಿಕ ಬಿಕ್ಕಟ್ಟು, ರಾಜಕೀಯ ಅಸ್ಥಿರತೆ ಹಾಗೂ ಹಣದುಬ್ಬರದಿಂದ ಬೇಸತ್ತಿರುವ ಪಾಕಿಸ್ತಾನದಲ್ಲಿ ಈಗ ಸಕ್ಕರೆ ಕೂಡ ಕಹಿಯಾಗಿ ಪರಿಣಮಿಸಿದೆ. ಯಾಕಂದ್ರೆ ಪಾಕಿಸ್ತಾನದಲ್ಲಿ ಸಕ್ಕರೆಯ ಸ್ಟಾಕ್‌ನಲ್ಲಿ ಕೊರತೆ ಉಂಟಾಗಿದ್ದು, ಒಂದು ಕೆಜಿಗೆ 220 ಪಾಕ್‌ ರೂಪಾಯಿ ದರದಲ್ಲಿ ಆಮದು ಮಾಡಿಕೊಳ್ಳಲು ಅಲ್ಲಿನ ಸರ್ಕಾರ ಮುಂದಾಗಿದೆ. ಸಕ್ಕರೆ ಕಾರ್ಖಾನೆ ಮಾಲಿಕರು ಸಾಕಷ್ಟು ಸಕ್ಕರೆ ಸ್ಟಾಕ್‌ ಇದೆ ಅಂತ ತಪ್ಪು ಮಾಹಿತಿ ನೀಡಿದ್ರಿಂದ ಈಗ ಸಕ್ಕರೆ ಕೊರತೆ ಉಂಟಾಗಿದೆ. ಈ ಹಿನ್ನಲೆಯಲ್ಲಿ ಪಾಕಿಸ್ತಾನ ಸರ್ಕಾರ 10 ಲಕ್ಷ ಮೆಟ್ರಿಕ್‌ ಟನ್‌ನಷ್ಟು ಸಕ್ಕರೆಯನ್ನ ಆಮದು ಮಾಡಿಕೊಳ್ಳಲು ನಿರ್ಧರಿಸಿದೆ ಅಂತ ವರದಿಯಾಗಿದೆ. ಜೊತೆಗೆ ಹೆಚ್ಚಿನ ಬೆಲೆಗೆ ಆಮದು ಮಾಡಿಕೊಳ್ತಿರೋ ಕಾರಣ ಈ ಹೊರೆ ಪಾಕಿಸ್ತಾನದ ಜನರ ಮೇಲೆ ಬೀಳಲಿದೆ. ಈಗಾಗಲೇ ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಪ್ರಸ್ತುತ ಒಂದು ಕೆಜಿ ಸಕ್ಕರೆ ಬೆಲೆ 100 ರೂಪಾಯಿಯಿದ್ದು, ಇದು 220 ರೂಪಾಯಿಯಾಗಲಿದೆ ಅಂತ ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

-masthmagaa.com

Contact Us for Advertisement

Leave a Reply