ಉತ್ತರಾಖಂಡ್‌ ಸುರಂಗ ದುರಂತ: ರಕ್ಷಣಾ ಕಾರ್ಯಾಚರಣೆಗೆ ನೂರಾರು ಅಡ್ಡಿ, ಆತಂಕದಲ್ಲಿ ಕಾರ್ಮಿಕರು!

masthmagaa.com:

ಉತ್ತರಕಾಶಿಯಲ್ಲಿ ಸಂಭವಿಸಿದ ಸುರಂಗ ದುರಂತದಲ್ಲಿ ಸಿಲುಕಿದ 41 ಕಾರ್ಮಿಕರನ್ನ ಹೊರ ತೆಗೆಯೋ ಕೆಲಸಕ್ಕೆ ಅಡ್ಡಿ ಆತಂಕಗಳು ಹೆಚ್ಚಾಗ್ತಿವೆ. ಕಾರ್ಮಿಕರನ್ನ ಹೊರತರಲು ರಕ್ಷಣಾ ಪಡೆ ಹರಸಾಹಸ ಪಡ್ತಿದೆ. ಅನೇಕ ಕ್ರಮಗಳನ್ನ ಕೈಗೊಂಡ್ರೂ ರಕ್ಷಣಾ ಕಾರ್ಯಾಚರಣೆಗೆ ಸಾಕಷ್ಟು ಅಡೆತಡೆಗಳು ಉಂಟಾಗ್ತಿವೆ. ಈ ಹಿನ್ನಲೆ ಕಳೆದ 15 ದಿನಗಳಿಂದ ಸುರಂಗದಲ್ಲಿ ಸಿಲುಕಿದವ್ರ ಮಾನಸಿಕ ಆರೋಗ್ಯವನ್ನ ಸ್ಥರವಾಗಿಡಲು ಮೊಬೈಲ್‌ ಫೋನ್‌ ಹಾಗೂ ಕ್ಯಾರಮ್‌ ಬೋರ್ಡ್‌ಗಳನ್ನ ನೀಡಲಾಗಿದೆ ಅಂತ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇತ್ತ ಸುರಂಗ ಕೊರೆಯಲು ಬಳಸಲಾಗಿದ್ದ ಅಮೆರಿಕದ ಅತ್ಯಾಧುನಿಕ ಆಗರ್‌ ಯಂತ್ರ ಕೂಡ ಕೈಕೊಟ್ಟಿದೆ. ಯಂತ್ರದ ಬ್ಲೇಡ್‌ ಅವಶೇಷಗಳಲ್ಲಿ ಸಿಲುಕಿದ್ದು, ರಕ್ಷಣಾ ಕಾರ್ಯಕ್ಕೆ ಹೆಚ್ಚಿನ ಅಡ್ಡಿಯಾಗಿದೆ. ಹೀಗಾಗಿ ಕಾರ್ಮಿಕರನ್ನ ಸ್ಥಳಾಂತರಿಸಲು ಇನ್ನೂ ಹಲವು ದಿನಗಳು ಬೇಕಾಗಬಹುದು ಅಂತ ಅಧಿಕಾರಿಗಳು ಹೇಳಿದ್ದಾರೆ. ಇನ್ನು ಆಗರ್‌ ಮಷೀನ್‌ ಕೈಕೊಟ್ಟ ಹಿನ್ನೆಲೆ ಹೈದ್ರಾಬಾದ್‌ನಿಂದ ಪ್ಲಾಸ್ಮಾ ಕಟರ್‌ನ್ನ ತರಿಸಲಾಗಿದೆ. ಪ್ರೈವೇಟ್‌ ಕಂಪನಿಯೊಂದರ ಚಾರ್ಟರ್‌ ವಿಮಾನದಲ್ಲಿ ನಿನ್ನ ರಾತ್ರಿ ಕಟರ್‌ನ್ನ ಸಿಲ್ಕ್ಯಾರಾ ಟನಲ್‌ ಬಳಿ ತರಲಾಗಿದೆ. ಈ ಕಟರ್‌, ಸುರಂಗದ ಅವಶೇಷಗಳಲ್ಲಿ ಸಿಲುಕಿ ಕೊಂಡಿರುವ ಆಗರ್‌ ಮಷೀನ್‌ನನ್ನ ಹೊರತೆಗೆಯೊದಕ್ಕೆ ಸಹಾಯ ಮಾಡಲಿದೆ. ಈಗಾಗಲೇ ಆಗರ್‌ನ್ನ ಕಟ್ ಮಾಡುವ ಕೆಲಸ ಆರಂಭವಾಗಿದ್ದು, ಇನ್ನು 16 ಮೀಟರ್‌ ಕಟ್‌ ಮಾಡಬೇಕಿದೆ ಅಂತ ಮೈಕ್ರೋ ಟನಲಿಂಗ್‌ ತಜ್ಞ ಕ್ರಿಸ್‌ ಕೂಪರ್‌ ಹೇಳಿದ್ದಾರೆ. ಇನ್ನು ಮಷೀನ್‌ಗಳಿಂದ ಕೂಡ ಸರಿಯಾಗಿ ರಕ್ಷಣಾ ಕಾರ್ಯಾಚರಣೆ ಆಗದೇ ಇರೋದ್ರಿಂದ, ಮೆಕಾನಿಕಲ್‌ ಆಗಿ ಅಂದ್ರೆ ಸಿಬ್ಬಂದಿ ಕೈಯಿಂದಲೇ ಸುರಂಗವನ್ನ ಕೊರೆಯುವ ಕೆಲಸ ಮಾಡೋಕೆ ಮುಂದಾಗಿದ್ದಾರೆ. ಸೋ ಪರ್ವತದ ಮೇಲೆ ಕೆಲಸ ಮಾಡುವಾಗ ಎಲ್ಲವೂ ಅನಿರೀಕ್ಷಿತ, ಅಂದ್ರೆ ಯಾವ ಟೈಮಲ್ಲಿ ಏನ್‌ ಆಗುತ್ತೆ ಅಂತ ಹೇಳಕಾಗಲ್ಲ. ಈ ಕಾರ್ಯಾಚರಣೆಗೆ ಸಾಕಷ್ಟು ಕಾಲಾವಧಿ ಬೇಕು. ಹೀಗಾಗಿ ನಾವ್‌ ಯಾವುದೇ ಟೈಮ್‌ ಲೈನ್‌ ನೀಡಿಲ್ಲ ಎಲ್ಲರೂ ತಾಳ್ಮೆಗೆ ಸಹಕರಿಸಬೇಕು ಅಂತ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ ಲೆಫ್ಟಿನಂಟ್‌ ಜನರಲ್‌ ಸಯ್ಯದ್‌ ಅಟಾ ಹಸ್ನೇನ್ ಮಾಹಿತಿ ನೀಡಿದ್ದಾರೆ. ಇನ್ನೊಂದೆಡೆ ಅಂತಾರಾಷ್ಟ್ರೀಯ ಸುರಂಗ ತಜ್ಞ ಅರ್ನಾಲ್ಡ್‌ ಡಿಕ್ಸ್‌ ಮಾತನಾಡಿ ಕಾರ್ಯಾಚರಣೆ ವಿಳಂಬವಾಗಿ ಕ್ರಿಸ್ಮಸ್‌ ವೇಳೆಗೆ ಕಾರ್ಮಿಕರನ್ನ ರಕ್ಷಣೆ ಮಾಡಿ ಹೊರತೆಗೆಯುವ ಕೆಲಸ ಆಗಬಹುದೆಂದು ತಿಳಿಸಿದ್ದಾರೆ. ಇತ್ತ ರಕ್ಷಣಾ ಕಾರ್ಯಾಚರಣೆಗೆ ಭಾರತೀಯ ಸೇನೆ ಕೂಡ ಧಾವಿಸಿದೆ. ಕೋರ್‌ ಆಫ್‌ ಇಂಜಿನಿಯರ್ಸ್‌ನ ಮದ್ರಾಸ್‌ ಘಟಕ ಸ್ಥಳಕ್ಕೆ ಧಾವಿಸಿದ್ದು ರಕ್ಷಣಾ ಕಾರ್ಯದಲ್ಲಿ ಸಹಾಯ ಮಾಡಲಿದೆ. ಕಳೆದ 360 ಗಂಟೆಗಳಿಂದ ಸುರಂಗದಲ್ಲಿ ಸಿಲುಕಿಕೊಂಡಿರೋ ಕಾರ್ಮಿಕರಿಗೆ ಬೆಳಕು, ಆಹಾರ, ನೀರು, ಆಮ್ಲಜನಕ ಹಾಗೂ ಔಷಧಿಗಳ ಪೂರೈಕೆಯಿದ್ದು ಸೇಫ್‌ ಆಗಿದ್ದಾರೆ ಅಂತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply