ಜಮ್ಮು ಕಾಶ್ಮೀರದಲ್ಲಿ ಯೋಧ ನಾಪತ್ತೆ! ಇದರ ಹಿಂದಿದ್ಯಾ ಉಗ್ರರ ಕೈವಾಡ?

masthmagaa.com:

ಜಮ್ಮು – ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ಭಾರತೀಯ ಯೋಧರೊಬ್ಬರು ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಜಾವೇದ್ ಅಹ್ಮದ್ ಅನ್ನೊ ಯೋಧ ಜಮ್ಮು – ಕಾಶ್ಮೀರ ಲೈಟ್ ಇನ್‌ಫೆಂಟ್ರಿ ರೆಜಿಮೆಂಟ್‌ಗೆ ಸೇರಿದ್ದು, ಕೆಲವು ದಿನಗಳ ಹಿಂದೆ ರಜೆಯ ಮೇಲೆ ಮನೆಗೆ ಬಂದಿದ್ರು. ನಿನ್ನೆ ಸಂಜೆ ಮಾರುಕಟ್ಟೆಯಿಂದ ಕೆಲವು ವಸ್ತುಗಳನ್ನು ಖರೀದಿಸಲು ಕಾರಿನಲ್ಲಿ ಹೊರಟಿದ್ರು. ಆದ್ರೆ ರಾತ್ರಿ 9 ಗಂಟೆಯಾದರೂ ವಾಪಸ್‌ ಬಾರದೇ ಇದ್ದಾಗ ಕುಟುಂಬದವರು ಹುಡುಕಾಡಿದ್ದಾರೆ. ಈ ವೇಳೆ ಮಾರುಕಟ್ಟೆಯ ಬಳಿ ಜಾವೆದ್‌ ಅವ್ರ ಕಾರು ಮಾತ್ರ ಪತ್ತೆಯಾಗಿದೆ. ಈ ಬಗ್ಗೆ ಕಾಶ್ಮೀರ ಪೊಲೀಸರು ಕೇಸ್‌ ದಾಖಲಿಸಿಕೊಂಡಿದ್ದು, ಕೆಲವು ಶಂಕಿತರನ್ನ ಬಂಧಿಸಿರೋದಾಗಿ ಹೇಳಿದ್ದಾರೆ. ಅಲ್ದೆ ಜಾವೆದ್‌ ಕಾರಿನಲ್ಲಿ ರಕ್ತದ ಗುರುತುಗಳಿದ್ದು, ಉಗ್ರರು ಅಪಹರಿಸಿರಬಹುದು ಅಂತ ಯೋಧನ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಯೋಧರನ್ನ ಬಿಡುಗಡೆ ಮಾಡುವಂತೆ ವಿಡಿಯೋ ಮೂಲಕ ಕೇಳಿಕೊಂಡಿದ್ದಾರೆ. ಬಿಡುಗಡೆಯಾಗಿರೋ ಈ ವಿಡಿಯೋದಲ್ಲಿ ದಯವಿಟ್ಟು ನಮ್ಮನ್ನು ಕ್ಷಮಿಸಿ, ನನ್ನ ಮಗನನ್ನು ಬಿಡುಗಡೆ ಮಾಡಿ, ನಾನು ಅವರನ್ನು ಸೈನ್ಯದಲ್ಲಿ ಕೆಲಸ ಮಾಡಲು ಬಿಡುವುದಿಲ್ಲ ಅಂತ ಯೋಧನ ತಾಯಿ ಬೇಡಿಕೊಂಡಿದ್ದಾರೆ. ಇತ್ತ ಅಪಹರಣಕ್ಕೊಳಗಾದ ಯೋಧನ ಪತ್ತೆಗೆ ಭಾರತೀಯ ಸೇನೆ ಮತ್ತು ಪೊಲೀಸರು ಉನ್ನತ ಮಟ್ಟದ ಶೋಧ ಕಾರ್ಯಾ ಆರಂಭಿಸಿದ್ದಾರೆ. ಅಂದ್ಹಾಗೆ ಈ ಹಿಂದೆಯೂ ಈ ಪ್ರದೇಶದಲ್ಲಿ ರಜೆಯ ಮೇಲೆ ಮನೆಯಲ್ಲಿದ್ದ ಹಲವಾರು ಸೈನಿಕರನ್ನ ಉಗ್ರರು ಅಪಹರಿಸಿ ಹತ್ಯೆ ಮಾಡಿದ್ದ ಉದಾಹರಣೆಗಳಿವೆ. ಹೀಗಾಗಿ ಈ ಪ್ರಕರಣವೂ ಹಾಗೇ ಆಗಿರಬೇಕು ಅಂತ ಇಲ್ಲಿ ತೀವ್ರ ಆತಂಕ ಮನೆ ಮಾಡಿದೆ.

-masthmagaa.com

Contact Us for Advertisement

Leave a Reply