ಮಸ್ಕ್‌ – ಮಾರ್ಕ್‌ ಕುಸ್ತಿಗೆ ಅಖಾಡ ಸಜ್ಜು! Xನಲ್ಲಿ ನೇರ ಪ್ರಸಾರ!

masthmagaa.com:

ಇಷ್ಟು ದಿನ ಸೋಷಿಯಲ್‌ ಮೀಡಿಯಾ ಕ್ಷೇತ್ರದಲ್ಲಿ ಪೈಪೋಟಿ ನಡೆಸ್ತಿದ್ದ ಫೇಸ್‌ಬುಕ್‌, ಹಾಗು ಟ್ವಿಟರ್‌ ಅಥವಾ ಎಕ್ಸ್‌ನ ಮಾಲಿಕರು ಇದೀಗ ಕುಸ್ತಿ ಅಖಾಡದಲ್ಲಿ ಮುಖಾಮುಖಿಯಾಗಲು ಸಜ್ಜಾಗುತ್ತಿದ್ದಾರೆ. ವಿಶ್ವದ ನಂಬರ್‌ ಒನ್‌ ಶ್ರೀಮಂತ ಎಲಾನ್‌ ಮಸ್ಕ್ ಹಾಗೂ ಫೇಸ್‌ಬುಕ್‌ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಪರಸ್ಪರ ಕುಸ್ತಿಯಾಡಲು ಒಪ್ಪಿಗೆ ಸೂಚಿಸಿದ್ದಾರೆ. ಈ ಕುಸ್ತಿ ಪಂದ್ಯ ‘X’ನಲ್ಲಿ ನೇರ ಪ್ರಸಾರವಾಗಲಿದೆ ಅಂತ ಮಸ್ಕ್‌ ಟ್ವೀಟ್‌ ಮಾಡಿದ್ದು, ಅದರಿಂದ ಬರುವ ಆದಾಯವನ್ನ ಚಾರಿಟಿಗೆ ನೀಡಲಾಗುತ್ತೆ ಅಂತ ಹೇಳಿದ್ದಾರೆ. ಈ ಟ್ವೀಟ್‌ನ ಸ್ಕ್ರೀನ್‌ ಶಾಟ್‌ ಅನ್ನ ಜುಕರ್‌ಬರ್ಗ್‌ ತಮ್ಮ ಥ್ರೆಡ್ಸ್‌ ಆ್ಯಪ್‌ನಲ್ಲಿ ಪೋಸ್ಟ್‌ ಮಾಡಿದ್ದು, ಚಾರಿಟಿಗಾಗಿ ಹಣ ಸಂಗ್ರಹಿಸೋಕೆ ಅತಿಹೆಚ್ಚು ವಿಶ್ವಾಸಾರ್ಹ ಪ್ಲಾಟ್‌ಫಾರ್ಮ್‌ ಅನ್ನ ಬಳಸಬೋದಲ್ವ ಅಂತ ಪ್ರಶ್ನಿಸಿದ್ದಾರೆ. ಅಂದ್ರೆ ಮಾರ್ಕ್ ಪ್ರಕಾರ Xನಲ್ಲಿ ಜಾಸ್ತಿ ಹಣ ಸಿಗೋದಿಲ್ಲ ಅನ್ನೋದು ಅಥ್ವಾ ಅದು ಅಂಥಾ ಒಳ್ಳೇ ಪ್ಲಾಟ್‌ಫಾರ್ಮ್‌ ಅಲ್ಲ ಅನ್ನೋ ಅರ್ಥದಲ್ಲಿ ಹೇಳಿದ್ದಾರೆ ಅಂತ ವಿಶ್ಲೇಷಣೆ ಮಾಡಲಾಗ್ತಿದೆ. ಇತ್ತೀಚೆಗೆ ಇಬ್ಬರೂ ಉದ್ಯಮಿಗಳು ಶೀಘ್ರದಲ್ಲೇ ನಡೆಯುವ ಕುಸ್ತಿಗೆ ಭರ್ಜರಿಯಾಗಿ ತಯಾರಾಗುತ್ತಿದ್ದಾರೆ. ಪ್ರತಿದಿನ ತೂಕ ಎತ್ತುವ ಅಭ್ಯಾಸ ನಡೆಸುತ್ತಿದ್ದು, ಕುಸ್ತಿಗೆ ಸಜ್ಜಾಗುತ್ತಿದ್ದೇನೆ. ಅಭ್ಯಾಸ ನಡೆಸಲು ಸಮಯವಿಲ್ಲದ ಕಾರಣ ತೂಕದ ಸಾಧನಗಳನ್ನು ಕಚೇರಿಗೆ ತಂದು ಬಿಡುತ್ತಿದ್ದೇನೆ ಅಂತ ಮಸ್ಕ್ ಹೇಳಿಕೊಂಡಿದ್ದಾರೆ. ಇತ್ತ ಜುಕರ್‌ಬರ್ಗ್ ಕೂಡ ಪರಿಣಿತ ಕುಸ್ತಿಪಟುಗಳ ನೆರವಿನಿಂದ ಅಭ್ಯಾಸ ಮಾಡುತ್ತಿದ್ದಾರೆ. ಅಂದ್ಹಾಗೆ ಈ ಕೇಜ್‌ ಫೈಟ್‌ ವಿಚಾರ ಶುರು ಆಗಿದ್ದು, ಟ್ವಿಟರ್‌ಗೆ ಪ್ರತಿಯಾಗಿ ಜುಕರ್‌ಬರ್ಗ್‌ ಅವರು ಥ್ರೆಡ್ಸ್ ಆ್ಯಪ್‌ ಲೋಕಾರ್ಪಣೆ ಮಾಡಿದ ವೇಳೆ ‘ಜುಕರ್‌ಬರ್ಗ್‌ ಜತೆಗೆ ಕುಸ್ತಿಗೆ ರೆಡಿ’ ಅಂತ ಮಸ್ಕ್ ಟ್ವೀಟ್‌ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮಾರ್ಕ್‌, ‘ಜಾಗ ಹೇಳಿ’ ಅಂತ ತಿರುಗೇಟು ಕೊಟ್ಟಿದ್ದರು. ಅದು ಈಗ ಅಖಾಡದಲ್ಲಿ ಕುಸ್ತಿ ಮಾಡುವ ಹಂತಕ್ಕೆ ತಲುಪಿದ್ದು, ಇನ್ನೂ ದಿನಾಂಕ ನಿಗದಿಯಾಗಿಲ್ಲ. ಆದ್ರೆ ಇವ್ರಿಬ್ರೂ ನಿಜವಾಗಲೂ ಕುಸ್ತಿಯಾಡ್ತಾರ ಅಥವಾ ಎಲ್ರನ್ನ ಬಕ್ರ ಮಾಡ್ತಿದಾರ ಅನ್ನೋದು ಗೊತ್ತಾಗಿಲ್ಲ.

-masthmagaa.com

Contact Us for Advertisement

Leave a Reply