ಸುಡಾನ್‌ನಲ್ಲಿ ಮತ್ತೆ 72 ಗಂಟೆಗಳ ಕದನ ವಿರಾಮ: ಅಮೆರಿಕ

masthmagaa.com:

ಯುದ್ಧಪೀಡಿತ ಸುಡಾನ್‌ನಲ್ಲಿ ಕದನ ವಿರಾಮ ಘೋಷಿಸುವಲ್ಲಿ ಅಮೆರಿಕ ಯಶಸ್ವಿಯಾಗಿರೋದಾಗಿ ಹೇಳಿದೆ. ಮುಂದಿನ 72 ಗಂಟೆಗಳ ಕಾಲ ಕದನ ವಿರಾಮಕ್ಕೆ ಸುಡಾನ್‌ ಸೇನೆ ಹಾಗೂ ಅರೆಸೇನಾಪಡೆ ಮುಖ್ಯಸ್ಥರು ಒಪ್ಪಿಕೊಂಡಿದ್ದಾರೆ ಅಂತ ಅಮೆರಿಕದ ಸೆಕ್ರೆಟರಿ ಆಫ್‌ ಸ್ಟೇಟ್‌ ಆಂಥನಿ ಬ್ಲಿಂಕನ್‌ ಹೇಳಿದ್ದಾರೆ. ಸತತ ಎರಡು ದಿನಗಳ ಸುದೀರ್ಘ ಮಾತುಕತೆ ನಂತರ ಎರಡೂ ಪಡೆಗಳ ಮುಖ್ಯಸ್ಥರು ಕದನ ವಿರಾಮ ಘೋಷಿಸಲು ಒಪ್ಪಿದ್ದಾರೆ. ಈ ಕದನ ವಿರಾಮ ಏಪ್ರಿಲ್‌ 24ರ ಮಧ್ಯರಾತ್ರಿಯಿಂದ 72 ಗಂಟೆಗಳ ಕಾಲ ಇರಲಿದೆ ಅಂತ ಬ್ಲಿಂಕನ್‌ ತಿಳಿಸಿದ್ದಾರೆ. ಇತ್ತ ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನ ಕರೆತರಲು ಕೇಂದ್ರ ಸರ್ಕಾರ ʻಆಪರೇಷನ್‌ ಕಾವೇರಿʼ ಹೆಸರಿನ ಕಾರ್ಯಾಚರಣೆಯನ್ನ ಪ್ರಾರಂಭಿಸಿದೆ ಅಂತ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ತಿಳಿಸಿದ್ದಾರೆ. ಸುಮಾರು 500 ಭಾರತೀಯರು ಸುಡಾನ್‌ನ ಬಂದರನ್ನ ತಲುಪಿದ್ದಾರೆ. ಈಗಾಗಲೇ ಅವರನ್ನು ಸುರಕ್ಷಿತವಾಗಿ ಕರೆತರಲು ನಮ್ಮ ದೇಶದ ಹಡುಗುಗಳು ಹಾಗೂ ವಿಮಾನಗಳು ಸಜ್ಜಾಗಿವೆ. ಸುಡಾನ್‍ನಲ್ಲಿರುವ ನಮ್ಮ ಎಲ್ಲ ಸಹೋದರರಿಗೆ ಸಹಾಯ ಮಾಡಲು ಬದ್ಧವಾಗಿದ್ದೇವೆ ಅಂತ ಜೈಶಂಕರ್‌ ಹೇಳಿದ್ದಾರೆ. ಮತ್ತೊಂದ್‌ ಕಡೆ ಈಜಿಪ್ಟ್‌ ಪ್ರಜೆಗಳನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುವ ಕಾರ್ಯದಲ್ಲಿ ತೊಡಗಿದ್ದ ತಮ್ಮ ರಾಜತಾಂತ್ರಿಕ ಅಧಿಕಾರಿಯೊಬ್ರು ಯುದ್ಧದಲ್ಲಿ ಮೃತಪಟ್ಟಿದ್ದಾರೆ ಅಂತ ಹೇಳಿದೆ. ಇನ್ನೊಂದ್‌ ಕಡೆ ಎರಡು ವಾರದಿಂದ ದಾಳಿ ಹಾಗೂ ಪ್ರತಿದಾಳಿ ಮಾಡ್ತಿರುವ ಸುಡಾನ್‌ನ ಸೇನೆ ಹಾಗೂ ಅರೆಸೇನಾಪಡೆಗಳ ನಡುವೆ ಶಾಂತಿ ಒಪ್ಪಂದ ಮಾಡಿಸುವಲ್ಲಿ ಇಸ್ರೇಲ್‌ ಯಶಸ್ವಿಯಾಗಲಿದೆ ಅಂತ ಇಸ್ರೇಲ್‌ ಹೇಳಿದೆ. ಕಳೆದ ಕೆಲವು ದಿನಗಳಿಂದ ಎರಡೂ ಸೇನಾಪಡೆಗಳ ಮುಖ್ಯಸ್ಥರ ಬಳಿ ಇಸ್ರೇಲ್‌ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದು, ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ಭರವಸೆಯಿದೆ ಅಂತ ಇಸ್ರೇಲ್‌ ತಿಳಿಸಿದೆ. ಇನ್ನು ಸುಡಾನ್‌ ಸಂಘರ್ಷದಿಂದ ಜೀವ ಉಳಿಸಿಕೊಳ್ಳಲು ಅಲ್ಲಿನ ಜನರು ಪಲಾಯನ ಮಾಡಿ ನೆರೆಯ ದೇಶಗಳಿಗೆ ಹೋಗ್ತಿದಾರೆ. ಇತ್ತ ಪಕ್ಕದ ದಕ್ಷಿಣ ಸುಡಾನ್‌ಗೆ ಸುಮಾರು 10 ಸಾವಿರ ನಿರಾಶ್ರಿತರು ಬಂದಿದ್ದಾರೆ ಅಂತ ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಅಂದ್ಹಾಗೆ ದಕ್ಷಿಣ ಸುಡಾನ್‌ನಲ್ಲಿನ ದೀರ್ಘ ಕಾಲದ ಸಂಘರ್ಷದಿಂದ ತಪ್ಪಿಸಿಕೊಂಡು ಬಂದಿರೊ ಸುಮಾರು 8 ಲಕ್ಷ ನಿರಾಶ್ರಿತರು ಸುಡಾನ್‌ನಲ್ಲಿದ್ದಾರೆ. ಇದೀಗ ಅಲ್ಲಿಯೂ ಸಂಘರ್ಷ ನಡಿತೀರೋದ್ರಿಂದ ಮತ್ತೆ ದಕ್ಷಿಣ ಸುಡಾನ್‌ಗೆ ಪಲಾಯನ ಮಾಡ್ತಿದಾರೆ. 2011ರಲ್ಲಿ ಸುಡಾನ್‌ನಿಂದ ದಕ್ಷಿಣ ಸುಡಾನ್‌ ಸ್ವಾತಂತ್ರ್ಯ ಪಡೆದುಕೊಂಡಿತ್ತು.

-masthmagaa.com

Contact Us for Advertisement

Leave a Reply