ಸಧ್ಯದಲ್ಲೇ ಅಭಿಮಾನಿಗಳಿಗೆ ‘ವೆಡ್ಡಿಂಗ್ ಗಿಫ್ಟ್’ ನೀಡಲಿರುವ ನಟಿ ಪ್ರೇಮಾ!

masthmagaa.com:

ವಿಕ್ರಂಪ್ರಭು ನಿರ್ಮಿಸಿ, ನಿರ್ದೇಶಿಸಿ ನಟಿ ಪ್ರೇಮ ಲಾಯರ್ ಪಾತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿರುವ “ವೆಡ್ಡಿಂಗ್ ಗಿಫ್ಟ್” ಚಿತ್ರದ ಚಿತ್ರೀಕರಣ ನಿಗದಿಗಿಂತ ಒಂದು ದಿನ‌ ಮುಂಚಿತಾವಾಗಿ ಮುಗಿದಿದೆ. ಈ ಸಂತಸವನ್ನ ಹಂಚಿಕೊಳ್ಳೋದಕ್ಕೆ ಚಿತ್ರತಂಡ ಪತ್ರಿಕಾಗೋಷ್ಠಿ ಇತ್ತೀಚೆಗೆ ಆಯೋಜಿಸಿತ್ತು.

ಈ ಸಂದರ್ಭದಲ್ಲಿ ಮಾತನಾಡಿರುವ ನಿರ್ದೇಶಕ, ನಿರ್ಮಾಪಕ ವಿಕ್ರಂ ಪ್ರಭು, ‘ನಾನು ಮೂಲತಃ ಮಂಗಳೂರಿನವನು. ಈಗ ಪುಣೆ ವಾಸಿ. ಹದಿನೆಂಟು ವರ್ಷಗಳ ಹಿಂದೆ ರಾಜೇಂದ್ರ ಸಿಂಗ್ ಬಾಬು ಅವರ “ಲವ್” ಚಿತ್ರಕ್ಕೆ ಕೆಲಸ ಮಾಡಿದ್ದೆ. ಆನಂತರ ಚಿತ್ರರಂಗದಿಂದ ದೂರವಾದೆ. ಈಗ ಮತ್ತೆ ಬಂದಿದ್ದೀನಿ. ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶನ ಮಾಡಿದ್ದೀನಿ. ನಮ್ಮ ಪ್ರಕಾರ ಡಿಸೆಂಬರ್ 31ರಂದು ಚಿತ್ರೀಕರಣ ಪೂರ್ಣವಾಗಬೇಕಿತ್ತು. ಒಂದು ದಿನ ಮೊದಲೇ 30 ರಂದೇ ಚಿತ್ರೀಕರಣ ಮುಗಿದಿದೆ. ಬೆಂಗಳೂರು, ತುಮಕೂರು, ಉಡುಪಿ, ಮಂಗಳೂರು ಮುಂತಾದಕಡೆ ಮೂವತ್ತೇಳು ದಿನಗಳ ಚಿತ್ರೀಕರಣ ನಡೆದಿದೆ. ನಿಶಾನ್ ನಾಣಯ್ಯ – ಸೋನುಗೌಡ ನಾಯಕ, ನಾಯಕಿಯಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಲಾಯರ್ ಪಾತ್ರದಲ್ಲಿ ಓಂ ಖ್ಯಾತಿ ಪ್ರೇಮ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಪವಿತ್ರಲೋಕೇಶ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಏಪ್ರಿಲ್ ವೇಳೆಗೆ ಚಿತ್ರ ಬಿಡುಗಡೆಯಾಗಲಿದೆ’ ಎಂದು ಹೇಳಿಕೊಂಡಿದ್ದಾರೆ.

ಇನ್ನು ನಟಿ ಪ್ರೇಮ ಮಾತನಾಡಿ, ‘ಕಥೆ ಕೇಳಿ ವಿಭಿನ್ನ ಅನಿಸಿತು. ಮೊದಲ ಸಲ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಾನು ಎಲ್ಲಾ ಚಿತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ. ಪಾತ್ರ ಚೆನ್ನಾಗಿದ್ದರಷ್ಟೆ ಒಪ್ಪಿಕೊಳ್ಳುವುದು. ಈ ಚಿತ್ರದ ಕಥೆ ಬಗ್ಗೆ ಒಂದೆಳೆ ಹೇಳಿದರು. ಒಂದು ಉತ್ತಮ ಸಂದೇಶವಿರುವ ಕಥೆ ಅಂತ ಅನ್ನಿಸ್ತು, ಹಾಗಾಗಿ ನಟಿಸೋಕೆ ಒಪ್ಪಿಕೊಂಡೆ, ಬಹಳ ದಿನಗಳ ನಂತರ ಮತ್ತೆ ಒಂದು ಒಳ್ಳೆ ಸಿನಿಮಾದಲ್ಲಿ ನಟಿಸಿರುವ ಖುಷಿಯಿದೆ’ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

‘ಪತ್ರಕರ್ತ ಶೆಣೈ ಅವರಿಂದ ನನಗೆ ಈ ಚಿತ್ರತಂಡ ಪರಿಚಯವಾಯಿತು. ನಾನು ಚಿತ್ರೀಕರಣ ಮುಗಿಸಿ ಬಂದ ಮೇಲೆ ರಾತ್ರಿ ಕೊರಗುತ್ತಿದ್ದೆ. ನಾನು ಮಾಡಿದ್ದು, ಸರಿನಾ? ತಪ್ಪಾ? ಅಂತ ಯೋಚಿಸುತ್ತಿದ್ದೆ. ನನ್ನ ತಂಗಿ ಇದ್ದನ್ನು ಸರಿ ಮಾಡಿದ್ದಳು. ನೀನು ಚಿತ್ರದ ಪಾತ್ರಗಳನ್ನು ಚಿತ್ರೀಕರಣ ಮುಗಿಯುತ್ತಿದ್ದ ಹಾಗೆ ಅಲ್ಲೇ ಬಿಟ್ಟುಬಿಡಬೇಕು.‌ ಮನೆಗೆ ಬಂದ ಮೇಲೆ ನೀನು ಸೋನು ಗೌಡ ಆಗಿಯೇ ಇರಬೇಕು ಎಂದಳು. ಈಗ ಹಾಗೆ ಮಾಡುತ್ತಿದ್ದೇನೆ. ನಾನು ಈವರೆಗೂ ಇಂತಹ ಪಾತ್ರ ಮಾಡಿಲ್ಲ ಅನ್ನಬಹುದು. ಆಕಾಂಕ್ಷ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನೊಂದ ಮನಸ್ಸುಗಳಿಗೆ ಹತ್ತಿರವಾಗುವ ಪಾತ್ರ ನನ್ನದು. ಉತ್ತಮ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ ವಿಕ್ರಂಪ್ರಭು ಅವರಿಗೆ ಧನ್ಯವಾದ’ ಎಂದು ಹೇಳಿಕೊಂಡಿದ್ದಾರೆ.

ನಿಶಾನ್ ನಾಣಯ್ಯ ನಾಯಕನಾಗಿ ಅಭಿನಯಿಸುತ್ತಿರುವ ಈ ಚಿತ್ರಕ್ಕೆ ಬಾಲಚಂದ್ರ ಪ್ರಭು ಸಂಗೀತ, ಉದಯಲೀಲ ಛಾಯಾಗ್ರಹಣ ಮತ್ತು ವಿಜೇತ್ ಚಂದ್ರ ಸಂಕಲನ ಇದೆ.

-masthmagaa.com

Contact Us for Advertisement

Leave a Reply