ಶಿವಾಜಿ ಸುರತ್ಕಲ್ ಪಾರ್ಟ್ 2: ಅಕ್ಟೋಬರ್ ನಲ್ಲಿ ಶೂಟಿಂಗ್ ಶುರು!

masthmagaa.com:

2020 ರಲ್ಲಿ ಬಿಡುಗಡೆಯಾಗಿದ್ದ ಶಿವಾಜಿ ಸುರತ್ಕಲ್ ಪ್ರೇಕ್ಷಕರ ಮನಗೆದ್ದಿತ್ತು. ಸ್ವತಃ ವಿತರಕರಿಂದಲೇ ಬ್ಲಾಕ್ -ಬಸ್ಟರ್ ಎನಿಸಿಕೊಂಡಿತ್ತು. ರಮೇಶ್ ಅರವಿಂದ್ ಅಭಿನಯದಲ್ಲಿ, ನಿರ್ದೇಶಕರಾದ ಆಕಾಶ್ ಶ್ರೀವತ್ಸ ರವರ ಸಾರಥ್ಯದಲ್ಲಿ ಮತ್ತು ನಿರ್ಮಾಪಕರಾದ ರೇಖಾ ಕೆ. ಎನ್. ಹಾಗು ಅನುಪ್ ರವರ ನೇತೃತ್ವದಲ್ಲಿ ಮತ್ತದೇ ಶೀರ್ಷಿಕೆಯಲ್ಲಿ ಭಾಗ -2 ಮಾಡಹೊರಟಿರುವುದು ನಿಮಗೆ ಈಗಾಗಲೇ ಗೊತ್ತಿದೆ. ಸಂಪೂರ್ಣವಾಗಿ ಕಥೆ – ಚಿತ್ರಕಥೆ ಮುಗಿಸಿಕೊಂಡಿರುವ ಚಿತ್ರತಂಡ ಅಕ್ಟೋಬರ್ ನಲ್ಲಿ ಶೂಟಿಂಗ್ ಶುರುಮಾಡುವ ಯೋಚನೆಯಲ್ಲಿದೆ.

ಶಿವಾಜಿಯಾಗಿ ರಮೇಶ್ ಅರವಿಂದ್ ರವರು ಬಣ್ಣ ಹಚ್ಚಲಿದ್ದು, ರಾಧಿಕಾ ನಾರಾಯಣ್, ರಘು ರಾಮನಕೊಪ್ಪ ಮತ್ತು ವಿದ್ಯಾಮೂರ್ತಿ ಭಾಗ-2 ರಲ್ಲೂ ಮುಂದುವರಿಯಲಿದ್ದಾರೆ. ಉಳಿದ ತಾರಾಗಣದಲ್ಲಿ ಹೊಸಮುಖಗಳು ಪರಿಚಯಗೊಳ್ಳಲಿದ್ದಾರೆ. ಶಿವಾಜಿ ಸುರತ್ಕಲ್ ಎರಡು ಕಾಲಘಟ್ಟದಲ್ಲಿ ನಡೆಯುವ ಚಿತ್ರವಾಗಿತ್ತು, ಆದರೆ ಭಾಗ-2 ಬಹುಕೋನಗಳಿರುವ ಚಿತ್ರಕಥೆ ಹೊಂದಿದ್ದು, ಪತ್ತೇದಾರಿ ಕತೆಯಾಗಿರುವುದರಿಂದ ಕೊಲೆಗಾರನ ಹುಡುಕಾಟದ ಮಾರ್ಗದಲ್ಲಿ ಚಲಿಸುತ್ತಿರುತ್ತದೆ.

ಚಿತ್ರಮಂದಿರ ಭೇಟಿಯ ಸಂದರ್ಭ ಎದುರಾಗಿದ್ದ ಅನೇಕ ಪ್ರಶ್ಮೆಗಳಿಗೆ, ವಿಶೇಷವಾಗಿ ಶಿವಾಜಿ ಸುರತ್ಕಲ್ ಎಂಬ ಶೀರ್ಷಿಕೆಗೆ ಈ ಚಿತ್ರದಲ್ಲಿ ನಿರ್ದೇಶಕರು ಉತ್ತರವಿಟ್ಟಿದ್ದಾರೆ. ಗುರುಪ್ರಸಾದ್ M. G. ಛಾಯಾಗ್ರಾಹಕರಾಗಿ ಮುಂದುವರಿಯಲಿದ್ದು, ಉಳಿದಂತೆ ತಾಂತ್ರಿಕ ತಂಡವನ್ನು ಸಧ್ಯದಲ್ಲೇ ಬಹಿರಂಗಗೊಳಿಸಲಿದೆ ಚಿತ್ರತಂಡ. ಭಾಗ-1 ರ ಯಶಸ್ಸು ಮತ್ತು ತಮಿಳು, ಮಲಯಾಳಂ, ತೆಲುಗಿಗೆ ರೀಮೇಕ್ ರೈಟ್ಸ್ ಮಾರಾಟವಾಗಿದ್ದರಿಂದ ಚಿತ್ರತಂಡ ಮತ್ತಷ್ಟು ಹುರುಪಿನಿಂದ ಅದ್ದೂರಿಯಾಗಿ ಚಿತ್ರ ನಿರ್ಮಿಸುವ ತಯಾರಿಯಲ್ಲಿದೆ. ಪ್ರೇಕ್ಷಕರು ಹಾಗು ಪತ್ರಕರ್ತರ ಸಹಕಾರ ಮತ್ತು ಪ್ರೋತ್ಸಾಹ ಶಿವಾಜಿ ಸುರತ್ಕಲ್ ಭಾಗ-1 ಕ್ಕೆ ನೀಡಿದಂತೆ ಈ ಚಿತ್ರಕ್ಕೂ ನೀಡಬೇಕೆನ್ನುವುದು ಚಿತ್ರತಂಡದ ವಿನಮ್ರ ಕೋರಿಕೆಯಾಗಿದೆ.

-masthmagaa.com

Contact Us for Advertisement

Leave a Reply