ʻಒಂದು ರಾಷ್ಟ್ರ, ಒಂದು ಚುನಾವಣೆʼ ವರದಿ ರಾಷ್ಟ್ರಪತಿಗೆ ಸಲ್ಲಿಕೆ!

masthmagaa.com:

ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸೋ ವಿಚಾರವಾಗಿ ಮೊದಲ ಪ್ರಯತ್ನ ಶುರುವಾಗಿದೆ. ಮಾಜಿ ರಾಷ್ಟ್ರಪತಿ ರಾಮ್‌ ನಾಥ್‌ ಕೋವಿಂದ್‌ ಅವ್ರ ನೇತೃತ್ವದ ʻಒಂದು ರಾಷ್ಟ್ರ ಒಂದು ಚುನಾವಣೆʼ ಕಮಿಟಿ ತಮ್ಮ ಮಹತ್ವದ ರಿಪೋರ್ಟ್‌ನ್ನ ಕಂಪ್ಲೀಟ್‌ ರೆಡಿ ಮಾಡಿದೆ. ಅಲ್ಲದೇ ಮಾರ್ಚ್‌ 14 ರಂದು ಅಂದ್ರೆ ಇವತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವ್ರಿಗೆ ಸಬ್‌ಮಿಟ್‌ ಮಾಡಿದೆ. ಈ ಹೈ ಲೆವೆಲ್‌ ಕಮಿಟಿಯಲ್ಲಿ ಸುಮಾರು 191 ದಿನಗಳ ಕಾಲ ತಜ್ಞರೊಂದಿಗೆ ರಿಸರ್ಚ್‌ ನಡೆಸಿ ಸಿದ್ಧಪಡಿಸಲಾದ 18,626 ಪುಟಗಳ ರಿಪೋರ್ಟ್‌ನ್ನ ಈಗ ರಾಷ್ಟ್ರಪತಿಗಳ ಮುಂದಿಡಲಾಗಿದೆ. ಇದ್ರಲ್ಲಿ ದೇಶದಲ್ಲಿ ಏಕಕಾಲಕ್ಕೆ ಚುನಾವಣೆಯನ್ನ ನಡೆಸಬೇಕು ಅಂತ ಶಿಫಾರಸ್ಸು ಮಾಡಲಾಗಿದೆ. ಈ ರೀತಿ ಮಾಡೋದ್ರಿಂದ ದೇಶದ ಆರ್ಥಿಕತೆ, ರಾಜಕೀಯ ಮತ್ತು ಸಮಾಜಕ್ಕೆ ಉಪಯೋಗವಾಗಲಿದೆ. ಈ ಹಿಂದೆ ಅಂದ್ರೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತ್ರ ಕೆಲ ಕಾಲ ಈ ರೀತಿ ಏಕಕಾಲಕ್ಕೆ ಚುನಾವಣೆ ಮಾಡಲಾಗ್ತಿತ್ತು. ಆಗ ಪ್ರತಿ ಹತ್ತು ವರ್ಷಗಳಿಗೊಮ್ಮೆ ಕೇವಲ 2 ಚುನಾವಣೆಗಳು ನಡೀತಿದ್ವು. ಆದ್ರೆ ಈಗ ಪ್ರತೀ ವರ್ಷಾನು ಯಾವುದಾದ್ರೊಂದು ರಾಜ್ಯದಲ್ಲಿ ಚುನಾವಣೆ ನಡೀತಿರುತ್ತೆ. ಇದ್ರಿಂದ ಆರ್ಥಿಕತೆ, ಉದ್ಯಮಗಳು, ಪಕ್ಷಗಳು, ಕೋರ್ಟ್‌ ಹೀಗೆ ಎಲ್ಲರಿಗೂ ಸಮಸ್ಯೆನೆ. ಸೋ ಇವನ್ನೆಲ್ಲಾ ತಡೆಯೋಕೆ ʻಒಂದು ರಾಷ್ಟ್ರ, ಒಂದು ಚುನಾವಣೆʼ ಜಾರಿಗೆ ತರೋದು ಮುಖ್ಯವಾಗಿದೆ ಅಂತ ರಿಪೋರ್ಟ್‌ನಲ್ಲಿ ಹೇಳಲಾಗಿದೆ. ಜೊತೆಗೆ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳು ಏಕಕಾಲಕ್ಕೆ ನಡೆಯೋ ಹಾಗೇ ಮಾಡಲು ರಾಜ್ಯ ವಿಧಾನಸಭೆಗಳ ಅಧಿಕಾರವಧಿಯನ್ನ ಮೊಟಕುಗೊಳಿಸಬೇಕು ಅಂತ ಹೇಳಲಾಗಿದೆ. ಅಂದ್ರೆ ಮುಂಬರೋ ಸಾರ್ವತ್ರಿಕ ಚುನಾವಣೆ ನಂತ್ರ ಲೋಕಸಭೆ ರಚಿಸಲ್ಪಟ್ಟ ದಿನಾಂಕದಂದೇ ʻಒಂದು ರಾಷ್ಟ್ರ, ಒಂದು ಚುನಾವಣೆʼ ಜಾರಿಗೆ ತರಲಾಗುತ್ತೆ. ಸೋ ಈ ದಿನಾಂಕದ ನಂತ್ರ ಅದ್ಯಾವ್ದೇ ರಾಜ್ಯದ ವಿಧಾನಸಭೆ ಹೊಸದಾಗಿ ರಚಿಸಲ್ಪಟ್ರೂ… ಅದ್ರ ಅಧಿಕಾರವಧಿ, 2029ರ ಲೋಕಸಭಾ ಅಧಿಕಾರವಧಿಯೊಂದಿಗೆ ಕೊನೆಯಾಗುತ್ತೆ. ಸೋ ಈ ಮೂಲಕ ಇವೆರಡೂ ಚುನಾವಣೆಗಳನ್ನ ಏಕಕಾಲಕ್ಕೆ ನಡೆಸೋಕೆ ಸಾಧ್ಯವಾಗಲಿದೆ.

ಇನ್ನು ರಾಜ್ಯಗಳಿಂದ ಈ ಹೊಸ ಕಾನೂನಿನ ಜಾರಿಗೆ ಯಾವ್ದೇ ರೀತಿ ಅಡ್ಡಿಯಾಗಬಾರ್ದು ಅಂತ ಸಾಂವಿಧಾನಿಕ ತಿದ್ದುಪಡಿ ಮಾಡೋದು ಅನಿವಾರ್ಯ. ಈ ರೀತಿ ಮಾಡಿದ್ರೆ ರಾಜ್ಯಗಳಿಂದ ಅನುಮೋದನೆ ಪಡೆಯೋ ಅಗತ್ಯವಿಲ್ಲ ಅಂತ ರಿಪೋರ್ಟ್‌ನಲ್ಲಿ ತಿಳಿಸಲಾಗಿದೆ. ಅಲ್ಲದೇ ಅತಂತ್ರ ಪರಿಸ್ಥಿತಿ ಎದುರಾಗಿ, ಅಥವಾ ಯಾವುದಾದ್ರು ಕಾರಣಗಳಿಂದ ವಿಧಾನಸಭೆ ಅಥವಾ ಲೋಕಸಭೆ ವಿಸರ್ಜನೆಯಾದ್ರೆ, ಆಗ ಉಳಿದ ಅವಧಿಗೆ ಮಾತ್ರ ಚುನಾವಣೆ ನಡೆಸಬೇಕು ಅಂತ ಹೇಳಿದೆ. ಅಂದ್ರೆ ಉದಾಹರಣೆಗೆ ಸರ್ಕಾರ 2 ವರ್ಷ ಇದ್ದು ನಂತ್ರ ಬಿತ್ತು, ಅಸೆಂಬ್ಲಿ ಡಿಸಾಲ್ವ್‌ ಆಯ್ತು ಅಂದ್ರೆ ನಂತ್ರ ಬಂದ ಸರ್ಕಾರ ಉಳಿದ 3 ವರ್ಷಕ್ಕೆ ಮಾತ್ರ ಇರುತ್ತೆ. ಈ ಮೂಲಕ ಏಕಕಾಲದ ಚುನಾವಣೆಯನ್ನ ಮುಂದುವರೆಸಿಕೊಂಡು ಹೋಗ್ಬಹುದು ಅಂತ ಸೂಚಿಸಲಾಗಿದೆ. ಜೊತೆಗೆ ಎರಡು ಹಂತದಲ್ಲಿ ಈ ಚುನಾವಣೆಗಳನ್ನ ನಡೆಸಬೇಕು ಅಂತ ಹೇಳಲಾಗಿದೆ. ಮೊದಲ ಹಂತದಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಎಲೆಕ್ಷನ್‌ ನಡೀಬೇಕು. ಅದಾದ 100 ದಿನಗಳ ಒಳಗಾಗಿ ಸ್ಥಳೀಯ ಸಂಸ್ಥೆಗಳಿಗೆ ಅಂದ್ರೆ ಪಂಚಾಯಿತಿ, ನಗರಪಾಲಿಕೆ ಚುನಾವಣೆಗಳು ಒಟ್ಟಿಗೆ ನಡೀಬೇಕು ಅಂತ ಹೇಳಲಾಗಿದೆ. ಇನ್ನು ಈ ರಿಪೋರ್ಟ್‌ ಸಲ್ಲಿಸುವಾಗ ಕೇಂದ್ರ ಸಚಿವ ಅಮಿತ್‌ ಶಾ, ಕೇಂದ್ರ ಕಾನೂನು ಸಚಿವ ಅರ್ಜುನ್‌ ರಾಮ್‌ ಮೇಘಾವಲ್‌, ಡೆಮಾಕ್ರೆಟಿಕ್‌ ಪ್ರೊಗ್ರೆಸ್ಸಿವ್‌ ಆಜಾದ್‌ ಪಾರ್ಟಿಯ ಮುಖ್ಯಸ್ಥರಾದ ಗುಲಾಮ್‌ ನಬಿ ಆಜಾದ್‌ ಹಾಗೂ ಇನ್ನಿತರೆ ಕಮಿಟಿ ಸದಸ್ಯರು ಹಾಜರಿದ್ರು.

 

-masthmagaa.com

Contact Us for Advertisement

Leave a Reply