PSI ಅಕ್ರಮ ಪ್ರಕರಣದಲ್ಲಿ ಹೊಸ ತಿರುವು! ಗೃಹ ಸಚಿವರು ಎನ್ನಲಾದ ಆಡಿಯೋ ವೈರಲ್!

masthmagaa.com:

ರಾಜ್ಯದಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಗಿದ್ದ ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಹಿರಿಯ ಅಧಿಕಾರಿಗಳೇ ಶಾಮೀಲಾಗಿರೋದು ಈಗಾಗಲೇ ಬೆಳಕಿಗೆ ಬಂದಿದೆ. ಇದೀಗ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್‌ ನಾಯಕ ಪ್ರಿಯಾಂಕ್‌ ಖರ್ಗೆ ಹೊಸ ಆಡಿಯೋ ಒಂದನ್ನ ಬಿಡುಗಡೆ ಮಾಡಿದ್ದಾರೆ. ಅದ್ರಲ್ಲಿ ಪಿಎಸ್‌ಐ ಅಭ್ಯರ್ಥಿಯೊಬ್ರ ಜೊತೆಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಮಾತನಾಡಿದ್ದಾರೆ ಎನ್ನಲಾದ ಸಂಭಾಷಣೆಯ ಆಡಿಯೋ ತುಣಕು ಇದೆ. 8ಕ್ಕೂ ಅಧಿಕ ನಿಮಿಷಗಳ ಸಂಭಾಷಣೆಯಲ್ಲಿ ‘545 ಹುದ್ದೆ ನೇಮಕಾತಿ ಅಕ್ರಮದ ತನಿಖೆಯೇ ಇನ್ನೂ ಮುಗಿದಿಲ್ಲ. ಈಗ ಮತ್ತೆ 402 ಹುದ್ದೆಗಳ ನೇಮಕಾತಿಗೆ ಮುಂದಾಗಿದ್ದೀರಿ. ಇದರಿಂದ 545 ಹುದ್ದೆ ಪರೀಕ್ಷೆಯಲ್ಲಿ ಭಾಗವಹಿಸಿದ್ದ 56 ಸಾವಿರ ಮಂದಿಗೆ ಅನ್ಯಾಯವಾಗುವುದಿಲ್ವಾ ಅಂತ ಅಭ್ಯರ್ಥಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಅರಗ ಜ್ಞಾನೇಂದ್ರ ಅವರು ಅಂತ ಹೇಳಲಾಗ್ತಿರೋ ಧ್ವನಿಯಿಂದ ಪ್ರತಿಕ್ರಿಯೆ ಬಂದಿದ್ದು, ʻಯಾರದ್ದೋ ಖುಷಿಗೆ ಸರ್ಕಾರ ಕೆಲಸ ಮಾಡಲ್ಲ. ಸರ್ಕಾರ ಕಾನೂನು ಪ್ರಕಾರ ಹೋಗುತ್ತೆ. ನೀವು ರಾಜ್ಯಕ್ಕೆ ಹೇಳೋರು ಕೇಳೋರು ಅಲ್ಲ.. ತಾಂತ್ರಿಕ ಸಮಸ್ಯೆಗಳಿಂದ ಅಕ್ರಮಕ್ಕೆ ಸಹಕಾರ ಮಾಡಿದ ಕೆಲವರಿಗೆ ಬೇಲ್‌ ಸಿಕ್ಕಿದೆ. ಸರ್ಕಾರ ಎಲ್ಲವನ್ನೂ ನೋಡಿಕೊಳ್ಳುತ್ತೆ.. ಯಾವ್ಯಾವುದೋ ವಿಚಾರಕ್ಕೆ ನೀವು ತಲೆ ಕೆಡಿಸಿಕೊಳ್ಳಬೇಡಿ ಅಂತ ಹೇಳಿದ್ದಾರೆ. ಇನ್ನು ಮುಂದುವರೆದು ಮಾತನಾಡಿರೋ ಅಭ್ಯರ್ಥಿ, ಆರೋಪಿಗಳಿಗೆ ಶಿಕ್ಷೆ ಆಗುತ್ತೆ ಅಂತ ಹೇಳ್ತೀರಿ, ಕೆಲವರಿಗೆ ಈಗಾಗಲೇ ಬೇಲ್‌ ಸಿಕ್ಕಿದೆ..ಈ ಕೇಸ್‌ನಲ್ಲಿ ಇನ್ನೂ ಮೂರು ಶಾಸಕರು, ಡಿಜಿ ಐಜಿ ಎಲ್ಲ ಇದ್ದಾರೆ.. ಅವರ ವಿರುದ್ದ ಯಾಕೆ ತನಿಖೆ ಮಾಡ್ತಿಲ್ಲ ಅಂತ ಕೇಳಿದಾಗ ಗೃಹ ಸಚಿವರು ಅಂತ ಹೇಳಲಾದ ಧ್ವನಿಯಿಂದ ʻನೀವು ಹೇಳಿದವರ ವಿರುದ್ದ ಸಾಕ್ಷ್ಯ ಇನ್ನೂ ಸಿಕ್ಕಿಲ್ಲ. ಸುಮ್ಮಸುಮ್ಮನೇ ಎಲ್ಲರನ್ನೂ ತನಿಖೆ, ಅರೆಸ್ಟ್‌ ಮಾಡೋಕೆ ಆಗಲ್ಲ ಅಂತ ಹೇಳಿದ್ದಾರೆ. ಇದೇ ಆಡಿಯೋ ಇಟ್ಕೊಂಡು ಈಗ ಕಾಂಗ್ರೆಸ್‌ ನಾಯಕರು ಸರ್ಕಾರದ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ. ಸರ್ಕಾರ ಪ್ರಭಾವಿಗಳಿಗೆ ರಕ್ಷಣೆ ಕೊಡ್ತಿದೆ ಅಂತ ಆರೋಪಿಸಿದ್ದಾರೆ.

-masthmagaa.com

Contact Us for Advertisement

Leave a Reply