ಬಿಜೆಪಿ ಮುಖಂಡನ ಕೊಲೆ! ಕರಾವಳಿ ಧಗಧಗ: ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ನೀಡೋದಾಗಿ ಸಿಎಂ ವಾಗ್ದಾನ

masthmagaa.com:

ಇಷ್ಟು ದಿನ ಶಾಂತವಾಗಿದ್ದ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ ಈಗ ಮತ್ತೊಮ್ಮೆ ಉದ್ವಿಗ್ನಗೊಂಡು ಉರಿಯೋಕೆ ಶುರುವಾಗಿದೆ. ಬಿಜೆಪಿ ಯುವ ಮುಖಂಡ ಪ್ರವೀಣ್‌ ನೆಟ್ಟಾರ್‌ರನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದ್ದು ಭಾರಿ ಆಕ್ರೋಶ ಭುಗಿಲೆದ್ದಿದೆ. ಇಲ್ಲಿನ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಈ ದುಷ್ಕೃತ್ಯ ಸೇಡಿನಿಂದ ಕೂಡಿದೆ, ಇದರಲ್ಲಿ ಅನ್ಯ ಸಮುದಾಯದವರ ಕೈವಾಡ ಇದೆ, ಇದರಲ್ಲಿ ಪಕ್ಕದ ಕೇರಳದವರು ಕೂಡ ಸೇರಿದ್ದಾರೆ ಅಂತ ಆರೋಪಿಸಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಜಿಲ್ಲೆಯ ಹಲವು ಕಡೆ ಭಾರಿ ಪ್ರತಿಭಟನೆ ನಡೆಸಿವೆ. ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಸುಳ್ಯ, ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಸ್ವಯಂ ಪ್ರೇರಿತ ಬಂದ್ ನಡೆಸುವಂತೆ ಕರೆ ನೀಡಲಾಗಿತ್ತು. ಇನ್ನು ಪರಿಸ್ಥಿತಿ ಹದಗೆಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕೆಲವು ಕಡೆ ನಿಷೇಧಾಜ್ಞೆ ಕೂಡ ಜಾರಿ ಮಾಡಲಾಗಿದೆ. ಇದೇ ವೇಳೆ ಕೆಲವು ಶಾಲೆಗಳು ರಜೆ ಘೋಷಣೆ ಮಾಡಿದ್ವು.ಇನ್ನು ಕೊಲೆಯಾದ ಬಿಜೆಪಿ ಮುಖಂಡ ರಾಜಸ್ಥಾನದಲ್ಲಿ ಕನ್ಹಯ್ಯ ಪರವಾಗಿ ಪೋಸ್ಟ್‌ ಕೂಡ ಹಾಕಿದ್ದ ಅಂತ ಹೇಳಲಾಗಿದೆ.
– ಇನ್ನು ಪ್ರತಿಭಟನೆ ವಿಪರೀತ ಸ್ವರೂಪ ಪಡೀತಿದ್ದಂತೆ ಸಿಎಂ ಬಸವರಾಜ ಬೊಮ್ಮಾಯಿ ತುರ್ತು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ, ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಸೇರಿದಂತೆ ಉನ್ನತ ಅಧಿಕಾರಿಗಳು ಭಾಗಿಯಾಗಿದ್ರು. ಬಳಿಕ ಮಾತನಾಡಿದ ಗೃಹ ಸಚಿವರು ʻ ಪ್ರಕರಣ ಸಂಬಂಧ ಸದ್ಯ 10 ಜನರನ್ನ ವಶಕ್ಕೆ ಪಡೆಯಲಾಗಿದೆ. ಕೇರಳಕ್ಕೆ ತೆರಳಿ ಸಹ ಸರ್ಚ್ ಮಾಡ್ತಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಮನವಿ ಮಾಡಿದ್ದೇವೆ. ಕರಾವಳಿಯಲ್ಲಿ ಕೇರಳದಿಂದ ಬರುವವರು ಹೆಚ್ಚಾಗುತ್ತಿದ್ದಾರೆ. ಕೇರಳ ಸರ್ಕಾರದ ಜೊತೆ ನಮ್ಮ ಅಧಿಕಾರಿಗಳು ಮಾತನಾಡಿದ್ದಾರೆ. ಜಂಟಿಯಾಗಿ ಕಾರ್ಯಚರಣೆ ಮಾಡುತ್ತೇವೆ. ಅಪಾರಧಿಗಳನ್ನ ಹಿಡಿದು ತರುವಲ್ಲಿ ನಮ್ಮ ಫೊಲೀಸರು ಸಫಲರಾಗ್ತಾರೆ ಅಂತ ಹೇಳಿದ್ರು. ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿ ʻಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಹಿಂದೆ ಇರುವ ವ್ಯಕ್ತಿಗಳು ಹಾಗೂ ಸಂಘಟನೆಗಳನ್ನು ಸದೆಬಡಿದು ಉಗ್ರ ಶಿಕ್ಷೆ ನೀಡ್ತೀವಿ. ಇದರಲ್ಲಿ ಅನುಮಾನವೇ ಬೇಡ ಅಂತ ಹೇಳಿದ್ರು.
– ಬಿಜೆಪಿ ಮುಖಂಡನ ಅಂತ್ಯ ಸಂಸ್ಕಾರದ ವೇಳೆ ಭಾರಿ ಜನಸ್ತೋಮ ಕಂಡು ಬಂದಿತ್ತು. ಇನ್ನು ಪ್ರತಿಭಟನೆ ವೇಳೆ ಬಂದ ಬಿಜೆಪಿ ರಾಜ್ಯಾದ್ಯಕ ನಳೀನ್‌ ಕುಮಾರ್‌ ಕಟೀಲ್‌ರಿಗೆ ಉದ್ವಿಗ್ನ ಪ್ರತಿಭಟನಾಕಾರರು ಸುತ್ತುವರೆದು ಆಕ್ರೋಶ ಹೊರ ಹಾಕಿದ್ದಾರೆ. ಈ ವೇಳೆ ಆಕ್ರೋಶಿತ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಜ್‌ ಮಾಡಿದ್ದಾರೆ
-ಇತ್ತ ಪ್ರವಿಣ್‌ ಹತ್ಯೆಯನ್ನ ಪಕ್ಷಾತೀತವಾಗಿ ಎಲ್ಲ ನಾಯಕರು ಖಂಡಿಸಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಬಜರಂಗದಳದ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆ ಖಂಡನೀಯ. ಪೊಲೀಸರು ತಕ್ಷಣ ಕೊಲೆಗಡುಕರನ್ನು ಬಂಧಿಸಿ ಊಹಾಪೋಹಗಳಿಂದ ಶಾಂತಿ-ಸುವ್ಯವಸ್ಥೆ ಕದಡುವುದನ್ನು ತಪ್ಪಿಸಬೇಕು. ಕೊಲೆಗಡುಕರ ಪಕ್ಷ,ಜಾತಿ,ಧರ್ಮವನ್ನು ಲೆಕ್ಕಿಸದೆ ಪೊಲೀಸರು ಮುಲಾಜಿಲ್ಲದೆ ಕ್ರಮಕೈಗೊಳ್ಳಬೇಕು ಅಂತ ಆಗ್ರಹ ಮಾಡಿದ್ದಾರೆ ಇನ್ನು ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ʻರಾಜ್ಯದಲ್ಲಿ ಯುವಕರ ಕೊಲೆಗಳ ಸರಣಿ ಮುಂದುವರೆದಿದ್ದು, ಇನ್ನೊಂದ್‌ ಜೀವ ಹೋಗಿದೆ. ಈ ಹತ್ಯಾಕಾಂಡಕ್ಕೆ ಕೊನೆಯೇ ಇಲ್ಲವೇ? ಪ್ರವೀಣ್‌ರಂತಹ ಬಡ ಶ್ರಮ ಕುಟುಂಬದ ಮಕ್ಕಳೇ ಸಾವಿಗೀಡಾಗುತ್ತಿದ್ದಾರೆ. ಸರ್ಕಾರ ಈ ವಿಚಾರದಲ್ಲಿ ಮೈ ಮರೆತಿದ್ದು ಯಾಕೆ ಅಂತ ಕಿಡಿಕಾರಿದ್ದಾರೆ.
– ಇನ್ನು ಬಿಜೆಪಿ ಶಾಸಕ ರೇಣುಕಾಚಾರ್ಯ ಪ್ರತಿಕ್ರಿಯಿಸಿ ʻಹಿಂದೂ ಕಾರ್ಯಕರ್ತರ ಹತ್ಯೆಗೆ ಕಾರಣರಾದ ದುಷ್ಕರ್ಮಿಗಳ ವಿರುದ್ಧ ನಮ್ಮ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳದಿದ್ದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡೋಕೆ ಸಿದ್ದನಿದ್ದೇನೆ ಅಂತ ಎಚ್ಚರಿಕೆ ನೀಡಿದ್ದಾರೆ. ಇನ್ನು ಬಿಜೆಪಿ ಮುಖಂಡನ ಹತ್ಯೆ ಖಂಡಿಸಿ ಬಾಗಲಕೋಟೆ ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಪದಾಧಿಕಾರಿಗಳು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಅಂತ ಮಾಹಿತಿ ಲಭ್ಯವಾಗಿದೆ.
– ಇನ್ನು ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಪ್ರತಿಕ್ರಿಯಿಸಿ ʻನಮ್ಮ ಪಕ್ಷದ ಕಾರ್ಯಕರ್ತನ ಹತ್ಯೆಯ ಹಿಂದೆ PFI ಮತ್ತು SDPI ಸಂಘಟನೆ ಕೈವಾಡವಿದೆ. ಈ ಸಂಘಟನೆಗಳಿಗೆ ಕೇರಳದಲ್ಲಿ ಅಲ್ಲಿನ ಸರಕಾರ ರಕ್ಷಣೆ ನೀಡುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಅಂತ ಗಂಭೀರ ಆರೋಪ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply