ಏನಿದು ಮತದಾರರ ಪಟ್ಟಿ ಹಗರಣ? ಕಾಂಗ್ರೆಸ್‌ ಆರೋಪ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ

masthmagaa.com:

ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರೋ ಹೊತ್ತಲ್ಲೇ ರಾಜ್ಯದ ಆಡಳಿತರೂಢ ಬಿಜೆಪಿ ಸರ್ಕಾರದ ಮೇಲೆ ಕಾಂಗ್ರೆಸ್‌ ಗಂಭೀರ ಆರೋಪ ಮಾಡಿದೆ. ಮತದಾರರ ಜಾಗೃತಿ ಹೆಸರಿನಲ್ಲಿ ಮತದಾರರ ಡೇಟಾ ಕಳ್ಳತನಕ್ಕೆ ಬಿಜೆಪಿ ಸರ್ಕಾರ ಇಳಿದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹೈಜಾಕ್‌ ಮಾಡೋಕೆ ಬಿಜೆಪಿ ಮುಂದಾಗಿದೆ ಅಂತ ಕಾಂಗ್ರೆಸ್‌ ಆರೋಪ ಮಾಡಿದೆ. ವಿಶೇಷ ಮತದಾರರ ಜಾಗೃತಿ ಅಭಿಯಾನ ನಡೆಸೋಕೆ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ ಚಿಲುಮೆಗೆ ಬಿಬಿಎಂಪಿ ಅನುಮತಿ ನೀಡಿತ್ತು. ಆದರೆ ಚಿಲುಮೆ ಸಂಸ್ಥೆ ಆದೇಶವನ್ನ ದುರುಪಯೋಗ ಪಡಿಸಿಕೊಂಡಿದೆ. ನೂರಾರು ಏಜೆಂಟರಿಗೆ ಬಿಬಿಎಂಪಿಯ ಬೂತ್ ಮಟ್ಟದ ಅಧಿಕಾರಿ (BLO)ಗಳ ನಕಲಿ ಐಡಿ-ಕಾರ್ಡ್‌ಗಳನ್ನ ನೀಡಿದೆ. ಇವರು ಮತದಾರರ ಹೆಸರು, ಜಾತಿ, ಶಿಕ್ಷಣ, ಉದ್ಯೋಗ ಸೇರಿದಂತೆ ಸೂಕ್ಷ್ಮ ಮಾಹಿತಿಗಳನ್ನ ಸಂಗ್ರಹಿಸಿದ್ದಾರೆ. ಹೀಗಾಗಿ ಚಿಲುಮೆ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ದೂರು ದಾಖಲಿಸಿವೆ. ಜೊತೆಗೆ ಮತದಾರರ ಜಾಗೃತಿ ಕಾರ್ಯಕ್ರಮವನ್ನ ಚಿಲುಮೆ ಸಂಸ್ಥೆ ಉಚಿತವಾಗಿ ಮಾಡುತ್ತೆ ಅಂತ ಹೇಳುತ್ತೆ. ಆ ಕಾರ್ಯಕ್ರಮಕ್ಕೆ ಬಿಜೆಪಿ ಕಾರ್ಯಕರ್ತರನ್ನೇ ನೇಮಿಸಿ ದಿನಕ್ಕೆ 1,500 ರೂ. ವೇತನ ನೀಡ್ತಿದೆ. ಉಚಿತ ಕೆಲಸ ಮಾಡೋರು ದುಬಾರಿ ವೇತನ ನೀಡ್ತಾರಂದ್ರೆ, ಅವ್ರ ಪ್ರಾಫಿಟ್‌ ಏನು ಬೊಮ್ಮಾಯಿ ಅವ್ರೇ ಅಂತ ಕಾಂಗ್ರೆಸ್ ಪ್ರಶ್ನಿಸಿದೆ. ಚುನಾವಣಾ ಆಯೋಗ, ಬಿಬಿಎಂಪಿ ಹೊಣೆ ಹೊತ್ತಿರೊ ಸಿಎಂ ಇದಕ್ಕೆಲ್ಲಾ ಕಾರಣ. ʻಆಪರೇಶನ್‌ ಮತದಾರರ ಪಟ್ಟಿ ಪರಿಷ್ಕರಣೆʼ ಹಗರಣದಲ್ಲಿ ಭಾಗಿಯಾಗಿರೊ ಸಿಎಂ ತಕ್ಷಣ ರಾಜಿನಾಮೆ ನೀಡ್ಬೇಕು. ಸಿಎಂ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾಗಿರೊ ಎಲ್ಲ ಅಧಿಕಾರಿಗಳನ್ನ ತಕ್ಷಣ ಬಂಧಿಸ್ಬೇಕು ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. 40% ಭ್ರಷ್ಟಾಚಾರ ಮತ್ತು ಆಂತರಿಕ ಬಿಕ್ಕಟ್ಟಿನಲ್ಲಿ ಮುಳುಗಿಹೋಗಿರೊ ಬಿಜೆಪಿ ಚುನಾವಣೆ ಗೆಲ್ಲುವ ವಿಶ್ವಾಸ ಕಳೆದುಕೊಂಡಿದೆ. ಹಾಗಾಗಿ ವಾಮಮಾರ್ಗದಿಂದ ಗೆಲ್ಲಲು ಸಂಚು ಹೂಡಿದ್ದಾರೆ ಅಂತ ಹೇಳಿದ್ದಾರೆ. ‌ ಚಿಲುಮೆ ಸಂಸ್ಥೆ ಜೊತೆಗೆ ಹೊಂಬಾಳೆ ಫಿಲ್ಮ್ಸ್‌ ಸಂಸ್ಥೆ ಕೂಡ ಭಾಗಿಯಾಗಿದೆ ಎರಡಕ್ಕೂ ಕೃಷ್ಣಪ್ಪ ರವಿಕುಮಾರ್‌ ಮುಖ್ಯಸ್ಥರಾಗಿದ್ದಾರೆ. ಈ ರವಿಕುಮಾರ್‌ಗೂ ಸಚಿವ ಅಶ್ವಥ್‌ ನಾರಾಯಣ ಅವ್ರಿಗೂ ಅವಿನಾಭಾವ ಸಂಬಂಧವಿದೆ. ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಅಶ್ವಥ್ ಭಾಗವಹಿಸಿದ್ರು ಅಂತ ಫೋಟೊಗಳನ್ನ ತೋರಿಸಿ ಕಾಂಗ್ರೆಸ್‌ ನಾಯಕ ಸುರ್ಜೆವಾಲ ಆರೋಪಿಸಿದ್ದಾರೆ. ಸಚಿವರು ತಮ್ಮ ಹಿತೈಷಿಯ ಹಿತ ಬಯಸಿದ್ದಾರೆ. ಮತದಾರರ ಮಾಹಿತಿ ಕಳ್ಳತನಕ್ಕೆ ಬಿಜೆಪಿ ಪಕ್ಷವೇ ʻಚಿಲುಮೆʼ ಸಂಸ್ಥೆಯನ್ನ ಬಳಸಿಕೊಂಡಿರೋದಕ್ಕೆ ಬೇರೆ ಸಾಕ್ಷಿ ಬೇಕಾ ಅಂತ ಕಿಡಿಕಾರಿದ್ದಾರೆ. ಇತ್ತ ಕಾಂಗ್ರೆಸ್‌ ತನ್ನ ಮೇಲೆ ಮಾಡಿರೋ ಆರೋಪಕ್ಕೆ ಬಿಬಿಎಂಪಿ ಪ್ರತಿಕ್ರಿಯಿಸಿದೆ. ಚಿಲುಮೆ ಸಂಸ್ಥೆಗೆ ಜಾಗೃತಿ ಮೂಡಿಸೋದಕ್ಕೆ ಅಷ್ಟೇ ಅನುಮತಿ ಕೊಟ್ಟಿದ್ವಿ. ಡೇಟಾ ಕಲೆಕ್ಟ್‌ ಮಾಡೋಕೆ ಅಲ್ಲ. ಆದ್ರೆ ಡೇಟಾ ಕಲೆಕ್ಟ್‌ ಮಾಡ್ತಿದಾರೆ ಅಂತ ದೂರು ದಾಖಲಾಗಿದೆ. ಹೀಗಾಗಿ ಅವರಿಗೆ ನೀಡಿದ್ದ ಅನುಮತಿ ಕ್ಯಾನ್ಸಲ್‌ ಮಾಡಿದ್ದೇವೆ ಅಂತ ಬಿಬಿಎಂಪಿ ವಿಶೇಷ ಚುನಾವಣಾ ಆಯುಕ್ತ ರಂಗಪ್ಪ ಹೇಳಿದ್ದಾರೆ. ಇನ್ನು ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಮಾಹಿತಿಯನ್ನ ಅಕ್ರಮವಾಗಿ ಸಂಗ್ರಹ ಮಾಡಲಾಗಿದೆ ಅನ್ನೊ ಕಾಂಗ್ರೆಸ್ ಆರೋಪ ಆಧಾರ ರಹಿತವಾಗಿದೆ. ಆದರೂ ಇಡೀ ಪ್ರಕ್ರಿಯೆಯಲ್ಲಿ ನಡೆದ ಅಕ್ರಮದ ಬಗ್ಗೆ ತನಿಖೆ ಮಾಡುವಂತೆ ಸೂಚನೆ ನೀಡ್ತೇನೆ ಅಂತ ಬೊಮ್ಮಾಯಿ ತಿಳಿಸಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಸೋಷಿಯೊ ಎಕನಾಮಿಕ್‌ ಸರ್ವೆ ಹೆಸರಿನಲ್ಲಿ ರಾಜ್ಯಾದ್ಯಂತ ಜಾತಿ, ಉಪಜಾತಿ ಸರ್ವೇ ಮಾಡಿ, ಚುನಾವಣೆಗೆ ಬಳಸಿಕೊಂಡಿದ್ದಾರೆ. ಮೊದಲ ಅರೆಸ್ಟ್‌ ಆಗೋದಾದ್ರೆ ಸಿದ್ದರಾಮಯ್ಯ ಅವರನ್ನ ಮಾಡ್ಬೇಕು ಅಂತ ಹೇಳಿದ್ದಾರೆ. ಇತ್ತ ಹೊಂಬಾಳೆಗೂ ಚಿಲುಮೆಗೂ ಏನೂ ಸಂಬಂಧ ಇಲ್ಲ ಸಚಿವ ಅಶ್ವಥ್ ನಾರಾಯಣ್ ಹೇಳಿದ್ದಾರೆ. ಅಂದ್ಹಾಗೆ ಹೊಂಬಾಳೆ ಫಿಲ್ಮ್ಸ್‌ನ ವಿಜಯ ಕಿರಂಗದೂರು ಅಶ್ವಥ್‌ ಅವರ ಸಂಬಂಧಿ. ಇನ್ನು ಚಿಲುಮೆ ಸಂಸ್ಥೆ ಮುಖ್ಯಸ್ಥ ರವಿಕುಮಾರ್ ನನಗೆ ಗೊತ್ತು, ಆದರೆ ಏನು ಅಕ್ರಮ ಮಾಡಿದ್ದಾರೊ ಗೊತ್ತಿಲ್ಲ. ಬರ್ತಡೇ ಕರೆದಿದ್ರೂ. ಅದಕ್ಕೆ ಕಾಂಗ್ರೆಸ್‌ ಅವ್ರನ್ನ ಕೇಳಿ ಹೋಗಬೇಕಾ. ಸಂಸ್ಥೆಗೆ ಅವಕಾಶ ಕೊಟ್ಟಿದ್ದು ಬಿಬಿಎಂಪಿ. ಇದಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಕಾಂಗ್ರೆಸ್‌ ನಾಯಕರ ಮೇಲೆ ಮಾನನಷ್ಟ ಮೊಕದ್ದಮೆ ಹಾಕ್ಬೇಕು ಅನ್ಸುತ್ತೆ. ಆದರೆ ಅಷ್ಟು ಪುರಸತ್‌ ಇಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply