ಭಾರತೀಯ ಸಂಜಾತ ವಿವೇಕ್‌ ರಾಮಸ್ವಾಮಿಯನ್ನ ಹೊಗಳಿದ ಟ್ರಂಪ್‌!

masthmagaa.com:

ನಾನು ಅಮೆರಿಕದ ಅಧ್ಯಕ್ಷನಾಗಿದ್ದಾಗ ಪರಮಾಣು ಯುದ್ಧವನ್ನ ತಡೆದಿದ್ದೆ ಅಂತ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಹೇಳಿದ್ದಾರೆ. ಟ್ರಂಪ್‌ ಅವ್ರ ಕಂಪನಿಗಳಿಂದ ವಂಚನೆ ಹಾಗೂ ಪ್ರಾಪರ್ಟಿ ಡಿಕ್ಲೇರೇಷನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್‌ನಲ್ಲಿ ನಡೆದ ಸಾಕ್ಷಿ ವಿಚಾರಣೆ ವೇಳೆ ಟ್ರಂಪ್‌ ಹೀಗೆ ಹೇಳಿರೋದು ಈಗ ಗೊತ್ತಾಗಿದೆ. ಈ ಬಗ್ಗೆ ಟ್ರಂಪ್‌ ನೀಡಿರುವ ಹೇಳಿಕೆಯ ವರದಿಯನ್ನ ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗಿದೆ. ಅಮೆರಿಕ ಅಧ್ಯಕ್ಷೀಯ ಹುದ್ದೆಯನ್ನ ಜಗತ್ತಿನಲ್ಲೇ ಅತ್ಯಂತ ಪ್ರಮುಖ ಅಂತ ನಾನು ಭಾವಿಸಿದ್ದೇನೆ. ಅಲ್ದೆ ನಾನು ಅಧ್ಯಕ್ಷನಾಗಿದ್ದಾಗಲೇ ಚೀನಾದ ಮೇಲೆ ಕಠಿಣ ಕ್ರಮ ಕೈಗೊಂಡಿದ್ದೆ. ಜೊತೆಗೆ ಯುಕ್ರೇನ್‌ ಮೇಲೆ ರಷ್ಯಾ ದಾಳಿ ಮಾಡದಂತೆ ಹಾಗೂ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಪರಮಾಣು ದಾಳಿ ಪ್ರಾರಂಭಿಸಿದಂತೆ ತಡೆಯಲಾಗಿದೆ. ಆ ಟೈಮ್‌ನಲ್ಲಿ ನಾನೇನಾದ್ರು ಉತ್ತರ ಕೊರಿಯಾದ ಜೊತೆಯಲ್ಲಿ ಡೀಲ್‌ ಮಾಡಿಕೊಂಡಿಲ್ಲ ಅಂದಿದ್ರೆ ನೀವು ನ್ಯೂಕ್ಲಿಯರ್‌ ವಾರ್‌ಗೆ ತುತ್ತಾಗುತ್ತಿದ್ರಿ. ಅಷ್ಟೆ ಅಲ್ದೆ ನಾನು ಅಧ್ಯಕ್ಷನಾಗಿ ಆಯ್ಕೆಯಾಗದೇ ಇದ್ದಿದ್ರೆ ನೀವು ಪರಮಾಣು ಯದ್ಧವನ್ನ ನೋಡುತ್ತಿದ್ರಿ ಅಂತ ಟ್ರಂಪ್‌ ಹೇಳಿಕೊಂಡಿದ್ದಾರೆ. ಅಂದ್ಹಾಗೆ ಟ್ರಂಪ್‌ ಮತ್ತು ಅವ್ರ ಕಂಪನಿ, ಸಂಪತ್ತು ಹಾಗೂ ಆಸ್ತಿಗಳ ಮೌಲ್ಯದ ಬಗ್ಗೆ ತಪ್ಪು ಮಾಹಿತಿ ನೀಡುವ ಮೂಲಕ ಸಾಲದಾತರು ಹಾಗೂ ವಿಮಾದಾರರನ್ನ ವಂಚಿಸಿದ್ದಾರೆ ಅನ್ನೋ ಕೇಸ್‌ನ್ನ ಫೇಸ್‌ ಮಾಡ್ತಿದ್ದಾರೆ. ಈ ಕೇಸ್‌ನ ವಿಚಾರಣೆ ಸೆಪ್ಟೆಂಬರ್‌ 22ರಂದು ನಡೆಯಲಿದೆ.

ಇತ್ತ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸೋಕೆ ತಯಾರಿ ನಡೆಸುತ್ತಿರುವ ಭಾರತೀಯ ಮೂಲದ ಉದ್ಯಮಿ ವಿವೇಕ್‌ ರಾಮಸ್ವಾಮಿಯವರನ್ನ ಟ್ರಂಪ್‌ ಹೊಗಳಿದ್ದಾರೆ. ಇಂಟರ್‌ವ್ಯೂ ಒಂದ್ರಲ್ಲಿ ಮಾತಾಡಿರುವ ಟ್ರಂಪ್‌, ವಿವೇಕ್‌ ತುಂಬಾ ಬುದ್ಧಿವಂತ ಹಾಗೂ ಗುಡ್‌ ಎನರ್ಜಿ ಹೊಂದಿದ್ದಾರೆ. ಜೊತೆಗೆ ವಿವೇಕ್‌ರಿಗೆ ಯಾವುದಾರು ಪ್ರಮುಖ ಸ್ಥಾನಕ್ಕೇರುವ ಸಾಮರ್ಥ್ಯವಿದೆ ಅಂತ ಹೇಳಿದ್ದಾರೆ. ಇದೇ ವೇಳೆ ಟ್ರಂಪ್‌ ಅಧ್ಯಕ್ಷರಾದ್ರೆ ವಿವೇಕ್‌ರನ್ನ ಉಪಾಧ್ಯಕ್ಷರಾಗಿ ಪರಿಗಣಿಸುತ್ತೀರ ಅಂತ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಟ್ರಂಪ್‌, ವಿವೇಕ್‌ ಆ ಹುದ್ದೆಗೆ ಸೂಕ್ತರಾಗಿರ್ತಾರೆ ಅಂತ ಹೇಳಿದ್ದಾರೆ. ಅಂದ್ಹಾಗೆ ಇತ್ತೀಚೆಗಷ್ಟೆ ಟ್ರಂಪ್‌ ಅಧ್ಯಕ್ಷತೆಯ ಜೊತೆಗೆ ತಾವು ಉಪಾಧ್ಯಕ್ಷರಾಗೋ ಅವಕಾಶವನ್ನ ತಳ್ಳಿಹಾಕಲು ಸಾಧ್ಯವಿಲ್ಲ ಅಂತ ವಿವೇಕ್‌ ಹೇಳಿದ್ದರು.

-masthmagaa.com

Contact Us for Advertisement

Leave a Reply