ಹಸಿರು ವಜ್ರ!‌ ಗಂಧದ ಪೆಟ್ಟಿಗೆ! ಬೆಳ್ಳಿಯ ಗಣೇಶ..ಗಿಫ್ಟ್‌ಗಳ ಮಳೆ ಸುರಿಸಿದ ಮೋದಿ!

masthmagaa.com:

ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವ್ರನ್ನ ವೈಟ್‌ಹೌಸ್‌ನಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹಾಗೂ ಅವ್ರ ಪತ್ನಿ ಜಿಲ್‌ ಬೈಡನ್‌ ಸ್ವಾಗತಿಸಿದ್ದಾರೆ. ಈ ವೇಳೆ ಮೋದಿಯವರ ಜೊತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಹಾಗೂ ವಿದೇಶಾಂಗ ಕಾರ್ಯದರ್ಶಿ ವಿನಯ್‌ ಕ್ವಾತ್ರ ಕೂಡ ವೈಟ್‌ಹೌಸ್‌ನಲ್ಲಿ ಭೋಜನದಲ್ಲಿ ಭಾಗಿಯಾಗಿದ್ದಾರೆ. ಇನ್ನು ಬೈಡನ್‌ ದಂಪತಿ ಹಾಗೂ ಮೋದಿಯವರು ಸಂಗೀತ ಸಂಜೆಯಲ್ಲಿ ಪಾಲ್ಗೊಂಡಿದ್ದಾರೆ ಅಂತ ವೈಟ್‌ಹೌಸ್‌ ಹೇಳಿದೆ. ಈ ವೇಳೆ ಭಾರತೀಯ ಸಂಸ್ಕೃತಿಯನ್ನ ಬಿಂಬಿಸೋ 10 ವಸ್ತುಗಳನ್ನ ಬೈಡನ್ ದಂಪತಿಗೆ ಮೋದಿ ಉಡುಗೊರೆಯಾಗಿ ನೀಡಿದ್ದಾರೆ. ಅದ್ರಲ್ಲಿ ಶ್ರೀಗಂಧ ಮರದ ಕಟ್ಟಿಗೆಯಿಂದ ತಯಾರಿಸಿದ ಶ್ರೀಗಂಧದ ಪೆಟ್ಟಿಗೆಯನ್ನು ಜೋ ಬೈಡನ್ ದಂಪತಿಗೆ ಉಡುಗೊರೆಯಾಗಿ ನೀಡಿದ್ದಾರೆ. ಜೊತೆಗೆ ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್​ಗೆ ಮೋದಿ ಅವರು 7.5 ಕ್ಯಾರೆಟ್ ಹಸಿರು ವಜ್ರವನ್ನ ಗಿಫ್ಟ್‌ ಆಗಿ ನೀಡಿದ್ದಾರೆ. ಅಷ್ಟೆ ಅಲ್ದೆ ಬೈಡನ್ ದಂಪತಿಗೆ ನೀಡಲಾಗಿರುವ ಗಂಧದ ಪೆಟ್ಟಿಗೆಯಲ್ಲಿ ಬೆಳ್ಳಿಯಿಂದ ತಯಾರಿಸಿದ ಗಣೇಶನ ವಿಗ್ರಹ ಹಾಗೂ ದೀಪವನ್ನ ಇರಿಸಲಾಗಿದೆ. ಇನ್ನು ಇಂದು ಬೈಡನ್‌ ದಂಪತಿ ಮೋದಿಯವ್ರಿಗಾಗಿ ಶ್ವೇತಭವನದ ಸೌತ್‌ಲಾನ್‌ನಲ್ಲಿ ಅಧಿಕೃತ ಭೋಜನಕೂಟ ಏರ್ಪಡಿಸಲಿದ್ದು, ಅದ್ರಲ್ಲಿ ಸುಮಾರು 400 ಗಣ್ಯರು ಭಾಗಿಯಾಗಲಿದ್ದಾರೆ ಅಂತ ತಿಳಿದು ಬಂದಿದೆ. ಈ ವೇಳೆ ಕೈಯಿಂದ ಮಾಡಲಾದ ಅಮೆರಿಕದ ಪುರಾತನ ಬುಕ್‌ ಗ್ಯಾಲರಿ ಕಲಾಕೃತಿ, ವಿಂಟೇಜ್‌ ಅಮೆರಿಕನ್‌ ಕ್ಯಾಮೆರಾ ಹಾಗೂ ಜಾರ್ಜ್‌ ಈಸ್ಟ್‌ಮನ್‌ ಅವ್ರ ಮೊದಲ ಕೊಡ್ಯಾಕ್‌ ಕ್ಯಾಮರಾ ಸೇರಿದಂತೆ ಅಮೆರಿಕದ ವನ್ಯಜೀವಿ ಛಾಯಾಗ್ರಹಣದ ಹಾರ್ಡ್‌ಕವರ್‌ ಪುಸ್ತಕವನ್ನ ಪ್ರಧಾನಿ ಮೋದಿಯವ್ರಿಗೆ ಬೈಡನ್‌ ದಂಪತಿಗಳು ಉಡುಗೊರೆಯಾಗಿ ನೀಡಲಿದ್ದಾರೆ. ಇನ್ನೊಂದ್‌ ಕಡೆ ಭಾರತದಲ್ಲಿ ಸೆಮಿಕಂಡಕ್ಟರ್‌ ಉತ್ಪಾದನೆಯನ್ನ ಉತ್ತೇಜಿಸೋಕೆ, ಅಮೆರಿಕ ಮೂಲದ ಸೆಮಿಕಂಡಕ್ಟರ್‌ ಚಿಪ್‌ ತಯಾರಕ ಕಂಪನಿ ಮೈಕ್ರಾನ್‌ ಟೆಕ್ನಾಲಜಿಯನ್ನ ಭಾರತದಲ್ಲಿ ಉತ್ಪಾದನೆ ಪ್ರಾರಂಭಿಸುವಂತೆ ಮೋದಿ ಆಹ್ವಾನಿಸಿದ್ದಾರೆ. ಇನ್ನು ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಯನ್ನು ಹೆಚ್ಚಿಸಲು ಮೈಕ್ರಾನ್ ಟೆಕ್ನಾಲಜಿಯನ್ನು ಪ್ರಧಾನಿ ಮೋದಿಯವ್ರು ಆಹ್ವಾನಿಸಿದ್ದಾರೆ ಅಂತ ವಿದೇಶಾಂಗ ಸಚಿವಾಲಯ ತಿಳಿಸಿದೆ. ಜೊತೆಗೆ ಮೋದಿ ಭೇಟಿಯ ನಂತ್ರ ಮಾತಾಡಿರುವ ಮೈಕ್ರಾನ್‌ ಟೆಕ್ನಾಲಜಿ ಸಿಇಒ ಸಂಜಯ್ ಮೆಹ್ರೋತ್ರಾ, ನಾವು ಭಾರತದಲ್ಲಿ ಹೆಚ್ಚಿನ ಅವಕಾಶಗಳನ್ನ ಎದುರು ನೋಡುತ್ತಿದ್ದೇವೆ ಅಂತ ಹೇಳಿದ್ದಾರೆ. ಮತ್ತೊಂದ್‌ ಕಡೆ ಭಾರತವನ್ನ ʻವಿಶ್ವದ ಆಟಗಾರʼ (World player) ಅಂತ ಅಮೆರಿಕ ಹಾಡಿ ಹೊಗಳಿದೆ . ಭಾರತ ಈಗಾಗಲೇ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಮತ್ತು ಅದರಾಚೆಗೆ ಭದ್ರತೆಗೆ ಸಂಬಂಧಪಟ್ಟ ರಫ್ತನ್ನ ಮಾಡುತ್ತಿದೆ. ಇಂಡೋ-ಪೆಸಿಫಿಕ್ ಕ್ವಾಡ್‌ಗೆ ಕೊಡುಗೆ ನೀಡುತ್ತಿದೆ. ಹೀಗಾಗಿ ಭಾರತ ವಿಶ್ವದ ಆಟಗಾರ ಮತ್ತು ಭದ್ರತೆ ಮತ್ತು ಸ್ಥಿರತೆಯ ರಫ್ತುದಾರ ಅಂತ ಅಮೆರಿಕ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್‌ ಕಿರ್ಬಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply