ವಿಶ್ವದಲ್ಲೇ ಅತಿಹೆಚ್ಚು ಸಾಲಬಾಧೆ ಹೊಂದಿರುವ ದೇಶಗಳಲ್ಲಿ ಪಾಕ್‌ಗೆ ಸ್ಥಾನ!

masthmagaa.com:

ವಿಶ್ವದಲ್ಲೇ ಅತಿಹೆಚ್ಚು ಸಾಲದ ಬಾಧೆಯಲ್ಲಿ ಸಿಲುಕಿರೊ ಟಾಪ್‌ 15 ರಾಷ್ಟ್ರಗಳಲ್ಲಿ ಪಕ್ಕದ ಪಾಕಿಸ್ತಾನ್‌ ಕೂಡ ಒಂದಾಗಿದೆ. ಕೇವಲ ಹೊರಗಿನ ಸಾಲ ಅಲ್ದೇ ಪಾಕಿಸ್ತಾನದ ಆಂತರಿಕ ಬಡ್ಡಿದರ, ಹಣದುಬ್ಬರ ಕೂಡ ಗಗನಕ್ಕೇರಿದೆ ಅಂತ ಬ್ಯುಸಿನೆಸ್‌ ರೆಕಾರ್ಡರ್‌ ವರದಿ ಮಾಡಿದೆ. 2023-24ರ ಹಣಕಾಸು ವರ್ಷದಲ್ಲಿ ಪಾಕಿಸ್ತಾನಕ್ಕೆ ತನ್ನ ಸಾಲ ಹಾಗೂ ಆರ್ಥಿಕ ಸ್ಥಿತಿಯನ್ನ ಮೆಂಟೇನ್‌ ಮಾಡೋದಕ್ಕೆ ಬರೋಬ್ಬರಿ 40 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 3.28 ಲಕ್ಷ ಕೋಟಿ ರೂಪಾಯಿ ಬೇಕು. ಅದ್ರಲ್ಲಿ ವಿದೇಶಿ ಸಾಲವನ್ನ ತೀರಿಸೋಕೆನೆ 30 ಬಿಲಿಯನ್‌ ಡಾಲರ್‌ ಬೇಕಾಗುತ್ತೆ ಅಂತ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನೊಂದ್‌ ಕಡೆ ತನ್ನ ದೇಶಕ್ಕೆ ಸೇನಾ ಹಣಕಾಸು ನೆರವನ್ನ ಪುನಃ ಸ್ಟಾರ್ಟ್‌ ಮಾಡುವಂತೆ ಅಮೆರಿಕಕ್ಕೆ ಪಾಕಿಸ್ತಾನ್‌ ಆಗ್ರಹಿಸಿದೆ.‌ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ಆಡಳಿತದಲ್ಲಿ ಸಸ್ಪೆಂಡ್‌ ಆಗಿರೊ ವಿದೇಶಿ ಸೇನಾ ಹಣಕಾಸು ನೆರವು ಹಾಗೂ ವಿದೇಶಿ ಶಸ್ತ್ರಾಸ್ತ್ರ ಮಾರಾಟವನ್ನ ಪಾಕಿಸ್ತಾನದ ಜೊತೆ ಮತ್ತೆ ಆರಂಭ ಮಾಡಬೇಕು ಅಂತ ಅಮೆರಿಕದಲ್ಲಿರೊ ಪಾಕ್‌ನ ರಾಯಭಾರಿ ಮಸೂದ್‌ ಖಾನ್ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರೊ ಅಮೆರಿಕದ ಅಧಿಕಾರಿ ಎಲಿಜಬೆತ್‌ ಹಾರ್ಸ್ಟ್‌, ಪಾಕಿಸ್ತಾನ ತನ್ನ ಆರ್ಥಿಕತೆಯನ್ನ ಸುಧಾರಿಸೋಕೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಜೊತೆ ಕೆಲಸ ಮಾಡೋಕೆ ಹೇಳಿದ್ದಾರೆ. IMFನೊಂದಿಗೆ ಒಪ್ಪಿಕೊಂಡಿರೊ ಕಠಿಣ ಸುಧಾರಣೆಗಳನ್ನ ಜಾರಿಗೆ ತಂದು ದೇಶವನ್ನ ದಿವಾಳಿಯಾಗೋದ್ರಿಂದ ಸೇವ್‌ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಅಂದ್ರೆ ಇನ್‌ಡೈರೆಕ್ಟ್‌ ಆಗಿ ಅಮೆರಿಕ ಹೆಲ್ಪ್‌ ಮಾಡಲ್ಲ ಅಂತ ಹೇಳಿದೆ. ಅಂದ್ಹಾಗೆ ಅಫ್ಘಾನಿಸ್ತಾನದಿಂದ ಅಮೆರಿಕ ತನ್ನ ಸೇನೆಯನ್ನ ಹಿಂತೆಗೆದುಕೊಂಡಾಗಿನಿಂದ ಅಮೆರಿಕ ಹಾಗೂ ಪಾಕ್‌ನ ಸಂಬಂಧಗಳಲ್ಲಿ ಬಿರುಕು ಮೂಡಿದೆ. ಅಲ್ದೇ ಚೀನಾ ಜೊತೆಗಿನ ಪಾಕ್‌ನ ಅತಿಯಾದ ಒಡನಾಟ ಪಾಕ್‌ -ಅಮೆರಿಕ ಸಂಬಂಧದಲ್ಲಿ ಬಿರುಕು ಮೂಡಲು ಪ್ರಮುಖ ಕಾರಣವಾಗಿದೆ. ಹೀಗಾಗಿ ಮತ್ತೆ ಅಮೆರಿಕದ ಜೊತೆ ತನ್ನ ಸಂಬಂಧವನ್ನ ಸರಿ ಮಾಡಿಕೊಳ್ಳಲು ಪಾಕ್‌ ಪ್ರಯತ್ನಿಸುತ್ತಿದೆ.

-masthmagaa.com

Contact Us for Advertisement

Leave a Reply