100 ರೂಪಾಯಿ ದೇಣಿಗೆ ನೀಡುವ ಆದೇಶ ಹಿಂಪಡೆದ ಸರ್ಕಾರ!

masthmagaa.com:

ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅಭಿವೃದ್ದಿಗಾಗಿ ದಾನ, ದೇಣಿಗೆಗಳನ್ನ ಸ್ವೀಕರಿಸೋ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿದ್ದ ಸುತ್ತೋಲೆಯನ್ನ ಹಿಂಪಡೆದಿದೆ. ಸರ್ಕಾರಿ ಶಾಲೆಗಳ ಶೌಚಾಲಯ, ವಿದ್ಯುತ್‌ ಬಿಲ್‌, ಕುಡಿಯುವ ನೀರು ನಿರ್ವಹಣೆಗೆ ಪೋಷಕರಿಂದ 100 ರೂಪಾಯಿ ದೇಣಿಗೆ ರೂಪದಲ್ಲಿ ಪಡೆಯೋಕೆ ಮುಂದಾಗಿತ್ತು. ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಕಲ್ಪಸಲು ಪ್ರತಿ ವರ್ಷ ಸರ್ಕಾರ ಬಜೆಟ್​ನಲ್ಲಿ ಅನುದಾನ ಬಿಡುಗಡೆ ಮಾಡುತ್ತೆ. ಆದರೆ, ಕೆಲವೊಮ್ಮೆ ಹೆಚ್ಚುವರಿ ಹಣಕಾಸಿನ ನೆರವು ಬೇಕಾಗುತ್ತೆ. ಪ್ರತಿ ವಿದ್ಯಾರ್ಥಿಗಳ ಪೋಷಕರಿಂದ ದಾನ ದೇಣಿಗೆ ರೂಪದಲ್ಲಿ ಮಾಸಿಕ 100 ರೂಪಾಯಿ ಹಣವನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಖಾತೆಗೆ ಸಂದಾಯ ಮಾಡಿ, ಅದನ್ನ ಶಾಲೆಯ ಅಭಿವೃದ್ದಿ ಕಾರ್ಯಗಳಿಗೆ ಬಳಸಬಹುದು ಅಂತ ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿತ್ತು. ಆದ್ರೆ ಈ ಸುತ್ತೋಲೆಗೆ ಪೋಷಕರು, ಶಿಕ್ಷಣ ತಜ್ಞರು ಆಕ್ರೋಶ ವ್ಯಕ್ತಪಡಿಸಿದ್ರು. ಬಡ ಪಾಲಕರ ಬಳಿ ಹಣ ಸುಲಿಗೆಗೆ ಶಿಕ್ಷಣ ಇಲಾಖೆ ಮುಂದಾಗಿದೆ ಅಂತ ಟೀಕೆಗಳು ಕೇಳಿ ಬಂದಿದ್ವು. ಬಡವರು ಉಚಿತ ಶಿಕ್ಷಣ ಅಂತ ತಮ್ಮ ಮಕ್ಕಳನ್ನ ತಂದು ಸರ್ಕಾರಿ ಶಾಲೆಗೆ ಹಾಕ್ತಾರೆ. ಇದೀಗ ಸರ್ಕಾರ ವಸೂಲಿಗೆ ಮುಂದಾದ್ರೆ ಹೇಗೆ. ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ 2009ರ ಸ್ಪಷ್ಟ ಉಲ್ಲಂಘನೆ ಅಂತ ಆರೋಪಿಸಲಾಗಿತ್ತು. ಇತ್ತ ಇದಕ್ಕೆ ಪ್ರತಿಕ್ರಿಯಿಸಿರೊ ಶಿಕ್ಷಣ ಸಚಿವ ಬಿಸಿ ನಾಗೇಶ್‌, ಇದರಲ್ಲಿ ತಮ್ಮ ಹಾಗೂ ಸಿಎಂ ಬೊಮ್ಮಾಯಿ ಅವರ ಯಾವುದೇ ಪಾತ್ರವಿಲ್ಲ ಅಂತ ಹೇಳಿದ್ರು. ಇತ್ತ ಇದಕ್ಕೆ ಪ್ರತಿಕ್ರಿಯಿಸಿರೊ ಮಾಜಿ ಸಿಎಂ ಸಿದ್ದರಾಮಯ್ಯ, ಸರ್ಕಾರಿ ಶಾಲೆಯ ಬಡ ಮಕ್ಕಳ ಮೇಲೆ ಬಿಜೆಪಿ ಸರ್ಕಾರದ ಭ್ರಷ್ಟ ಕಣ್ಣು ಬಿದ್ದಿದೆ. ಕಮಿಷನ್ ಹೆಸರಲ್ಲಿ ರಾಜ್ಯದ ಖಜಾನೆ ಲೂಟಿ ಆಯಿತು. ಈಗ ಬಡ ಮಕ್ಕಳ ಪೋಷಕರ ಜೇಬಿಗೂ ಕತ್ತರಿ ಹಾಕ್ತಿರೊ ಬಿಜೆಪಿ ಸರ್ಕಾರಕ್ಕೆ ಇಂಥಾ ದೈನೇಸಿ ಸ್ಥಿತಿ ಬರಬಾರದಿತ್ತು ಅಂತ ಆಕ್ರೋಶ ಹೊರಹಾಕಿದ್ರು.  ಹೀಗೆ ಟೀಕೆಗಳು ಹರಿದು ಬಂದ ಹಿನ್ನಲೆಯಲ್ಲಿ ಸುತ್ತೋಲೆಯನ್ನ ವಾಪಸ್‌ ಪಡೆದಿದೆ.

-masthmagaa.com

Contact Us for Advertisement

Leave a Reply