ಮಲೆನಾಡಲ್ಲಿ ಕೋಮು ದಳ್ಳುರಿ! ಶಿವಮೊಗ್ಗ ಧಗ ಧಗ!

masthmagaa.com:

ಹಿಜಾಬ್‌ ಗಲಾಟೆಗಳ ನಂತ್ರ ಹಲವು ತಿಂಗಳಕಾಲ ಪ್ರಶಾಂತವಾಗಿದ್ದ ಕರುನಾಡಲ್ಲಿ ಮತ್ತೆ ಕೋಮುಸಂಘರ್ಷ ಭುಗಿಲೆದ್ದಿದೆ. ಸರ್ವಜನಾಂಗದ ಶಾಂತಿಯ ತೋಟ ಅಂತ ಬರೆದಿದ್ದ ನಾಡಕವಿ ರಸಋಷಿ ಕುವೆಂಪುರವರ ತವರಿನಲ್ಲೇ ಶಾಂತಿ ಕದಡಿರೋದು ವರದಿಯಾಗಿದೆ. ಈದ್‌ ಮಿಲಾದ್‌ ಮೆರವಣಿಗೆ ವೇಳೆ ಶಿವಮೊಗ್ಗದ ರಾಗಿಗುಡ್ಡ- ಶಾಂತಿನಗರ ಪ್ರದೇಶದಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿದ್ದು ನಂತರ ಹಿಂಸಾಚಾರಕ್ಕೆ ತಿರುಗಿದೆ. ಈ ವೇಳೆ ಹಿಂದೂ ಸಮುದಾಯದ 6ಕ್ಕೂ ಹೆಚ್ಚು ಮನೆಗಳು ಹಾಗೂ ವಾಹನಗಳ ಮೇಲೆ ಗುಂಪೊಂದು ಕಲ್ಲು ತೂರಾಟ ನಡೆಸಿದೆ. ಘಟನೆಯಲ್ಲಿ ಮನೆಗಳ ಕಿಟಕಿ, ವಸ್ತುಗಳು ಹಾಗೂ ಮಾರುತಿ ಒಮ್ನಿ ಸೇರಿದಂತೆ ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಅಷ್ಟೆ ಅಲ್ದೆ ಪೊಲೀಸರ ಮೇಲೂ ಉದ್ರಿಕ್ತ ಗುಂಪು ಕಲ್ಲು ತೂರಾಟ ನಡೆಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಹಿಂದೂ ಹಾಗೂ ಮುಸ್ಲಿಂ ಸಮುದಾಯದ 40ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಹೆಚ್ಚಿನ ಪೊಲೀಸರನ್ನು ಸ್ಥಳಕ್ಕೆ ಕರೆಸಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ರಾಗಿಗುಡ್ಡ ಪ್ರದೇಶದ ಎಲ್ಲ ವಾರ್ಡ್ ಗಳು ಹಾಗೂ ಶಾಂತಿನಗರ ಭಾಗದಲ್ಲಿ ಮುಂದಿನ ಆದೇಶದವರೆಗೂ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ರಾಗಿ ಗುಡ್ಡ ಪ್ರದೇಶದಲ್ಲಿ ಪರಿಸ್ಥಿತಿ ಈಗ ಶಾಂತಿಯುತವಾಗಿದ್ದು, ನಿಯಂತ್ರಣದಲ್ಲಿದೆ ಅಂತ ಪೊಲೀಸರು ತಿಳಿಸಿದ್ದಾರೆ. ಇತ್ತ ಘಟನೆಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಯಾವುದೇ ಧಾರ್ಮಿಕ ಕಾರ್ಯಕ್ರಮಕ್ಕೆ ಧಕ್ಕೆ ತರುವುದು, ಕಲ್ಲು ತೂರುವುದು ಕಾನೂನು ಬಾಹಿರ. ಇಂಥ ಚಟುವಟಿಕೆಗಳನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ, ಇಂತಹ ಕೃತ್ಯಗಳನ್ನು ಖಂಡಿತಾ ಹತ್ತಿಕ್ಕುತ್ತೇವೆ ಅಂತ ಹೇಳಿದ್ದಾರೆ. ಅತ್ತ ಗೃಹ ಸಚಿವ ಜಿ. ಪರಮೇಶ್ವರ್‌ ಮಾತನಾಡಿ, ಶಿವಮೊಗ್ಗದಲ್ಲಿ ದೊಡ್ಡ ಪ್ರಮಾಣದ ಗಲಾಟೆಯನ್ನು ಪೊಲೀಸರು ತಪ್ಪಿಸಿದ್ದಾರೆ. ಎರಡೂ ಗುಂಪಿನ ಜನರನ್ನು ಬಂಧಿಸಿದ್ದಾರೆ’ ಅಂತ ಹೇಳಿದ್ದಾರೆ. ಜೊತೆಗೆ ಶಿವಮೊಗ್ಗದ ಘಟನೆಗೆ ಕಾರಣ ಏನು ಅಂತ ಬಹಿರಂಗಗೊಳಿಸಲು ಸಾಧ್ಯವಿಲ್ಲ. ಏನಾಗಿದೆ ಅಂತ ನಮಗೆ ಗೊತ್ತಿದ್ದು, ನಾವು ಮೊದಲೇ ಕಟ್ಟೆಚ್ಚರ ವಹಿಸಿದ್ವಿ ಅಂತ ಪರಮೇಶ್ವರ್‌ ಹೇಳಿದ್ದಾರೆ. ಇನ್ನೊಂದ್‌ ಕಡೆ ಈ ಕುರಿತು ರಿಯಾಕ್ಟ್‌ ಮಾಡಿರುವ ಬಿಜೆಪಿ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ‘ಚಿಂತೆ ಇಲ್ಲದವನಿಗೆ, ದಂಗೆಯಲ್ಲಿಯೂ ನಿದ್ದೆ. ಕರ್ನಾಟಕ ಓಲೈಕೆ ರಾಜಕಾರಣದ ಪರಾಕಾಷ್ಠೆಯಲ್ಲಿ ದಹದಹಿಸುತ್ತಿದೆ’ ಅಂತ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದೆ.

-masthmagaa.com

Contact Us for Advertisement

Leave a Reply