ʻಪಾಕಿಸ್ತಾನ ವಿಶ್ವದ ಡೇಂಜರ್‌ ದೇಶʼ ಎಂದ ಅಮೆರಿಕಗೆ ಪಾಕಿಸ್ತಾನ ಹೇಳಿದ್ದೇನು?

masthmagaa.com:

ʻಪಾಕಿಸ್ತಾನ ವಿಶ್ವದ ಡೇಂಜರ್‌ ದೇಶ. ಅಣ್ವಸ್ತ್ರ ಅವರ ಕೈಯಲ್ಲಿರೋದು ಸುರಕ್ಷಿತ ಅಲ್ಲʼ ಅಂತ ಸಾಕ್ಷಾತ್‌ ಅಮೆರಿಕ ಅಧ್ಯಕ್ಷರೇ ಪಾಕಿಸ್ತಾನದ ಘನತೆಯನ್ನ ವಿಶ್ವಕ್ಕೆ ಪರಿಚಯ ಮಾಡಿಕೊಟ್ಟಿದ್ರು. ಇದರ ಬೆನ್ನಲ್ಲೇ ಪಾಕ್‌ ಇದಕ್ಕೆ ಪ್ರತಿಕ್ರಿಯೆ ಕೊಟ್ಟಿದೆ. ʻಪಾಕಿಸ್ತಾನ ವಿಶ್ವದ ಜವಾಬ್ದಾರಿಯುತ ಅಣ್ವಸ್ತ್ರ ದೇಶ. ನಾನು ನಿಸ್ಸಂದಿಗ್ಧವಾಗಿ ಈ ಬಗ್ಗೆ ಮತ್ತೆ ಹೇಳ್ತಿದ್ದೀನಿ. ನಮ್ಮ ಪರಮಾಣು ಅಸ್ತ್ರಗಳು IAEA (ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ) ಅಗತ್ಯತೆಗಳ ಪ್ರಕಾರ ಅತ್ಯುತ್ತಮ ಸುರಕ್ಷತೆ ಹೊಂದಿವೆ. ಇದಕ್ಕೆ ನಾವು ಯಾವಾಗಲೂ ಹೆಮ್ಮೆಪಡುತ್ತೇವೆ ಅಂತ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ ಟ್ವೀಟ್‌ ಮಾಡಿದ್ದಾರೆ. ಅಲ್ದೇ ಅವರ ಕಚೇರಿ ಕೂಡ ಈ ಬಗ್ಗೆ ಹೇಳಿಕೆಯೊಂದನ್ನ ಬಿಡುಗಡೆ ಮಾಡಿದ್ದು, ಕಳೆದ ದಶಗಳಲ್ಲಿ ಪಾಕಿಸ್ತಾನ ಅತ್ಯಂತ ಜವಾಬ್ದಾರಿಯುತ ಪರಮಾಣು ರಾಷ್ಟ್ರ ಅಂತ ಸಾಬೀತಾಗಿದೆ, ಅಮೆರಿಕ ಮತ್ತು ಪಾಕಿಸ್ತಾನ ನಡುವೆ ಐತಿಹಾಸಿಕ ಸಂಬಂಧ ಇದೆ. ನಾವು ನಮ್ಮ ಸಂಬಂಧದ ಬಗ್ಗೆ ಮಾತನಾಡಬೇಕೇ ಹೊರತು ಅನಗತ್ಯ ವಿಚಾರಗಳ ಬಗ್ಗೆ ಅಲ್ಲ ಅಂತ ಅಮೆರಿಕ ಅಧ್ಯಕ್ಷರಿಗೆ ಮಾರ್ಗದರ್ಶನ ಮಾಡಿದೆ. ಅಂದ್ಹಾಗೆ ಚೀನಾದಿಂದ ಮೆಲ್ಲಗೆ ದೂರ ಸರೀತಿರೊ ಪಾಕಿಸ್ತಾನ, ಅಮೆರಿಕ ಜೊತೆ ಸೇರಿ ಒಂದಷ್ಟು ಹಣಕಾಸು ನೆರವಿಗೆ ಕಾದು ನೋಡ್ತಿತ್ತು. ಇದಕ್ಕಾಗಿ ದೊಡ್ಡ ಸರ್ಕಸ್‌ ಮಾಡ್ತಿತ್ತು. ಕಳೆದ ವಾರವಷ್ಟೇ ಪಾಕಿಸ್ತಾನದ ಅಧಿಕಾರಿಗಳು, ಮಂತ್ರಿಗಳು ಕೂಡ ಅಮೆರಿಕ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ರು. ಅಷ್ಟೇ ಯಾಕೆ ಪಾಕ್‌ನ ರಿಯಲ್‌ ಪವರ್‌ ಸೆಂಟರ್‌ ಅಂತಾನೇ ಕರೆಯಲಾಗ್ತಿರೋ ಪಾಕ್‌ ಆರ್ಮಿ ಚೀಫ್‌ ಖಮರ್‌ ಜಾವೇಧ್‌ ಬಾಜ್ವಾ ಅಮೆರಿಕಗೆ ಇತ್ತೀಚಿಗೆ ತಾನೇ ಭೇಟಿ ನೀಡಿದ್ರು. ಇದಾದ ಒಂದೇ ವಾರದಲ್ಲೇ ಈಗ ಅಮೆರಿಕ ಅಧ್ಯಕ್ಷ ಬೈಡೆನ್ ಪಾಕಿಸ್ತಾನವನ್ನ ಜರಿದು ಜಾಲಾಡಿದ್ದಾರೆ. ಪಾಕ್‌ಗೆ ದೊಡ್ಡ ಮುಖಭಂಗ ಮಾಡಿದ್ದಾರೆ. ಇತ್ತ ಪಾಕಿಸ್ತಾನ ಸರ್ಕಾರ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಅಮೆರಿಕ ಬೈಡೆನ್ ಹೇಳಿಕೆಗೆ ಸಂಬಂಧಪಟ್ಟಂತೆ‌ ಪ್ರತಿಕ್ರಿಯೆ ನೀಡುವಂತೆ ಅಮೆರಿಕ ರಾಯಭಾರಿಗೆ ಸಮನ್ಸ್‌ ಜಾರಿ ಮಾಡಿದೆ. ಇನ್ನು ಇದನ್ನೇ ಅಸ್ತ್ರವಾಗಿಟ್ಟುಕೊಂಡಿರೋ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಈಗಿನ ಪಾಕ್‌ ಸರ್ಕಾರದ ವಿರುದ್ದ, ಹಾಗೂ ಅಮೆರಿಕ ವಿರುದ್ದ ವಿಪರೀತ ವಾಗ್ದಾಳಿ ಮಾಡಿದ್ದಾರೆ. ʻಆಮದು ಸರ್ಕಾರ, ಅಂದ್ರೆ ಈಗಿರೋ ಪಾಕಿಸ್ತಾನ ಸರ್ಕಾರ ವಿದೇಶಾಂಗ ನೀತಿ ಸೇರಿದಂತೆ ಎಲ್ಲದರಲ್ಲೂ ಫೇಲ್‌ ಆಗಿದೆ. ಫೇಲ್ಯೂರ್‌ಗಳಲ್ಲಿ ದಾಖಲೆಯನ್ನ ಬರೀತಿದೆ. ಬೈಡೆನ್‌ ಅವರು ಹೇಳ್ತಾರೆ. ಪಾಕಿಸ್ತಾನ ಡೇಂಜರ್‌ ದೇಶ ಅಂತ. ಈಗ ಜಗತ್ತಲ್ಲಿ ಹಲವಾರು ಯುದ್ದದಲ್ಲಿ ತೊಡಗಿರುವ ಅಮೆರಿಕಗಿಂತ ನಾವು ಭಿನ್ನವಾಗಿದ್ದೀವಿ. ನಾವು ಅಣ್ವಸ್ತ್ರ ರಾಷ್ಟ್ರ ಆದ್ಮೇಲೆ ಯಾರ ಮೇಲೆ ದಾಳಿ ಮಾಡಿದ್ದೀವಿ ಹೇಳಿ ? ಅಂತ ಅಮೆರಿಕ ಅಧ್ಯಕ್ಷರ ವಿರುದ್ದ ವಾಗ್ದಾಳಿ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply