ಭಾರತದ ವಿರುದ್ದ ನ್ಯೂಕ್ಲಿಯಾರ್‌ ಅಸ್ತ್ರದ ಬೆದರಿಕೆ ಹಾಕಿದ ಪಾಕ್‌ನ ಆಡಳಿತ ಪಕ್ಷದ ನಾಯಕಿ!

masthmagaa.com:

ಉಗ್ರಪೋಷಕ ಪಾಕಿಸ್ತಾನ ತಾನು ಇಡೀ ಜಗತ್ತಿಗೆ ಕಂಟಕ ಅನ್ನೋದನ್ನ ಮತ್ತೆ ಸಾಬೀತು ಮಾಡಿದೆ. ಭಾರತವನ್ನ ಟೀಕಿಸುವ ನೆಪದಲ್ಲಿ ತಮ್ಮ ಮಾತಿನ ಎಲ್ಲ ಗಡಿಗಳನ್ನ ಮೀರುತ್ತಿರೋ ಪಾಕ್‌ ನಾಯಕರು ಈಗ ಭಾರತಕ್ಕೆ ಅಣ್ವಸ್ತ್ರದ ಧಮ್ಕಿ ಹಾಕಿದ್ದಾರೆ. ನಮ್ಮ ಹತ್ರ ಅಣ್ವಸ್ತ್ರ ಇದೆ. ನಾವು ಅದನ್ನ ಹಾಕೋಕೆ ಹಿಂಜರಿಯೋಲ್ಲ ಅಂತ ಪಾಕ್‌ನ ಆಡಳಿತ ಪಕ್ಷದ ನಾಯಕಿ ಶಾಜಿಯಾ ಮಾರಿ ಭಾರತಕ್ಕೆ ಬೆದರಿಕೆ ಹಾಕಿದ್ದಾರೆ. ಪಾಕಿಸ್ತಾನ್‌ ಪೀಪಲ್‌ ಪಾರ್ಟಿಯ ಪ್ರಭಾವಿ ನಾಯಕಿ ಅಂತಲೇ ಕರೆಸಿಕೊಂಡಿರೋ ಈಕೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ರು. ಈ ವೇಳೆ ʻಪಾಕಿಸ್ತಾನದ ಹತ್ರ ಅಣ್ವಸ್ತ್ರ ಇದೆ ಅನ್ನೋದನ್ನ ಭಾರತ ಯಾವತ್ತೂ ಮರೀಬಾರ್ದು..ನಮ್ಮ ಪರಮಾಣು ಅಸ್ತ್ರಗಳು ಸೈಲೆಂಟ್‌ ಆಗಿಲ್ಲ.. ಅಥವಾ ಸುಮ್ಮನೇ ಇಟ್ಟುಕೊಳ್ಳೋಕಲ್ಲ ಅದನ್ನ ನಾವು ಮಾಡಿ ಇಟ್ಟುಕೊಂಡಿರೋದು..ಅಗತ್ಯ ಬಿದ್ರೆ ಅದನ್ನ ಹಾಕ್ಬಿಡೋಕೂ ನಮಗೆ ಯಾವುದೇ ಹಿಂಜರಿಕೆ ಇಲ್ಲ ಅಂತ ಬೇಜವಾಬ್ದಾರಿ ಹೇಳಿಕೆ ಕೊಟ್ಟು ಧಮ್ಕಿ ಹಾಕಿದ್ದಾರೆ. ಅಂದ್ಹಾಗೆ ಪ್ರಧಾನಿ ಮೋದಿ ವಿರುದ್ದ ಪಾಕ್‌ ಸಚಿವ ಬಿಲಾವಲ್‌ ಭುಟ್ಟೋ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕೆ ಭಾರತ ಪಾಕಿಸ್ತಾನಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ಕೊಟ್ಟಿತ್ತು. ಭಾರತದಲ್ಲಿ ಈ ಬಗ್ಗೆ ದೊಡ್ಡ ಮಟ್ಟದ ಪ್ರತಿಭಟನೆ ಕೂಡ ಆಗಿತ್ತು. ಅಷ್ಟೇ ಅಲ್ಲ ದೆಹಲಿಯ ಪಾಕ್‌ನ ಹೈ ಕಮೀಷನ್‌ ಕಚೇರಿ ಮುಂದೆ ಸಹ ಧರಣಿ ಕೂರಲಾಗಿತ್ತು. ಇದ್ರ ಬೆನ್ನಲ್ಲೇ ಭುಟ್ಟೋ ಹೇಳಿಕೆಯನ್ನ ಬೆಂಬಲಿಸಿ ಮಾತನಾಡಿರೋ ಈ ಪಾಕ್‌ ನಾಯಕಿ ಭಾರತದ ಮೇಲೆ ಅಣ್ವಸ್ತ್ರ ಪ್ರಯೋಗದ ಮಾತನಾಡಿದಾರೆ. ವಿಶ್ವ ವೇದಿಕೆಯಲ್ಲಿ ಪಾಕ್‌ ಭಯೋತ್ಪಾದಕರ ಕೇಂದ್ರ ಸ್ಥಾನ ಅಂತ ಭಾರತ ತಲೆ ಮೇಲೆ ಹೊಡ್ದಂಗೆ ಹೇಳ್ತಿರೋದು ಪಾಕಿಸ್ತಾನವನ್ನ ಜಾಗತಿಕ ರಾಷ್ಟ್ರಗಳ ಮುಂದೆ ಬೆತ್ತಲು ಮಾಡ್ತಾಯಿದೆ. ಹೀಗಾಗಿ ಈ ಮಾತನ್ನ ಎಲ್ಲ ದೇಶಗಳ ಮುಂದೆ ಕೇಳಿ ಕೇಳಿ ಫ್ರಸ್ಟ್ರೆಷನ್‌ಗೆ ಒಳಗಾಗಿರೋ ಪಾಕ್‌ ನಾಯಕರು ಒಂದಾದರ ಮೇಲೊಂದರಂತೆ ಈಗ ಭಾರತದ ವಿರುದ್ದ ನಾಲಿಗೆ ಹರಿ ಬಿಡ್ತಿದ್ದಾರೆ. ಬಹುಶಃ ಶಾಜಿಯಾ ಮೇಡಂಗೆ ಗೊತ್ತಿಲ್ಲ ಅಂತ ಅನ್ಸುತ್ತೆ. ಭಾರತದ ಹತ್ರ ಇರೋದು ದೀಪಾವಳಿ ಪಟಾಕಿ ಅಲ್ಲ ಅದೂ ಕೂಡ ಅಣ್ವಸ್ತ್ರಗಳೇ ಅಂತ ನಮ್ಮ ಪ್ರಧಾನಿ ತುಂಬಾ ಹಿಂದೆನೇ ಹೇಳಿದ್ದು. ಅದು ಅಲ್ದೇ ಭಾರತದ ಅಣ್ವಸ್ತ್ರ ಪಾಲಿಸಿ ಬಗ್ಗೆ ಕೂಡ ಗೊತ್ತಿಲ್ಲ ಅನ್ಸುತ್ತೆ. ಭಾರತ ತನ್ನ ಅಣ್ವಸ್ತ್ರ ನೀತಿಯ ಪ್ರಕಾರ ನೋ ಫಸ್ಟ್ ಯೂಸ್‌ ಪಾಲಿಸಿಯನ್ನ ಹೊಂದಿದೆ. ಅಂದ್ರೆ ಯಾರ ಮೇಲೂ ತಾನು ಮೊದಲು ಅಣ್ವಸ್ತ್ರ ಪ್ರಯೋಗ ಮಾಡಲ್ಲ. ಆದರೆ ಭಾರತದ ಅದೇ ಪರಮಾಣು ನೀತಿಯ ಪ್ರಕಾರ ಇನ್ನೊಂದು ಗಮನಿಸಬೇಕಾದ ಅಂಶ ಅಂದ್ರೆ, ಶತ್ರುಗಳು ಸಣ್ಣ ಪ್ರಮಾಣದಲ್ಲಿ ಅಣ್ವಸ್ತ್ರ ಹಾಕಿದ್ರೂ ಭಾರತ ಹೆಚ್ಚಿನ ಪ್ರಮಾಣದ ಪರಮಾಣು ಸ್ಪೋಟಕಗಳನ್ನ ವಿರೋಧಿಗಳ ಮೇಲೆ ಹಾಕುತ್ತೆ. ಹಾಗೊಮ್ಮೆ ಭಾರತ ತಿರುಗಿ ಬಿದ್ರೆ ಪಾಕ್‌ ಭೂಪಟದಲ್ಲೇ ಕಾಣೆಯಾಗುತ್ತೆ. ಇನ್ನು ತಮ್ಮ ಹೇಳಿಕೆಗೆ ಅನೇಕ ಕಡೆ ವಿರೋಧ ಕೇಳಿ ಬರ್ತಿರೋ ಹೊತ್ತಲ್ಲೇ ಇದಕ್ಕೆ ಸ್ವತಃ ಸ್ಪಷ್ಟನೆ ಕೊಟ್ಟಿರೋ ಶಾಜಿಯಾ ʻಪಾಕಿಸ್ತಾನ ಒಂದು ಜವಾಬ್ದಾರಿಯುತ ಅಣ್ವಸ್ತ್ರ ದೇಶ..ಭಾರತದ ಮಾಧ್ಯಮಗಳು ಇದನ್ನ ತಪ್ಪಾಗಿ ವರದಿ ಮಾಡ್ತ ಭೀತಿ ಸೃಷ್ಠಿಸೋಕೆ ಪ್ರಯತ್ನ ಮಾಡ್ತಿವೆ. ಭಯೋತ್ಪಾದನೆಯ ವಿರುದ್ದ ಹೋರಾಡೋಕೆ ಪಾಕಿಸ್ತಾನ ಭಾರತಕ್ಕಿಂತ ಹೆಚ್ಚು ಶ್ರಮ ಹಾಕಿದೆ ಅಂತ ಹೇಳಿದ್ದಾರೆ. ಆದ್ರೆ ಶಾಜಿಯಾ ಎಷ್ಟೇ ಹೇಳಿಕೆ ಕೊಟ್ಟೂ ಅದಕ್ಕೆ ಸ್ಪಷ್ಟನೆ ಕೊಟ್ರೂ ಅಮೆರಿಕ ಅಧ್ಯಕ್ಷರು ಹೇಳಿರೋ ಹಾಗೇ ಪಾಕಿಸ್ತಾನ ವಿಶ್ವಕ್ಕೆ ಡೇಂಜರ್‌ ದೇಶ ಅನ್ನೋ ಹಣೆಪಟ್ಟಿಯನ್ನ ಮರೆಮಾಚೋಕೆ ಆಗಲ್ಲ.

-masthmagaa.com

Contact Us for Advertisement

Leave a Reply