ಉದಯನಿಧಿ ಸ್ಟಾಲಿನ್‌ರ ಸನಾತನ ಧರ್ಮ ವಿರೋಧಿ ಹೇಳಿಕೆ ಬೆಂಬಲಿಸಿದ I.N.D.I.A!

masthmagaa.com:

ಸನಾತನ ಧರ್ಮ ಮಲೇರಿಯಾ, ಡೆಂಗ್ಯು ಇದ್ದಂತೆ ಅದನ್ನ ನಿರ್ಮೂಲನೆ ಮಾಡ್ಬೇಕು ಅಂತ ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್‌ ನೀಡಿದ್ದ ಹೇಳಿಕೆಯ ವಿವಾದ ಮುಂದುವರೆದಿದೆ. ದೇಶದ ಹಲವು ಕಡೆ ಉದಯನಿಧಿ ವಿರುದ್ಧ ಕೇಸ್‌ಗಳು ದಾಖಲಾಗಿವೆ. ಜೊತೆಗೆ ಬಿಜೆಪಿ ಸೇರಿದಂತೆ ಹಲವು ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದ್‌ ಕಡೆ ಪ್ರತಿಪಕ್ಷಗಳ ಒಕ್ಕೂಟ I.N.D.I.A ನಾಯಕರು ಉದಯನಿಧಿ ಅವ್ರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್‌ ನಾಯಕ ಕೆ.ಸಿ ವೇಣುಗೋಪಾಲ್‌ ಅವ್ರು ಪ್ರತಿಯೊಂದು ರಾಜಕೀಯ ಪಕ್ಷಕ್ಕು ತಮ್ಮ ಅಭಿಪ್ರಾಯಗಳನ್ನ ವ್ಯಕ್ತಪಡಿಸುವ ಅಭಿವ್ಯಕ್ತ ಸ್ವಾತಂತ್ರ್ಯವಿದೆ ಅಂತ ಹೇಳಿದ್ದಾರೆ. ಇದೇ ವೇಳೆ ಕಾಂಗ್ರೆಸ್‌ ಪ್ರತಿಯೊಬ್ಬರ ನಂಬಿಕೆಗಳನ್ನ ಗೌರವಿಸುತ್ತೆ ಹಾಗೂ ʻಸರ್ವಧರ್ಮ ಸಮಭಾವʼ ನಮ್ಮ ಐಡಿಯಾಲಜಿ ಅಂತ ಹೇಳಿದ್ದಾರೆ. ಇನ್ನೊಂದ್‌ ಕಡೆ ಉದಯನಿಧಿ ಹೇಳಿಕೆ ಕುರಿತು ಮಾತಾಡಿರುವ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ, ‘ಸಮಾನತೆಯನ್ನು ಪ್ರತಿಪಾದಿಸದ ಅಥವಾ ಮಾನವನ ಘನತೆಯನ್ನು ಕಾಪಾಡದ ಯಾವುದೇ ಧರ್ಮ ಧರ್ಮವೇ ಅಲ್ಲ’ ಅಂತ ಹೇಳಿದ್ದಾರೆ. ಜೊತೆಗೆ ‘ಮನುಷ್ಯರಿಗೆ ಸಮಾನ ಹಕ್ಕುಗಳನ್ನು ನೀಡದ ಅಥವಾ ನಿಮ್ಮನ್ನು ಮನುಷ್ಯರಂತೆ ನಡೆಸಿಕೊಳ್ಳದ ಯಾವುದೇ ಧರ್ಮ ರೋಗದಷ್ಟೇ ಕೆಟ್ಟದ್ದು’ ಅಂತ ಹೇಳಿದ್ದಾರೆ. ಇತ್ತ ಪ್ರಿಯಾಂಕ್‌ರ ಹೇಳಿಕೆಯನ್ನ ಖಂಡಿಸಿರುವ ರಾಜ್ಯ ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ. ಟ್ರೋಲ್ ಮಿನಿಸ್ಟರ್‌ ʻಪ್ರಾಂಕ್‌ʼ ಖರ್ಗೆ ಬಹಿರಂಗವಾಗಿ ಉದಯನಿಧಿಯವರ ಹಿಂದೂಗಳ ನರಮೇಧದ ಕರೆಗೆ ಸಪೋರ್ಟ್‌ ಮಾಡಿದ್ದಾರೆ. ಹಿಂದೂಗಳು ಹಾಗೂ ಸನಾತನ ಧರ್ಮದ ಬಗ್ಗೆ ಕಾಂಗ್ರೆಸ್‌ಗೆ ಇರೋ ನಿಲುವನ್ನ ತಿಳಿಸಲು ಜೂನಿಯರ್‌ ಖರ್ಗೆಯನ್ನ ಕಾಂಗ್ರೆಸ್‌ ನಿಯೋಜಿಸಿದೆ ಅಂತ ಬಿಜೆಪಿ ಟಾಂಗ್‌ ಕೊಟ್ಟಿದೆ.

ಇನ್ನೊಂದ್‌ ಕಡೆ ಉದಯನಿಧಿ ಅವ್ರ ಹೇಳಿಕೆಯನ್ನ ಡಿಎಂಕೆ ಕಾರ್ಯದರ್ಶಿ ಮತ್ತು ವಕ್ತಾರ ಸರವಣನ್ ಅಣ್ಣಾದೊರೈ ಸಮರ್ಥಿಸಿಕೊಂಡಿದ್ದಾರೆ. ನಮ್ಮ ನಾಯಕ ಉದಯನಿಧಿ ಅವರ ಹೇಳಿಕೆಯನ್ನು ತಿರುಚಲಾಗಿದೆ. ಉದಯನಿಧಿ ನರಮೇಧಕ್ಕೆ ಕರೆ ನೀಡಿದ್ದಾರೆ ಅಂತ ನಕಲಿ ಸುದ್ದಿ ವ್ಯಾಪಾರಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ’ ಅಂತ ಆರೋಪಿಸಿದ್ದಾರೆ. ಅಂದ್ಹಾಗೆ ಉದಯನಿಧಿ ಸನಾತನ ಧರ್ಮಕ್ಕೆ ಅವಮಾನ ಮಾಡಿದ್ದು, ನರಮೇದಕ್ಕೆ ಕರೆ ಕೊಟ್ಟಿದ್ದಾರೆ ಅಂತ ಬಿಜೆಪಿ ಆರೋಪಿಸಿತ್ತು.

ಅತ್ತ ತಮಿಳುನಾಡು ಸಿಎಂ ಎಂಕೆ ಸಾಲಿನ್‌ ತಮ್ಮ ಪಾಡ್‌ಕಾಸ್ಟ್‌ ಸರಣಿಯ ಅಂದ್ರೆ ರೇಡಿಯೋನಲ್ಲಿ ಮಾತನಾಡಿದ್ದು ಮೊದಲ ಸಂಚಿಕೆಯನ್ನ ಶುರು ಮಾಡಿದ್ದಾರೆ. ಈ ವೇಳೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭಾರತವನ್ನು ರಕ್ಷಿಸಲು ಇಂಡಿಯಾ ಮೈತ್ರಿಕೂಟ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲಲ್ಲೇಬೇಕು. ಇಲ್ಲಾ ಅಂದ್ರೆ ಇಡೀ ದೇಶ ಹರ್ಯಾಣ ಹಾಗೂ ಮಣಿಪುರವಾಗಿ ಬದಲಾಗುತ್ತದೆ ಅಂತ ಸ್ಟಾಲಿನ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply