ಕಡೆ ದಿನ..! ಕಡೆ ಶೋ..! ಅಬ್ಬರದ ಪ್ರಚಾರಕ್ಕೆ ಇವತ್ತು ತೆರೆ! ಮಾರ್ಗಸೂಚಿ ಬಿಡುಗಡೆ ಮಾಡಿದ ಎಲೆಕ್ಷನ್‌ ಕಮಿಷನ್!

masthmagaa.com:

ತೀವ್ರ ಕುತೂಹಲ ಕೆರಳಿಸಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ರ್ಯಾಲಿ, ಸಮಾವೇಶ, ರೋಡ್‌ ಶೋ ಅನ್ಕೊಂಡು ರಂಗುರಂಗಿನ ಕಣವಾಗಿದ್ದ ಚುನಾವಣೆ ಅಂತಿಮ ಹಂತ ತಲುಪಿದ್ದು ಇಂದು ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ಈ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳಿಗೆ ರಾಜ್ಯ ಚುನಾವಣಾ ಆಯೋಗ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಎಲೆಕ್ಷನ್‌ಗೆ ಕೇವಲ 48 ಗಂಟೆಗಳು ಮಾತ್ರ ಬಾಕಿ ಉಳಿದಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳಲಾಗಿದೆ. ಕ್ಷೇತ್ರದಲ್ಲಿ ಅಭ್ಯರ್ಥಿ ಹೊರತುಪಡಿಸಿ ಬೇರೆ ನಾಯಕರು ಬರುವಂತಿಲ್ಲ. ಆದರೆ ಮನೆ ಮನೆಗೆ ತೆರಳಿ ಅಭ್ಯರ್ಥಿ ಸೇರಿ 6 ಜನರು ಮಾತ್ರ ಪ್ರಚಾರ ಮಾಡಲು ಅವಕಾಶವಿದೆ. ಅಲ್ದೇ 48 ಗಂಟೆಗಳ ಕಾಲ ಅಕ್ರಮ ಸಭೆ ಮತ್ತು ಸಾರ್ವಜನಿಕ ಸಭೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ. ಪ್ರಚಾರದ ಅವಧಿ ಮುಗಿದ ನಂತರ ಕ್ಷೇತ್ರದಲ್ಲಿ ರಾಜಕೀಯ ಕಾರ್ಯಕರ್ತರ ಉಪಸ್ಥಿತಿಗೆ ನಿರ್ಬಂಧ ಹೇರಲಾಗಿದೆ. ಮೇ 8ರ ಸಂಜೆ 6ರಿಂದ ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಅಂದ್ರೆ ಮೇ 10ರ ಮಧ್ಯರಾತ್ರಿವರೆಗೆ ರಾಜ್ಯಾದ್ಯಂತ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಜೊತೆಗೆ 48 ಗಂಟೆಗಳ ಕಾಲ ಯಾವುದೇ ಧ್ವನಿವರ್ಧಕಗಳ ಬಳಕೆಯನ್ನು ಬ್ಯಾನ್‌ ಮಾಡಲಾಗಿದೆ. ಇನ್ನು ಕಡೆ ದಿನದ ಬಹಿರಂಗ ಪ್ರಚಾರ ಹಿನ್ನೆಲೆಯಲ್ಲಿ ಇವತ್ತು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಶಿಗ್ಗಾಂವಿ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದಾರೆ. ಈ ಕಡೆ ವಿಪಕ್ಷ ನಾಯಕ ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕನಕಪುರದಲ್ಲಿ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಪ್ರಚಾರ ಮಾಡಿದ್ದಾರೆ. ಚುನಾವಣೆಗೆ ಹೆಚ್ಚಿನ ಭದ್ರತೆ ನೀಡಲಾಗಿದ್ದು ರಾಜ್ಯಾದ್ಯಂತ 1,56,000 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ‌.

-masthmagaa.com

Contact Us for Advertisement

Leave a Reply