ಪುಟಿನ್‌ರಿಂದ ಇಂದು ಮಹತ್ವದ ಘೋಷಣೆ! ರಷ್ಯಾ ಪಾಲಾಗುತ್ತಾ ಯುಕ್ರೇನ್‌ ನೆಲ?

masthmagaa.com:

ಯುಕ್ರೇನ್‌ನಿಂದ ರಷ್ಯಾ ವಶಪಡಿಸಿಕೊಂಡಿರೋ ಪ್ರದೇಶಗಳನ್ನ ಅಧಿಕೃತವಾಗಿ ರಷ್ಯಾಗೆ ಸೇರಿಸೋ ಸಂಬಂಧ ಇಂದು ಪುಟಿನ್‌ ಮಹತ್ವದ ಘೋಷಣೆ ಮಾಡಲಿದ್ದಾರೆ. ಆರಂಭದಲ್ಲಿ ಈ ಪ್ರದೇಶಗಳನ್ನ ಸ್ವತಂತ್ರಗೊಳಿಸ್ತೀವಿ ಅಂತ ಯುಕ್ರೇನ್‌ ಮೇಲೆ ಹೌಹಾರಿ ಬಿದ್ದಿದ್ದ ರಷ್ಯಾ, ಈಗ ಅದನ್ನ ತನಗೇ ಸೇರಿಸಿಕೊಳ್ಳೊಕೆ ಮುಂದಾಗಿದೆ. ಡೋನೆಟ್ಸ್ಕ್‌, ಲುಹಾನ್ಸ್ಕ್‌, ಖೇರ್ಸಾನ್‌ ಹಾಗೂ ಜಪೊರಿಜಿಜಿಯಾ ಪ್ರದೇಶಗಳನ್ನ ರಷ್ಯಾ ತನ್ನ ಕಂಟ್ರೋಲ್‌ಗೆ ಈಗಾಗಲೇ ತಗೊಂಡಿದ್ದು ಅಲ್ಲಿ ಜನಮತ ಸಂಗ್ರಹವನ್ನೂ ಮುಗಿಸಲಾಗಿದೆ. ಇದರ ಬೆನ್ನಲ್ಲೇ ಪುಟಿನ್ ಅವರ ಅಧ್ಯಕ್ಷರ ಅರಮನೆ ಕ್ರೆಮ್ಲಿನ್‌ನಲ್ಲಿ ಕಾರ್ಯಕ್ರಮ ಆಯೋಜನೆ ಆಗಿದೆ. ಅಲ್ಲೇ ಪುಟಿನ್‌ ಈ ವಶಪಡಿಸಿಕೊಂಡಿರೋ ಯುಕ್ರೇನ್‌ನ 4 ಪ್ರದೇಶಗಳನ್ನ ರಷ್ಯಾಗೆ ಸೇರಿಸುವ ಅಧಿಕೃತ ಘೋಷಣೆ ಮಾಡಲಿದ್ದಾರೆ ಅಂತ ಹೇಳಲಾಗ್ತಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರೋ ವಿಶ್ವಸಂಸ್ಥೆ ಮುಖ್ಯಸ್ಥ ಆಂಟನಿಯೋ ಗುಟ್ರೆಸ್‌ ಇದನ್ನ ಒಪ್ಪಿಕೊಳ್ಳೋಕೆ ಸಾಧ್ಯವೇ ಇಲ್ಲ. ಇದು ಶಾಂತವಾಗಿರೋ ಜಗತ್ತನ್ನ ಅಶಾಂತಿಗೆ ದೂಡುತ್ತೆ..ಈ ಪ್ರದೇಶಗಳನ್ನ ರಷ್ಯಾ ತನಗೆ ಸೇರಿಸಿಕೊಂಡ್ರೆ ಅದಕ್ಕೆ ಯಾವುದೇ ವ್ಯಾಲ್ಯೂ ಇರಲ್ಲ. ಅದು ಖಂಡನೆಗೆ ಅರ್ಹವಾಗಿರುತ್ತೆ.. ರಷ್ಯಾ ವಿಶ್ವಸಂಸ್ಥೆಯ ಸೆಕ್ಯೂರಿಟಿ ಕೌನ್ಸಿಲ್‌ನಲ್ಲಿ ಒಂದು ಪರ್ಮನೆಂಟ್‌ ಮೆಂಬರ್‌ ಆಗಿ ವಿಶ್ವಸಂಸ್ಥೆಯ ಕಾನೂನುಗಳಿಗೆ ಗೌರವ ಕೊಡಬೇಕು ಅಂತ ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮತ್ತೆ ಆರ್ಭಟ ಮಾಡಿ ರಷ್ಯಾ ಯುಕ್ರೇನ್‌ ಪ್ರದೇಶಗಳನ್ನ ಕಿತ್ತುಕೊಂಡ್ರೆ ನಾವು ಅದಕ್ಕೆ ಮಾನ್ಯತೆ ನೀಡೋದಿಲ್ಲ ಅಂತ ಹೇಳಿದ್ದಾರೆ. ಯುಕ್ರೇನ್‌ ಅಧ್ಯಕ್ಷ ವೊಲಿಡಿಮಿರ್‌ ಝೆಲೆನ್ಸ್ಕಿ ಮಾತನಾಡಿ ʻಈ ಯುದ್ಧ ಹೀಗೆ ಮುಂದುವರೆದ್ರೆ, ರಷ್ಯಾದ ಪ್ರತಿಯೊಬ್ಬ ವ್ಯಕ್ತಿಯೂ ಇದರ ನಷ್ಟದ ಭಾರ ಹೊರಬೇಕಾಗುತ್ತೆ. ರಷ್ಯಾದ ಸಮಾಜದಲ್ಲಿ, ಮಾನವೀಯ ಮೌಲ್ಯಗಳಿಗೆ ಯಾವುದೇ ಗೌರವವೇ ಇರುವುದಿಲ್ಲ ಅಂತ ಹೇಳಿದ್ದಾರೆ. ಅಲ್ದೇ ಈ ಯುದ್ದವನ್ನ ಈಗಲೂ ನಿಲ್ಲಿಸಬಹುದು. ಆದರೆ ಅದಕ್ಕೂ ಮೊದಲು ಆ ರೀತಿ ಮಾಡೋಕೆ ರಷ್ಯಾದಲ್ಲಿ, ʻಜೀವಕ್ಕಿಂತ ಹೆಚ್ಚಾಗಿ ಯುದ್ಧವೇ ಬೇಕುʼ ಅಂತಿರೋ ಒಬ್ಬ ವ್ಯಕ್ತಿಯನ್ನು ತಡೀಬೇಕು ಅಂತ ಪುಟಿನ್‌ ವಿರುದ್ದ ನೇರ ಆಕ್ರೋಶ ಹೊರಹಾಕಿದ್ದಾರೆ. ಇದರ ನಡುವೆಯೇ ಪುಟಿನ್‌ ರಷ್ಯಾ ಯುಕ್ರೇನ್‌ ಸಂಘರ್ಷದ ಕುರಿತು ಮಾತನಾಡಿದ್ದಾರೆ. ಈಗ ನಡೀತಿರೋ ಈ ಸಂಘರ್ಷ ಸೋವಿಯತ್‌ ಯೂನಿಯನ್‌ ಪತನದ ಪರಿಣಾಮ ಅಂತ ಹೇಳಿದ್ದಾರೆ. Member states of the Commonwealth of Independent States ಅಥವಾ ಈ ಮುಂಚೆ ಸೋವಿಯತ್‌ ಭಾಗವಾಗಿದ್ದ ಕೆಲವು ದೇಶಗಳ ಗಡಿಗಳಲ್ಲಿ ಸಂಘರ್ಷ ನಡೀತಿದೆ. ಅದೇ ನಮ್ಮ ನಡುವೆ ಕೂಡ ನಡೀತಿದೆ. ಇದಕ್ಕೆಲ್ಲಾ ಸೋವಿಯತ್‌ ಯೂನಿಯನ್‌ ಒಡೆದು ಹೋಗಿದ್ದೇ ಕಾರಣ ಅಂತ ಹೇಳಿದ್ದಾರೆ. ಅಂದ್ರೆ ಈಗ ಅರ್ಮೇನಿಯ ಹಾಗೂ ಅಜರ್ಬೈಜಾನ್‌ ನಡುವೆ, ಮತ್ತೆ ತಜಕಿಸ್ತಾನ ಮತ್ತು ಕಿರ್ಗಿಸ್ತಾನದ ನಡುವೆ ಜಗಳ ನಡೀತಿದೆಯಲ್ಲಾ ಅದನ್ನ ಉದಾಹರಣೆಯನ್ನಾಗಿ ಇಟ್ಕೊಂಡು ಪುಟಿನ್ ನಾವೂ ಅದನ್ನೇ ಮಾಡ್ತಿದ್ದೀವಿ ಅಂತ ಹೇಳಿದ್ದಾರೆ. ಇತ್ತ ರಷ್ಯಾದಲ್ಲಿ ಪುಟಿನ್‌ ಸೇನಾ ಸಜ್ಜುಗೊಳಿಸುವಿಕೆಗೆ ಆದೇಶ ಕೊಟ್ಟ ಮೇಲೆ ಅಲ್ಲಿನ ಯುವಕರು ಬೇರೆ ದೇಶಗಳಿಗೆ ಸಾಮೂಹಿಕ ವಲಸೆ ಹೋಗ್ತಿದ್ದಾರೆ. ಕೆಲವರು ಉಜ್ಬೇಕಿಸ್ತಾನಕ್ಕೂ ಹೋಗ್ತಿದ್ದಾರೆ . ಆ ರೀತಿ ಬಂದ ರಷ್ಯನ್ನರನ್ನು ವಾಪಾಸ್‌ ಅವರ ದೇಶಕ್ಕೆ ಗಡೀಪಾರು ಮಾಡುವ ಯಾವುದೇ ಯೋಜನೆಯನ್ನು ನಾವು ಹೊಂದಿಲ್ಲ ಅಂತ ಉಜ್ಬೇಕಿಸ್ತಾನ್ ಸರ್ಕಾರ ಹೊಸ ಹೇಳಿಕೆ ನೀಡಿದೆ. ಇದರ ಮಧ್ಯೆದಲ್ಲಿಯೇ ಯುಕ್ರೇನ್‌ಗೆ ಅಮೆರಿಕದಿಂದ ಹೊಸದಾಗಿ ಸುಮಾರು 12 ಬಿಲಿಯನ್‌ ಡಾಲರ್ ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ ಸುಮಾರು 98,400 ಕೋಟಿ ರೂಪಾಯಿ ಸಹಾಯ ಮಾಡೋಕೆ ಅಲ್ಲಿನ ಸಂಸತ್‌ ಒಪ್ಪಿಗೆ ಕೊಟ್ಟಿದೆ. ಇದನ್ನ ಆರ್ಥಿಕ ಹಾಗೂ ಸೈನಿಕ ಉದ್ದೇಶಗಳಿಗೆ ಬಳಸಿಕೊಳ್ಳಬೇಕು ಅಂತ ಅಮೆರಿಕ ಹೇಳಿದೆ.

-masthmagaa.com

Contact Us for Advertisement

Leave a Reply