ಚೀನಾ Vs AUKUS! ಆಸ್ಟ್ರೇಲಿಯಾಕ್ಕೆ 3 ನ್ಯೂಕ್ಲಿಯರ್‌ ಪವರ್ಡ್‌ ಸಬ್‌ಮರೀನ್!

masthmagaa.com:

ಪೆಸಿಫಿಕ್‌ ಪ್ರದೇಶದಲ್ಲಿ ತನ್ನ ಪ್ರಭಾವವನ್ನ ಹೆಚ್ಚಿಸಿಕೊಳ್ತಿರೊ ಚೀನಾಕ್ಕೆ ಕೌಂಟರ್‌ ಕೊಡಲು ಆಸ್ಟ್ರೇಲಿಯಾ, ಅಮೆರಿಕ ಹಾಗೂ ಯುನೈಟೆಡ್‌ ಕಿಂಗ್‌ಡಮ್‌ ಮುಂದಾಗಿವೆ. ಈ ನಿಟ್ಟಿನಲ್ಲಿ ಆಸ್ಟ್ರೇಲಿಯಾಕ್ಕೆ ಪರಮಾಣು ಶಕ್ತ ಸಬ್‌ಮರೀನ್‌ಗಳನ್ನ ಕೊಡುವ ಯೋಜನೆಯ ವಿವರಗಳನ್ನ ಮೂರು ದೇಶಗಳ ನಾಯಕರು ರಿವೀಲ್‌ ಮಾಡಿದ್ದಾರೆ. ಅಮೆರಿಕದ ಸ್ಯಾನ್‌ಡಿಯಾಗೋನಲ್ಲಿರುವ ನೌಕಾನೆಲೆಯಲ್ಲಿ ಕಾರ್ಯಕ್ರಮ ನಡೆಸಲಾಗಿದ್ದು, ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್‌, ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಹಾಗೂ ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ ಭಾಗಿಯಾಗಿದ್ದಾರೆ. 2021ರ AUKUS ಒಪ್ಪಂದದ ಭಾಗವಾಗಿ ಆಸ್ಟ್ರೇಲಿಯಾಕ್ಕೆ ವರ್ಜಿನಿಯಾ ಕ್ಲಾಸ್‌ನ 3 ನ್ಯೂಕ್ಲಿಯರ್‌ ಪವರ್ಡ್‌ ಸಬ್‌ಮರೀನ್‌ಗಳನ್ನ ಕೊಡಲಾಗ್ತಿದೆ. ಈ ಯೋಜನೆಗೆ ಒಟ್ಟು 368 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 30.17 ಲಕ್ಷ ಕೋಟಿ ರೂಪಾಯಿ ವೆಚ್ಚವಾಗಲಿದೆ. ಈ ಸಬ್‌ಮರೀನ್‌ಗಳು ನ್ಯೂಕ್ಲಿಯಾರ್‌ ಪವರ್ಡ್‌ ಅಂದ್ರೆ ಪರಮಾಣು ಶಕ್ತಿಯಿಂದ ಆಪರೇಟ್‌ ಆಗುವ ಜಲಾಂತರ್ಗಾಮಿಗಳಾಗಿವೆ. ಆದ್ರೆ ಯಾವುದೇ ಪರಮಾಣು ಶಸ್ತ್ರಾಸ್ತ್ರಗಳನ್ನ ಹೊಂದಿರಲ್ಲ ಅಂತ ಅಮೆರಿಕ ಸ್ಪಷ್ಟಪಡಿಸಿದೆ. ಈ ಬಗ್ಗೆ ಮಾತಾಡಿರೋ ಬೈಡೆನ್‌, ಈ ನ್ಯೂಕ್ಲಿಯರ್‌ ಸಬ್‌ಮರೀನ್‌ಗಳ ಬಗ್ಗೆ ಚೀನಾದ ಕಳವಳದ ಕುರಿತು ನಮಗೆ ಅರಿವಿದೆ. ಆದ್ರೆ ಈ ಒಪ್ಪಂದ ಇಂಡೋ-ಪೆಸಿಫಿಕ್‌ ಪ್ರದೇಶದ ಭದ್ರತೆ ಹಾಗೂ ಸ್ಥಿರತೆ ಮೇಲೆ ಫೋಕಸ್‌ ಮಾಡುತ್ತೆ. ಈ ಡೀಲ್‌ನಿಂದ ನಾವು ಯಾರಿಗೂ ಚಾಲೆಂಜ್‌ ಮಾಡ್ತಿಲ್ಲ ಅಂತ ಹೇಳಿದ್ದಾರೆ. ಕಳೆದ 65 ವರ್ಷಗಳಲ್ಲಿ 2ನೇ ಬಾರಿ ಅಮೆರಿಕ ತನ್ನ ನ್ಯೂಕ್ಲಿಯರ್‌ ಟೆಕ್ನಾಲಜಿಯನ್ನ ನಮ್ಮ ಜೊತೆ ಶೇರ್‌ ಮಾಡಿದೆ. ಅದಕ್ಕೆ ನಾವು ಥ್ಯಾಂಕ್ಸ್‌ ಹೇಳ್ತೀವಿ ಅಂತ ಆಸ್ಟ್ರೇಲಿಯಾ ಪ್ರಧಾನಿ ಅಲ್ಬನೀಸ್‌ ಹೇಳಿದ್ದಾರೆ. ಇತ್ತ ರಿಷಿ ಸುನಾಕ್‌ ಮಾತಾಡಿ, ಯುಕ್ರೇನ್‌ ಮೇಲಿನ ರಷ್ಯಾ ಆಕ್ರಮಣ, ಪೆಸಿಫಿಕ್‌ ರಿಜನ್‌ನಲ್ಲಿ ಚೀನಾದ ಬೆಳವಣಿಗೆ, ಇರಾನ್‌ ಹಾಗೂ ಉತ್ತರ ಕೊರಿಯಾದ ಅಸ್ಥಿರ ನಡವಳಿಕೆಗಳಂಥ ಸಮಸ್ಯೆಗಳ ನಡುವೆ ಈ ಒಪ್ಪಂದ ತುಂಬಾ ಇಂಪಾರ್ಟೆಂಟ್‌ ಆಗಿದೆ. ನಮ್ಮ ದೇಶಗಳ ಸಲುವಾಗಿ ನಾವು ಬಲಶಾಲಿಯಾಗಲೇಬೇಕು ಅಂತ ಹೇಳಿದ್ದಾರೆ. ಇದೇ ವೇಳೆ ಬೈಡೆನ್‌, ಸುನಾಕ್‌ರನ್ನ ಮುಂದಿನ ಜೂನ್‌ ತಿಂಗಳಲ್ಲಿ ವೈಟ್‌ಹೌಸ್‌ಗೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದಾರೆ. ಬ್ರಿಟನ್‌ ಮತ್ತು ಅಮೆರಿಕ ನಡುವಿನ ಆರ್ಥಿಕ ಸಂಬಂಧದ ಕುರಿತು ಉಭಯ ನಾಯಕರು ಚರ್ಚೆ ನಡೆಸಿದ್ದು, ಈ ಕುರಿತ ಚರ್ಚೆಯನ್ನ ಮುಂದುವರೆಸಲು ಸುನಾಕ್‌ರನ್ನ ಬೈಡೆನ್‌ ವೈಟ್‌ಹೌಸ್‌ಗೆ ಇನ್ವೈಟ್‌ ಮಾಡಿದ್ದಾರೆ ಅಂತ ವೈಟ್‌ಹೌಸ್‌ ಹೇಳಿದೆ. ಇತ್ತ AUKUS ಒಪ್ಪಂದ ಶೀತಲ ಸಮರದ ಭಾವನೆಯನ್ನ ಹೊಂದಿದೆ, ಅದು ನಮ್ಮ ನಡುವಿನ ಸಮಸ್ಯೆಗಳನ್ನ ಮತ್ತಷ್ಟು ತೀವ್ರಗೊಳಿಸುತ್ತೆ ಅಂತ ಚೀನಾ ಆರೋಪಿಸಿದೆ.

-masthmagaa.com

Contact Us for Advertisement

Leave a Reply