ಚೀನಾ ಸರ್ವಾಧಿಕಾರಿ ವಿರುದ್ದ ಜನರ ಪ್ರತಿಭಟನೆ! ಯಾಕೆ?

masthmagaa.com:

ಕೋವಿಡ್‌ ಕಠಿಣ ನಿಯಮಗಳಿಂದ ಚೀನಾದ ಜನ ಬೇಸತ್ತು ಹೋಗಿದ್ದಾರೆ. ಇಷ್ಟು ದಿನ ಸುಮ್ಮನಿದ್ದ ಚೀನಾ ಜನ ಈಗ ರಾಜಧಾನಿ ಬೀಜಿಂಗ್‌ನಲ್ಲಿ ಅಧ್ಯಕ್ಷ ಷಿ ಜಿನ್‌ಪಿಂಗ್‌ ವಿರುದ್ದ ಸರ್ವಾಧಿಕಾರಿಯನ್ನ ತೆಗೆದು ಹಾಕಿ ಅನ್ನೊ ಬ್ಯಾನರ್‌ಗಳನ್ನ ಹಾಕಿ ಪ್ರತಿಭಟನೆ ಮಾಡಿದ್ದಾರೆ. ಆದರೆ ಅಲ್ಲಿನ ಅಧಿಕಾರಿಗಳು ಸರ್ಕಾರಿ ವಿರೋಧಿ ಘೋಷಣೆಗಳಿದ್ದ ಬ್ಯಾನರ್‌ಗಳನ್ನು, ತೆಗೆದು ಹಾಕಿದ್ದಾರೆ. ಚೀನಾದಲ್ಲಿ ಆಡಳಿತದಲ್ಲಿರೋ ಕಮ್ಯುನಿಸ್ಟ್‌ ಪಾರ್ಟಿಯ 20ನೇ ಸಭೆ ಹತ್ತಿರದಲ್ಲಿದೆ. ಈ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಯಾಕಂದ್ರೆ ಜಿನ್‌ಪಿಂಗ್ ತಮ್ಮ ಮೂರನೇ ಅವಧಿಗೆ ಅಧಿಕಾರವನ್ನ ಭದ್ರಗೊಳಿಸೋ ಯೋಜನೆಯಲ್ಲಿದ್ದಾರೆ. ಜಿನ್‌ಪಿಂಗ್‌ರ ಕೋವಿಡ್‌ ನೀತಿಗಳಿಂದ ನೊಂದಿರೊ ಜನ, ಅವರನ್ನ ಪದಚ್ಯುತಿ ಮಾಡ್ಬೇಕು. ಕೋವಿಡ್‌ ಸ್ಟ್ರಿಕ್ಟ್‌ ನಿಯಮಗಳನ್ನ ನಿಲ್ಲಿಸ್ಬೇಕು ಅಂತ ಆಗ್ರಹಿಸುತ್ತಿದ್ದಾರೆ. ಜೊತೆಗೆ ಈ ಸಂದೇಶವಿರೊ ಇಮೇಜ್‌, ವಿಡಿಯೋಗಳನ್ನ ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ ಅಂತ ಮಾಹಿತಿಯಿದೆ. ಚೀನಾದಲ್ಲಿ ಈಗಾಗಲೇ ಟ್ವಿಟರ್‌ ಸೇರಿದಂತೆ ಹಲವು ಸೋಷಿಯಲ್ ಮೀಡಿಯಾ ಆಪ್‌ ಗಳನ್ನ ಉಪಯೋಗಿಸುವಂತಿಲ್ಲ. ಚೀನಾದಲ್ಲಿ ಸರ್ಕಾರ ವಿರುದ್ದ ಏನೇ ಮಾಡಿದ್ರೂ ಅದು ಹರಡದಂತೆ ತಕ್ಷಣವೇ ತಡೆಯಲಾಗುತ್ತೆ. ಇರೋ ಆಪ್‌ಗಳ ಮೇಲೂ ಅಲ್ಲಿನ ಸರ್ಕಾರಕ್ಕೆ ಕಂಟ್ರೋಲ್‌ ಇದೆ. ಅಂದ್ಹಾಗೆ ಚೀನಾದ ಶಾಂಗೈನಲ್ಲಿ ಮೂರು ತಿಂಗಳಲ್ಲೇ ಕೋವಿಡ್‌ನ ಹೈಯಸ್ಟ್‌ ಕೇಸ್‌ಗಳು ವರದಿಯಾಗಿವೆ. ಎಷ್ಟು ಅಂದ್ರೆ 47. ಜೀರೊ ಕೋವಿಡ್‌ ಪಾಲಿಸಿಯಲ್ಲಿರೋ ಚೀನಾಗೆ ಈ ನಂಬರ್‌ ತುಂಬಾ ದೊಡ್ಡದು ಅಂತ ಹೇಳಲಾಗಿದ್ದು‌, ಮತ್ತೆ ದೇಶದ ಪ್ರಮುಖ ನಗರಗಳನ್ನ ಬಂದ್‌ ಮಾಡೋಕೆ ಚೀನಾ ಸರ್ಕಾರ ಮುಂದಾಗಿದೆ. ಈಗಾಗಲೇ ಶಾಂಘೈನ ಹಲವು ಶಾಲೆಗಳನ್ನ ಬಂದ್‌ ಮಾಡಲಾಗಿದೆ. ಇನ್ನು ಚೀನಾದ ಈ ಕಠಿಣ ಕೋವಿಡ್‌ ನೀತಿಯಿಂದಾಗಿ ಅಲ್ಲಿನ ವ್ಯವಹಾರಗಳಿಗೆ, ಪ್ರಜೆಗಳಿಗೆ ಅತ್ಯಂತ ಸಮಸ್ಯೆಯಾಗಿದೆ. ಜೀರೊ ಕೋವಿಡ್‌ ನೀತಿ ಜೀವಗಳನ್ನ ಉಳಿಸುತ್ತೆ. ಆದ್ರೆ ಜೀವನೋಪಾಯವನ್ನ ಅಲ್ಲ ಅಂತ ಅಳಲನ್ನ ತೋಡಿಕೊಂಡ ಜನ ಈ ತರ ಬ್ಯಾನರ್‌ ಹಾಕುವ ಮೂಲಕ ತಮ್ಮ ಆಕ್ರೋಶ ಹೊರಹಾಕ್ತಿದಾರೆ.

-masthmagaa.com

Contact Us for Advertisement

Leave a Reply