ಇವತ್ತು ಎಲ್ಲೆಲ್ಲಿ ಮಳೆಯಾಗಿದೆ…? ಇಲ್ಲಿದೆ ನೋಡಿ ಸಂಪೂರ್ಣ ವರದಿ

masthmagaa.com:

ರಾಜ್ಯದಲ್ಲಿ ಸುರೀತಿರೋ ಅಬ್ಬರದ ಮಳೆ ಇವತ್ತೂ ಮುಂದುವರೆದಿದೆ. ಕಳೆದ 24 ಗಂಟೆಯಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಜಡಕಲ್ ಎಂಬಲ್ಲಿ ಅತಿಹೆಚ್ಚು ಅಂದ್ರೆ 205 ಮಿಲಿಮೀಟರ್ ಮಳೆಯಾಗಿದೆ. ಮುಂದಿನ 24 ಗಂಟೆಯಲ್ಲಿ ಕರಾವಳಿ ಜಿಲ್ಲೆಗಳ ಬಹುತೇಕ ಕಡೆ ಭಾರಿ ಮಳೆ, ಉಳಿದೆಡೆ ಅಧಿಕ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡು ಮತ್ತು ಉತ್ತರ ಒಳನಾಡು ಭಾಗಗಳ ಕೆಲವೊಂದು ಕಡೆ ಅಧಿಕ ಮಳೆ, ಇನ್ನುಳಿದ ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಅಂತ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ. ಇನ್ನು ರಾಜ್ಯದ ಬೀದರ್‌,ಕಲಬುರಗಿ, ಬೆಳಗಾವಿ, ಉತ್ತರಕನ್ನಡ, ಉಡುಪಿ, ಶಿವಮೊಗ್ಗ, ದಕ್ಷಿಣಕನ್ನಡ, ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಿದೆ.

ರಾಜ್ಯದಲ್ಲಿ ಸುರಿತೀರೋ ರಣಮಳೆಗೆ ಹಲವು ರೀತಿಯ ಹಾನಿಯಾಗಿದೆ. ರಸ್ತೆಗಳು ಕೊಚ್ಚಿಹೋಗಿದ್ದು ಮನೆಗಳು ನೆಲಸಮವಾಗಿವೆ. ಮರಗಳು ಧರೆಗುರುಳಿವೆ. ಕೆಲವು ಕಡೆ ನೆರೆ ಪರಿಸ್ಥಿತಿಯೂ ಉಂಟಾಗಿದೆ. ಇದರ ನಡುವೆಯೇ ಈಗ ರಾಜ್ಯದಲ್ಲಿ ನೆರೆ ಸಮಸ್ಯೆ ನಿರ್ವಹಣೆಗೆ ಟಾಸ್ಕ್‌ ಪೋರ್ಸ್‌ ರಚಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರೋದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇನ್ನು ಮಳೆಯ ಅಬ್ಬರಕ್ಕೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಸೂಳೆಮುರ್ಕಿ ಹತ್ತಿರ ರಾಷ್ಟ್ರೀಯ ಹೆದ್ದಾರಿ‌ – 69 ಕುಸಿತವಾಗಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಇನ್ನು ಭಾರಿ ಮಳೆಯ ನಡುವೆಯೂ ಮೀನು ಹಿಡಿಯಲು ಹೋದ ವೇಳೆ ತೆಪ್ಪ ಮಗುಚಿ ಇಬ್ಬರು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಅತ್ತ ತುಂಗಭದ್ರಾ ನದಿಯಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗ್ತಿರೋ ಹೊತ್ತಲ್ಲೇ ಅಪರೂಪ ಎನಿಸುವ ನೀರು ನಾಯಿಗಳು ಪತ್ತೆಯಾಗಿವೆ. ಇನ್ನು ಮಂಗಳೂರಿನ ಮೀನಕಳಿಯಾ ಬೀಚ್​ನಲ್ಲಿಯೂ ಕಡಲ್ಕೊರೆತ ಹೆಚ್ಚಾಗಿದ್ದು, ಸಿಮೆಂಟ್ ರಸ್ತೆ ಸ್ಲಾಬ್​ಗಳು ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಸುಮಾರು 200 ಮೀಟರ್ ಉದ್ದದ ರಸ್ತೆ ಸಮುದ್ರ ಪಾಲಾಗಿದೆ. ಇನ್ನು ರಾಜ್ಯದ ನೆರೆ ನಷ್ಟದ ಬಗ್ಗೆ ವರದಿ ತಯಾರಿಸಿ ಶೀಘ್ರವಾಗಿ ಕೇಂದ್ರಕ್ಕೆ ಸಲ್ಲಿಸ್ತೇವೆ. ಈಗಾಗಲೇ ಎಲ್ಲಾ ಉಸ್ತುವಾರಿಗಳು ಅವರಿಗೆ ಸಂಬಂಧಪಟ್ಟ ಜಿಲ್ಲೆಯಲ್ಲಿ ಪ್ರವಾಹಕ್ಕೆ ಸಂಬಂಧಿಸಿದಂತೆ ಕಾರ್ಯೋನ್ಮುಖರಾಗಿದ್ದು ನಿತ್ಯ ಅವರ ಸಂಪರ್ಕದಲ್ಲಿದ್ದೀನಿ ಅಂತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇನ್ನು ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಗುಜರಾತ್,ಮಹಾರಾಷ್ಟ್ರ ,ಅಸ್ಸಾಂ, ಜೊತೆಗೆ ರಾಷ್ಟ್ರರಾಜಧಾನಿ ದೆಹಲಿಯಲ್ಲೂ ಮಹಾಮಳೆ ಮುಂದುವರೆದಿದೆ.

-masthmagaa.com

Contact Us for Advertisement

Leave a Reply