ಚೀನಾ-ಭಾರತ ಗಡಿ ಸಂಘರ್ಷ: UN ಮುಖ್ಯಸ್ಥ, ಅಮೆರಿಕ ಹೇಳಿದ್ದೇನು?

masthmagaa.com:

ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಭಾರತ ಹಾಗೂ ಚೀನಾ ಯೋಧರ ನಡುವೆ ಘರ್ಷಣೆ ಕುರಿತು ಅಮೆರಿಕ ಪ್ರತಿಕ್ರಿಯಿಸಿದ್ದು, ಭಾರತದ ಬೆನ್ನಿಗೆ ನಿಂತಿದೆ. ನಾವು ಉಭಯ ದೇಶಗಳ ಗಡಿ ಸ್ಥಿತಿಯನ್ನ ಹತ್ತಿರದಿಂದ ಮಾನಿಟರ್‌ ಮಾಡ್ತಿದೀವಿ. ಚೀನಾದ ಸೇನೆ LACಯಲ್ಲಿ ಸೇನೆ ಘಟಕಗಳನ್ನ ನಿರ್ಮಿಸೋದನ್ನ, ಪ್ರಚೋದನಕಾರಿ ಚಟುವಟಿಕೆಗಳನ್ನ ಮಾಡ್ತಿರೋದನ್ನ ಗಮನಿಸಿದ್ದೇವೆ. ಹಾಗೂ ನಮ್ಮ ಪಾರ್ಟ್ನರ್‌ಗಳ ಭದ್ರತೆಗಾಗಿ ನಮ್ಮ ಬದ್ದತೆಯನ್ನ ಮುಂದುವರೆಸ್ತೀವಿ. ಗಡಿ ವಿಚಾರದಲ್ಲಿ ಭಾರತದ ಕ್ರಮಗಳನ್ನ ನಾವು ಸಪೋರ್ಟ್‌ ಮಾಡ್ತೀವಿ ಅಂತ ಪೆಂಟಗಾನ್‌ನ ವಕ್ತಾರ ಹೇಳಿದ್ದಾರೆ. ಇತ್ತ ಗಡಿ ವಿವಾದದ ಕುರಿತು ಎರಡು ದೇಶಗಳು ಚರ್ಚೆ ಮಾಡಿ ಬಗೆಹರಿಸಿಕೊಳ್ಳಬೇಕು ಅಂತ ಅಮೆರಿಕದ ಅಧಿಕಾರಿ ಜೀನ್‌ ಪಿಯರಿ ಹೇಳಿದ್ದಾರೆ. ಅಂದ್ಹಾಗೆ ಭಾರತ ಹಾಗೂ ಚೀನಾ ನಡುವೆ ಗಡಿ ಸಮಸ್ಯೆ ಕುರಿತು ಅನೇಕ ಮಾತುಕತೆಗಳು ನಡೆದಿವೆ. ಪೂರ್ವ ಗಡಿ ಲಡಾಖ್‌ನ ಗಡಿ ಬಿಕ್ಕಟ್ಟಿನ ನಂತರ ವಿವಿಧ ಹಂತಗಳಲ್ಲಿ ಸಮಸ್ಯೆಯನ್ನ ಪರಿಹರಿಸೋಕೆ ಎರಡು ದೇಶಗಳು ತಮ್ಮ ಕಮಾಂಡರ್‌ಗಳ ನಡುವೆ 16 ಸುತ್ತಿನ ಮಾತುಕತೆಗಳನ್ನ ನಡೆಸಿವೆ. ಅದರಲ್ಲೂ ಇತ್ತೀಚೆಗೆ ಸೆಪ್ಟಂಬರ್‌ನಲ್ಲಿ ನಡೆದ ಕೊನೆಯ ಸುತ್ತಿನ ಮಾತುಕತೆ ಟೈಮಲ್ಲಿ ಎರಡೂ ಕಡೆಯವರು ಗೋಗ್ರಾ ಹಾಟ್‌ ಸ್ಪ್ರಿಂಗ್ಸ್‌ ಪ್ರದೇಶದಲ್ಲಿನ ಪ್ಯಾಟ್ರೋಲಿಂಗ್‌ ಪಾಯಿಂಟ್‌ 15ರಿಂದ ತಮ್ಮ ಸೇನೆಗಳನ್ನ ಹೊಂತೆಗೆದುಕೊಳ್ಳಲು ಒಪ್ಪಿದ್ರು. ಇಷ್ಟೆಲ್ಲಾ ಮಾತುಕತೆ, ಚರ್ಚೆಗಳು ನಡೆದ್ರೂ ಇದೀಗ ಮತ್ತೆ ಸಂಘರ್ಷ ಆಗಿದೆ. ಇತ್ತ ಗಡಿ ಉದ್ವಿಗ್ನತೆಯನ್ನ ಕೊನೆಗೊಳಿಸಿ, ಶಾಂತಿ ಕಾಪಾಡುವಂತೆ ವಿಶ್ವಸಂಸ್ಥೆಯ ಮುಖ್ಯಸ್ಥ ಅಂಟಾನಿಯೋ ಗುಟೆರೆಸ್ ಕರೆ ನೀಡಿದ್ದಾರೆ. ಈ ನಡುವೆ ಗಡಿ ದಾಟಿ ಬಂದಿದ್ದ ಚೀನಿಯರಿಗೆ ಭಾರತೀಯ ಸೈನಿಕರು ಬಡಿದು ಓಡಿಸಿರೋ ವಿಡಿಯೋವೊಂದು ಸಖತ್‌ ವೈರಲ್‌ ಆಗ್ತಿದೆ. ಇದು 2021ರಲ್ಲಿ ಇದೇ ತವಾಂಗ್‌ ಭಾಗದಲ್ಲಿ ನಡೆದಿದೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply