ಕರ್ನಾಟಕ ಬಂದ್‌: ಬುರ್ಖಾ ಧರಿಸಿ ಬಂದ ವಾಟಾಳ್‌ ನಾಗರಾಜ್‌

masthmagaa.com:

ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸದಂತೆ ಆಗ್ರಹಿಸಿ ಇಂದು ಮಾಡಿದ್ದ ಕರ್ನಾಟಕ ಬಂದ್‌ಗೆ ರಾಜ್ಯದ ಹಲವೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು ಸೇರಿದಂತೆ ಕಾವೇರಿ ಜಲಾನಯನ ಜಿಲ್ಲೆಗಳಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗಿದೆ. ಈ ವೇಳೆ ಹಲವು ಕನ್ನಡಪರ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದ ವಾಟಾಳ್‌ ನಾಗರಾಜ್‌ ಅವರು, ಬುರ್ಖಾ ಧರಿಸಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ಕರ್ನಾಟಕ ಸರ್ಕಾರ ತಮಿಳುನಾಡಿಗೆ ಕದ್ದು ನೀರು ಬಿಡುತ್ತಿದೆ ಅಂತ ಸಾಂಕೇತಿಸಲು ಈ ಕಪ್ಪು ಬಣ್ಣ ಧರಿಸಿದ್ದೇನೆ. ಇದನ್ನ ನ್ಯಾಯದೇವತೆ ಧರಿಸುವ ಬಟ್ಟೆ ಅಥವಾ ಬುರ್ಖಾ ಎಂದಾದರೂ ಕರೆಯಲಿ ಅಂತ ವಾಟಾಳ್ ನಾಗರಾಜ್ ಹೇಳಿದ್ದಾರೆ. ಇತ್ತ ತಮಿಳುನಾಡು ಸಿಎಂ ಸ್ಟಾಲಿನ್ ಪ್ರತಿಕೃತಿ ಮೇಲೆ ರಕ್ತ ಹರಿಸಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ‘ರಕ್ತ ಕೊಟ್ಟೇವು, ನೀರು ಕೊಡುವುದಿಲ್ಲ’ ಅಂತ ಘೋಷಣೆ ಕೂಗಿದ್ದಾರೆ. ರಾಜ್ಯದ ಹಲವು ಕಡೆಗಳಲ್ಲಿ ಸ್ಟಾಲಿನ್ ಪ್ರತಿಕೃತಿ ದಹನ, ಅರೆಬೆತ್ತಲೆ ಮೆರವಣಿಗೆ, ಉರುಳು ಸೇವೆ ಮಾಡಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ದಾವಣಗೆರೆ, ತುಮಕೂರು, ಚಿಕ್ಕಬಳ್ಳಾಪುರ ಸೇರಿದಂತೆ ಹಲವೆಡೆ ಮಿಶ್ರಪ್ರತಿಕ್ರಿಯೆ, ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನೊಂದ್‌ ಕಡೆ ರಾಜ್ಯದ್ಯಾಂತ ಕಾವೇರಿ ಕಿಚ್ಚು ಹೊತ್ತಿಯುರಿತ್ತಿರುವ ನಡುವೆಯೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತೊಮ್ಮೆ ರಾಜ್ಯಕ್ಕೆ ಶಾಕ್‌ ಕೊಟ್ಟಿದೆ. ತಮಿಳುನಾಡಿಗೆ ಅಕ್ಟೋಬರ್‌ 15ರವರೆಗೆ ದಿನನಿತ್ಯ 3 ಸಾವಿರ ಕ್ಯೂಸೆಕ್‌ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿದ್ದ ಸೂಚನೆಯನ್ನೇ ಮತ್ತೆ ಕಾವೇರಿ ಪ್ರಾಧಿಕಾರ ಇಂದು ನೀಡಿದೆ. ಅತ್ತ ಕಾವೇರಿ ನೀರಿಗಾಗಿ ಇಂದು ನಡೆದ ಕರ್ನಾಟಕ ಬಂದ್‌ಗೆ ಕಾವೇರಿ ನದಿ ಜನ್ಮಸ್ಥಳ ತಲಕಾವೇರಿಯಲ್ಲೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನಜೀವನ ಎಂದಿನಂತೆ ಸಾಗಿದೆ. ಕರ್ನಾಟಕ ಬಂದ್ ಕರೆ ಕಾವೇರಿ ನಾಡು ಕೊಡಗಿನಲ್ಲಿ ಯಾವುದೇ ಪರಿಣಾಮ ಬೀರಿಲ್ಲ. ಎಲ್ಲಾ ಅಂಗಡಿಗಳು, ಸಂಸ್ಥೆಗಳು, ಖಾಸಗಿ ಸಾರಿಗೆ ಸೌಲಭ್ಯಗಳು, ಶಾಲಾ-ಕಾಲೇಜುಗಳು ಯಾವುದೇ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸಿವೆ.

-masthmagaa.com

Contact Us for Advertisement

Leave a Reply