ಭಯಂಕರ ಅಶಾಂತ ಜಗತ್ತು! ಶಸ್ತ್ರಾಸ್ತ್ರ ಖರೀದಿ ಜೋರು.. ಯುದ್ಧಕ್ಕೆ ತಯಾರು?

masthmagaa.com:

ರಷ್ಯಾ-ಯುಕ್ರೇನ್‌ ಸಂಘರ್ಷದಿಂದಾಗಿ ಯುರೋಪ್‌, ಸೇನೆಯ ಮೇಲೆ ಮಾಡಿರೊ ವೆಚ್ಚ ದಾಖಲೆ ನಿರ್ಮಿಸಿದೆ. 2021ರಲ್ಲಿ ಶಸ್ತ್ರಾಸ್ತ್ರಗಳಿಗೆ ಖರ್ಚು ಮಾಡಿದ್ದಕ್ಕಿಂತ 2022ರಲ್ಲಿ 13%ನಷ್ಟು ಅಧಿಕ ಹಣವನ್ನ ಖರ್ಚು ಮಾಡಲಾಗಿದೆ. 2022ರಲ್ಲಿ ಯುರೋಪ್‌ ಒಟ್ಟು 480 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 39.36 ಲಕ್ಷ ಕೋಟಿ ರೂಪಾಯಿಯನ್ನ ಸೇನೆಗೆ ಸುರಿದಿದೆ ಅಂತ ಹೇಳಲಾಗಿದೆ. ಅದ್ರಲ್ಲೂ ಅಮೆರಿಕ ನಂತರ ಯುಕ್ರೇನ್‌ ಬೆನ್ನಿಗೆ ನಿಂತಿರೋ ಬ್ರಿಟನ್‌ ಯುರೋಪ್‌ ದೇಶಗಳಲ್ಲೆ ಅತಿಹೆಚ್ಚು ಖರ್ಚು ಮಾಡಿದೆ. ಯುರೋಪ್‌ನ ಈ ದಾಖಲೆ ಮಟ್ಟದ ಮಿಲಿಟರಿ ವೆಚ್ಚ, ಜಾಗತಿಕ ಮಿಲಿಟರಿ ವೆಚ್ಚ ಹೆಚ್ಚಾಗೋಕು ಕಾರಣವಾಗಿದೆ. 2022ರಲ್ಲಿ ಜಾಗತಿಕ ಮಿಲಿಟರಿ ವೆಚ್ಚ 2.24 ಟ್ರಿಲಿಯನ್‌ ಡಾಲರ್‌ ಅಂದ್ರೆ ಸುಮಾರು 183 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇದು ಒಟ್ಟು ಜಾಗತಿಕ GDPಯಲ್ಲಿ 2.2% ಆಗಿದೆ ಅಂತ ಸ್ಟಾಕ್‌ಹೋಮ್‌ನ ಇಂಟರ್‌ನ್ಯಾಷನಲ್‌ ಪೀಸ್‌ ರೀಸರ್ಚ್‌ ಇನ್‌ಸ್ಟಿಟ್ಯುಟ್‌ (SIPRI) ಹೇಳಿದೆ. ಇನ್ನು ಈ ಜಾಗತಿಕ ಮಿಲಿಟರಿ ಎಕ್ಸ್‌ಪೆಂಡಿಚರ್‌ನಲ್ಲಿ ಯುಕ್ರೇನ್‌ಗೆ ಯುದ್ದ ಆರಂಭವಾದಾಗಿನಿಂದ ಸೇನಾ ನೆರವು ಅನೌನ್ಸ್‌ ಮಾಡ್ತಾ ಬಂದಿರೊ ಅಮೆರಿಕ 39%ನಷ್ಟು ಪಾಲನ್ನ ಹೊಂದಿದೆ. 2ನೇ ಸ್ಥಾನದಲ್ಲಿ ಚೀನಾ ಇದೆ. ಇನ್ನು ಈ ಎರಡು ದೇಶಗಳು ಸೇರಿ ಅರ್ಧಕ್ಕಿಂತಲೂ ಅಧಿಕ ಕೊಡುಗೆ ನೀಡಿವೆ. ಇನ್ನು ಭಾರತ 4 ನೇ ಸ್ಥಾನದಲ್ಲಿದೆ ಅಂತ SIPRI ತನ್ನ ವರದಿಯಲ್ಲಿ ತಿಳಿಸಿದೆ. ಇದೇ ವೇಳೆ ರಷ್ಯಾ ದಾಳಿಯಿಂದ ಯುಕ್ರೇನ್‌ 44 ಬಿಲಿಯನ್‌ ಡಾಲರ್‌ ಹಣವನ್ನ ಸೇನೆಗೆ ಖರ್ಚು ಮಾಡಿದೆ. ಅಲ್ದೇ ಇದರ ಜೊತೆಗೆ ಇತರ ರಾಷ್ಟ್ರಗಳಿಂದ ಕೂಡ ಬಿಲಿಯನ್‌ಗಟ್ಟಲೇ ಹಣ ಹಾಗೂ ಸೇನಾ ನೆರವನ್ನ ಪಡೆದುಕೊಂಡಿದೆ. ಇತ್ತ ಇದೇ ವೇಳೆ ಯುಕ್ರೇನ್ ಮೇಲೆ ದಾಳಿ ಮಾಡಿರೋ ರಷ್ಯಾ, 2021ಕ್ಕೆ ಹೋಲಿಸಿದ್ರೆ 2022ರಲ್ಲಿ 9.2%ನಷ್ಟು ಅಧಿಕ ಹಣವನ್ನ ಸೇನೆಗೆ ಸುರಿದಿದೆ ಅಂತ SIPRI ಹೇಳಿದೆ. ಅಂದ್ಹಾಗೆ 90ರ ದಶಕದಲ್ಲಿ ಸೇನೆಗೆ ಮಾಡುವ ವೆಚ್ಚ ಕಡಿಮೆಯಾಗ್ತಾ ಬಂದಿತ್ತು. ಆದ್ರೆ 2000ರ ನಂತರ ಟ್ರೆಂಡ್‌ ಬದಲಾಗಿ ಮಿಲಿಟರಿ ವೆಚ್ಚದಲ್ಲಿ ಏರಿಕೆ ಆಗ್ತಾ ಬಂದಿದೆ. ಇದಕ್ಕೆ ಮೊದಲ ಕಾರಣ ಚೀನಾ ತನ್ನ ಸೇನೆಯಲ್ಲಿ ಅತಿದೊಡ್ಡ ಹೂಡಿಕೆ ಮಾಡೋಕೆ ಶುರು ಮಾಡಿದ್ದು. ಇದ್ರಿಂದ ಚೀನಾದ ವೈರಿ ರಾಷ್ಟ್ರಗಳು ಹಾಗೂ ನೆರೆಹೊರೆಯ ರಾಷ್ಟ್ರಗಳು ಸೇನೆಯಲ್ಲಿ ಹೂಡಿಕೆ ಮಾಡೋಕೆ ಶುರು ಮಾಡಿದ್ವು. ನಂತರ 2014ರಲ್ಲಿ ರಷ್ಯಾ ಕ್ರೈಮಿಯಾ ಮೇಲೆ ಅಟ್ಯಾಕ್ ಮಾಡಿ ವಶಪಡಿಸಿಕೊಂಡಿದ್ದು ಕೂಡ ಯುರೋಪ್‌ ರಾಷ್ಟ್ರಗಳು ಸೇನಾ ಮೇಲೆ ಹೂಡಿಕೆ ಮಾಡೋಕೆ ಕಾರಣವಾಯ್ತು.

-masthmagaa.com

Contact Us for Advertisement

Leave a Reply