ಇಸ್ರೇಲ್‌ಗೆ ಯುದ್ಧನೌಕೆ ರವಾನೆ! ಯುದ್ಧಕ್ಕೆ ಅಮೆರಿಕ ಎಂಟ್ರಿ!

masthmagaa.com:

ಸುಮಾರು 50 ವರ್ಷಗಳ ನಂತರ ಭೀಕರ ಯುದ್ಧದಲ್ಲಿ ತೊಡಗಿರುವ ಇಸ್ರೇಲ್‌, ಹಮಾಸ್‌ ಉಗ್ರರನ್ನ ಬಡಿದೋಡಿಸುವ ಕೆಲಸ ಮುಂದುವರೆಸಿದೆ. ಅತ್ತ ಹಮಾಸ್‌ ಬಂಡುಕೋರರು ಕೂಡ ಇಸ್ರೇಲಿಗರ ಮೇಲೆ ಮನಬಂದಂತೆ ದಾಳಿ ಮಾಡ್ತಿದ್ದಾರೆ. ದಾಳಿ-ಪ್ರತಿದಾಳಿಯಲ್ಲಿ ಈವರೆಗೆ ಎರಡೂ ಕಡೆ ಸುಮಾರು 1000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಕೇವಲ ಅಲ್ಲಿನ ನಾಗರಿಕರಲ್ದೆ ಇತರ ದೇಶಗಳ ಪ್ರಜೆಗಳು ಕೂಡ ಅಲ್ಲಿನ ಸಂಘರ್ಷಕ್ಕೆ ಬಲಿಯಾಗಿದ್ದಾರೆ. ಹಮಾಸ್‌ ಗುಂಪಿನ ದಾಳಿಯಲ್ಲಿ ತನ್ನ ದೇಶದ ನಾಗರಿಕರು ಸಾವನ್ನಪ್ಪಿದ್ದಾರೆ ಅಂತ ಅಮೆರಿಕ ಹೇಳಿದೆ. ಹಾಗೂ ಇಸ್ರೇಲ್‌ ನೆರವಿಗೆ ತನ್ನ USS Gerald R Ford ಯುದ್ಧವಿಮಾನ ವಾಹಕ ನೌಕೆಯನ್ನ ಪೂರ್ವ ಮೆಡಡಿಟರೇನಿಯನ್‌ ಸಮೀಪ ಕಳಿಸ್ತಿರೋದಾಗಿ ಹೇಳಿದೆ. ಇದರ ಜೊತೆಗೆ ಗೈಡೆಡ್‌ ಮಿಸೈಲ್‌ ಕ್ರೂಸರ್‌ ಹಾಗೂ 4 ಗೈಡೆಡ್‌ ಮಿಸೈಲ್‌ ಡೆಸ್ಟ್ರಾಯರ್‌ಗಳನ್ನ ಕಳಿಸೋದಾಗಿ ಅಮೆರಿಕದ ಡಿಫೆನ್ಸ್‌ ಸೆಕ್ರಟರಿ, ಲಾಯ್ಡ್‌ ಆಸ್ಟಿನ್‌ ಹೇಳಿದ್ದಾರೆ. ಅಲ್ದೇ ಇತ್ತ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಇಸ್ರೇಲ್‌ ಅಧ್ಯಕ್ಷ ಐಸಾಕ್‌ ಹರ್ಜಾಗ್ ಅವ್ರ ಜೊತೆ ಕಾಲ್‌ನಲ್ಲಿ ಮಾತುಕತೆ ನಡೆಸಿದ್ದಾರೆ. ಇತ್ತ ಇಸ್ರೇಲ್‌ಗೆ ಶಸ್ತ್ರಾಸ್ತ್ರ ಪೂರೈಸುವ ಅಮೆರಿಕದ ನಡೆಯನ್ನ ಹಮಾಸ್‌ ಖಂಡಿಸಿದೆ. ಇದು ಪ್ಯಾಲಸ್ತೈನ್‌ ಜನರ ವಿರುದ್ಧ ಪ್ರಚೋದನೆಯನ್ನ ಹೆಚ್ಚಿಸುತ್ತೆ ಅಂತ ಹೇಳಿಕೆ ಬಿಡುಗಡೆ ಮಾಡಿದೆ.

ಇನ್ನು ಈ ಸಂಘರ್ಷದಲ್ಲಿ ಥೈಲೆಂಡ್‌ನ 12 ನಾಗರಿಕರು ಸಾವನ್ನಪ್ಪಿರೋದಾಗಿ ಅಲ್ಲಿನ ರಾಯಭಾರ ಕಚೇರಿ ಮಾಹಿತಿ ನೀಡಿದೆ. ಅಷ್ಟೇ ಅಲ್ದೇ ಸುಮಾರು 10 ನೇಪಾಳಿ ವಿದ್ಯಾರ್ಥಿಗಳು ಮೃತಪಟ್ಟಿರೋದಾಗಿ ನೇಪಾಳ ರಾಯಭಾರ ಕಚೇರಿ ತಿಳಿಸಿದೆ. ಇನ್ನು ಇಸ್ರೇಲ್‌ನಲ್ಲಿ ಸಾವಿರಾರು ಭಾರತೀಯರು ಸಿಲುಕಿದ್ದಾರೆ. ಅವರಲ್ಲಿ ಮಂಗಳೂರು, ಉಡುಪಿ ಸೇರಿದಂತೆ ನೂರಾರು ಕನ್ನಡಿಗರು ಇದ್ದಾರೆ. ಇವರ ಸಹಾಯಕ್ಕಾಗಿ ರಾಜ್ಯ ಸರ್ಕಾರ ಹೆಲ್ಪ್‌ಲೈನ್‌ನ್ನ ಓಪನ್‌ ಮಾಡಿದೆ. ಇತ್ತ ಇಸ್ರೇಲ್‌ನ ಕಿಬಜ್‌ ರಿಮ್‌ ಬಳಿ ಮ್ಯೂಸಿಕ್‌ ಪಾರ್ಟಿಯೊಂದ್ರಲ್ಲಿ ಭಾಗಿಯಾಗಿದ್ದ ಸಾವಿರಾರು ಜನರನ್ನ ಟಾರ್ಗೆಟ್‌ ಮಾಡಿ, ಹಮಾಸ್‌ ಉಗ್ರರು ಮಾರಣಹೋಮ ನಡೆಸಿದ್ದಾರೆ. ಪಾರ್ಟಿ ನಡೆದ ಜಾಗದಲ್ಲಿ ಕನಿಷ್ಠ 260 ಮೃತ ದೇಹಗಳು ಸಿಕ್ಕಿವೆ ಎನ್ನಲಾಗಿದೆ.

ಇನ್ನೊಂದ್‌ ಕಡೆ ಹೇಳೊದು ಆಚಾರ, ತಿನ್ನೊದು ಬದನೆಕಾಯಿ ಅನ್ನೊ ಹಾಗೆ, ಯುಕ್ರೇನ್‌ ಮೇಲೆ ಒಂದೂವರೆ ವರ್ಷದಿಂದ ದಾಳಿ ಮಾಡ್ತಿರೊ ರಷ್ಯಾ, ಇಸ್ರೇಲ್‌ ಹಾಗೂ ಪ್ಯಾಲಸ್ತೈನ್‌ ಸಂಘರ್ಷಕ್ಕೆ ಕಳವಳ ವ್ಯಕ್ತಪಡಿಸಿದೆ. ಈ ಕೂಡಲೇ ಕದನವಿರಾಮ ಘೋಷಿಸ್ಬೇಕು ಅಂತ ಹೇಳಿದೆ. ಈ ಬಗ್ಗೆ ಮಾತಾಡಿರೊ ರಷ್ಯಾದ ವಿದೇಶಾಂಗ ಸಚಿವಾಲಾಯದ ವಕ್ತಾರೆ ಮಾರಿಯಾ ಜಖರೊವಾ, ಪ್ಯಾಲಸ್ತೈನ್‌ ಹಾಗೂ ಇಸ್ರೇಲ್‌ ತಕ್ಷಣವೇ ಕದನವಿರಾಮ ಘೋಷಿಸ್ಬೇಕು. ಈಗಲೇ ಹಿಂಸಾಚಾರವನ್ನ ಕೈಬಿಡಬೇಕು, ಮಧ್ಯಪ್ರಾಚ್ಯದಲ್ಲಿ ಶಾಶ್ವತವಾಗಿ ಶಾಂತಿಯನ್ನ ಸ್ಥಾಪಿಸಲು ಅಂತಾರಾಷ್ಟ್ರೀಯ ಸಮುದಾಯದ ನೆರವಿನೊಂದಿಗೆ ಸಂಧಾನ ಪ್ರಕ್ರಿಯೆಯನ್ನ ನಡೆಸಬೇಕು ಅಂತ ಹೇಳಿದ್ದಾರೆ. ಇದೇ ವೇಳೆ ಪ್ಯಾಲಸ್ತೈನ್‌ ಸ್ವತಂತ್ರ ದೇಶವಾಗೋದಕ್ಕೆ ರಷ್ಯಾದ ಬೆಂಬಲವಿದೆ ಅಂತ ಹೇಳಿದ್ದಾರೆ. ಅಂದ್ಹಾಗೆ ಕಳೆದ ಒಂದೂವರೆ ವರ್ಷದಿಂದ ಯುಕ್ರೇನ್-ರಷ್ಯಾ ಸಂಘರ್ಷವನ್ನ ಸ್ಟಾಪ್‌ ಮಾಡುವಂತೆ, ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ಜಾಗತಿಕವಾಗಿ ಅನೇಕ ರಾಷ್ಟ್ರಗಳು ಕರೆ ನೀಡಿವೆ. ಆದರೆ ರಷ್ಯಾ ದಾಳಿಯನ್ನ ನಿಲ್ಲಿಸುವ ಚಿಕ್ಕ ಸಿಗ್ನಲ್‌ನ್ನ ನೀಡ್ತಾಯಿಲ್ಲ. ಅಲ್ದೇ ಇತ್ತೀಚೆಗೆ ಮತ್ತೆ ಪರಮಾಣು ಶಸ್ತ್ರಾಸ್ತ್ರ ಬಳಸುವ ಬಗ್ಗೆ ಮಾತಾಡಿದ್ದು, ಶತ್ರುಗಳಿಗೆ ಬದುಕುವ ಚಾನ್ಸ್‌ ಇರಲ್ಲ ಅಂತ ಎಚ್ಚರಿಕೆ ನೀಡಿದ್ರು. ಆದ್ರೆ ಇದೀಗ ಇಸ್ರೇಲ್‌ ಹಾಗೂ ಪ್ಯಾಲಸ್ತೈನ್‌ ದೇಶಗಳಿಗೆ ಬುದ್ದಿ ಹೇಳ್ತಿದೆ.

ಮತ್ತೊಂದ್‌ ಕಡೆ ಯುಕ್ರೇನ್-ರಷ್ಯಾ ಸಂಘರ್ಷದಿಂದ ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಗಗನಕ್ಕೇರಿದೆ. ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಅನ್ನೊ ರೀತಿ ತೈಲ ಬೆಲೆ ಏರಿಕೆಗೆ ಇಸ್ರೇಲ್‌-ಹಮಾಸ್‌ ಸಂಘರ್ಷ ಕಾರಣವಾಗಿದೆ. ಸಂಘರ್ಷ ಭುಗಿಲೆದ್ದ ಬೆನ್ನಲ್ಲೇ ಬ್ರೆಂಟ್‌ ಕಚ್ಚಾ ತೈಲ ಬೆಲೆಯಲ್ಲಿ 4.7% ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 86.65 ಡಾಲರ್‌ ಅಂದ್ರೆ 7192 ರೂಪಾಯಿ ಆಗಿದೆ.

-masthmagaa.com

Contact Us for Advertisement

Leave a Reply