ಸಂಸತ್​ನಲ್ಲಿ ಕೃಷಿ ಕಾನೂನು ವಾಪಸ್! ಸಂಸತ್​​ನಲ್ಲಿ ಇವತ್ತು ಏನೆಲ್ಲಾ ಆಯ್ತು ನೋಡಿ..

masthmagaa.com:

ಚಳಿಗಾಲದ ಸಂಸತ್ ಅಧಿವೇಶನ ಇವತ್ತಿಂದ ಶುರುವಾಗಿದೆ. ಕಲಾಪ ಆರಂಭವಾದ 2 ಗಂಟೆಗಳ ಒಳಗಾಗಿ ಕೃಷಿ ಸುಧಾರಣೆಗಳನ್ನು ವಾಪಸ್ ಪಡೆಯೋ ಮಸೂದೆಯನ್ನು ಪಾಸ್ ಮಾಡಲಾಗಿದೆ. ಅದ್ರಲ್ಲೂ ಮಸೂದೆ ಮಂಡಿಸಿದ ನಾಲ್ಕೇ ನಿಮಿಷಗಳಲ್ಲಿ ಯಾವುದೇ ಚರ್ಚೆಯಿಲ್ಲದೇ ಪಾಸ್ ಮಾಡಲಾಯ್ತು. ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್​​​​ 12 ಗಂಟೆ 6 ನಿಮಿಷಕ್ಕೆ ಕೃಷಿ ಮಸೂದೆ ಮಂಡಿಸಿದ್ರು. 12.10ಕ್ಕೆ ಮಸೂದೆ ಪಾಸ್ ಆಯ್ತು. ಈ ವೇಳೆ ಚರ್ಚೆಗೆ ಅವಕಾಶ ನೀಡಲಿಲ್ಲ ಅಂತ ವಿಪಕ್ಷಗಳು ಗದ್ದಲ ಎಬ್ಬಿಸಿದ್ದರಿಂದ ಕೆಲವೇ ಸೆಕೆಂಡ್​​ಗಳಲ್ಲಿ ಕಲಾಪ ಮುಂದೂಡಲಾಯ್ತು. ಇದ್ರ ಬೆನ್ನಲ್ಲೇ ರಾಜ್ಯಸಭೆಯ ಮಸೂದೆ ಮಂಡಿಸಿ, ಇದ್ರ ಮೇಲೆ ಚರ್ಚೆ ನಡೆಸೋ ಅಗತ್ಯ ಇಲ್ಲ. ಪಾಸ್ ಮಾಡ್ಬಿಡಣ ಅಂತ ನರೇಂದ್ರ ಸಿಂಗ್ ತೋಮರ್ ಹೇಳಿದ್ರು. ಇದಾದ ಬಳಿಕ ಸಣ್ಣ ಪ್ರಮಾಣದ ಚರ್ಚೆ ನಡೆದು, ಮಸೂದೆ ಪಾಸ್ ಮಾಡಲಾಯ್ತು. ಮೊದಲ ದಿನವಾದ ಇಂದು ಗಲಾಟೆ, ಗದ್ದಲದ ನಡುವೆ ಹಲವಾರು ಬಾರಿ ಕಲಾಪ ಮುಂದೂಡಲಾಯ್ತು. ಈ ಹಿಂದೆ 2020ರಲ್ಲಿ ಕೃಷಿ ಮಸೂದೆಗಳನ್ನು ಪಾಸ್ ಮಾಡಿದಾಗಲೂ ಇದೇ ರೀತಿ ಚರ್ಚೆಗೆ ಅವಕಾಶ ನೀಡಿಲ್ಲ ಅಂತ ವಿಪಕ್ಷಗಳು ಆರೋಪಿಸಿದ್ವು. ವಿಪಕ್ಷಗಳಿಗೆ ಇವತ್ತಿನ ಘಟನೆ ಕೂಡ ಹಿಂದೆ ನಡೆದಿದ್ದ ಘಟನೆಯ ರೀತಿಯೇ ಅನ್ನಿಸಿತು.

ಈ ಬಗ್ಗೆ ಪ್ರತಿಕ್ರಿಯಿಸಿರೋ ವಿಪಕ್ಷ ನಾಯಕರು ನಾವು ಕೃಷಿ ಮಸೂದೆ ವಾಪಸ್ ಸಂಬಂಧ ಚರ್ಚೆಗೆ ಬಯಸಿದ್ವಿ. ಲಖೀಂಪುರ್​​​ಖೇರಿ ಹಿಂಸಾಚಾರದ ಬಗ್ಗೆನೂ ಮಾತನಾಡಬೇಕಿತ್ತು. ಎಂಎಸ್​​ಪಿ ಮೇಲೆ ಕಾನೂನು, ಪ್ರತಿಭಟನೆ ವೇಳೆ ಮೃತಪಟ್ಟವರಿಗೆ ಪರಿಹಾರ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಲಿಲ್ಲ.. ಇದು ನಾಚಿಕೆಗೇಡಿನ ಸಂಗತಿ ಅಂತ ಕಿಡಿಕಾರಿದ್ರು.

ಅಧಿವೇಶನಕ್ಕೂ ಮುನ್ನ ಮಾತಾಡಿದ ಪ್ರಧಾನಿ ಮೋದಿ, ಸರ್ಕಾರ ಎಲ್ಲಾ ರೀತಿಯ ಪ್ರಶ್ನೆಗಳಿಗೆ ಅಧಿವೇಶನದಲ್ಲಿ ಉತ್ತರಿಸಲಿದೆ ಅಂತ ಹೇಳಿದ್ರು. ಈ ಹೇಳಿಕೆ ಉಲ್ಲೇಖಿಸಿದ ವಿಪಕ್ಷಗಳು ಮೋದಿ ಹಾಗೆ ಹೇಳಿದ್ರು. ಆದ್ರೆ ಸದನದ ಒಳಗೆ ಮಾತನಾಡೋಕೆ ಬಿಡಲೇ ಇಲ್ಲ.. ಈ ಹಿಂದೆ 6 ಕಾಯ್ದೆಗಳನ್ನು ವಾಪಸ್ ಪಡೆಯುವಾಗಲೂ ಚರ್ಚೆಗೆ ಅವಕಾಶ ನೀಡಲಾಗಿತ್ತು. ಆದ್ರೆ ಇವತ್ತೇ ನೀಡಿಲ್ಲ ಅಂತ ಆಕ್ರೋಶ ಹೊರಹಾಕಿದ್ರು.

ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ವಿಪಕ್ಷಗಳು ಕೃಷಿ ಸುಧಾರಣೆ ಕಾಯ್ದೆ ವಾಪಸ್​​ಗೆ ಬೇಡಿಕೆ ಇಟ್ಟಿದ್ರು. ಆದ್ರೆ ಅದನ್ನು ವಾಪಸ್ ಪಡೆಯೋವಾಗ ಗದ್ದಲ ಶುರುಮಾಡಿದ್ರು.. ಉದ್ದೇಶಪೂರ್ವಕವಾಗಿಯೇ ಹೀಗೆ ಮಾಡಿದ್ದಾರೆ ಅಂತ ಹೇಳಿದ್ರು.

ಅಂದಹಾಗೆ ಈ ಅಧಿವೇಶನದಲ್ಲಿ ಕೇಂದ್ರ ಸರ್ಕಾರ 30 ಶಾಸಕಾಂಗ ಮತ್ತು ಒಂದು ಹಣಕಾಸು ಮಸೂದೆಯನ್ನು ಪಾಸ್ ಮಾಡೋ ಗುರಿ ಹೊಂದಿದೆ.

ಇನ್ನು ರಾಜ್ಯಸಭೆಯಲ್ಲಿ ಅನುಚಿತವಾಗಿ ವರ್ತಿಸಿದ್ರು ಅನ್ನೋ ಆರೋಪದಲ್ಲಿ ವಿಪಕ್ಷದ 12 ರಾಜ್ಯಸಭೆ ಸಂಸದರನ್ನು ಚಳಿಗಾಲದ ಅಧಿವೇಶನದಿಂದಲೇ ಅಮಾನತು ಮಾಡಲಾಗಿದೆ. ಇದರಲ್ಲಿ ಕಾಂಗ್ರೆಸ್​​, ಶಿವಸೇನೆ, ಟಿಎಂಸಿ ಮತ್ತು ಸಿಪಿಎಂನ ಸಂಸದರು ಸೇರಿದ್ದಾರೆ. ಇವರಲ್ಲಿ ಒಬ್ಬರಾದ ಶಿವಸೇನೆ ಸಂಸದೆ ಪ್ರಿಯಾಂಕ ಚತುರ್ವೇದಿ, ಪುರುಷ ಮಾರ್ಷಲ್​​ಗಳು ಇವತ್ತು ಮಹಿಳಾ ಸಂಸದರನ್ನು ಹೇಗೆಲ್ಲಾ ನೂಕಿದ್ದಾರೆ ಅನ್ನೋದು ಸಿಸಿಟಿವಿ ದೃಶ್ಯಾವಳಿ ನೋಡಿದ್ರೆ ಗೊತ್ತಾಗುತ್ತೆ. ಅವೆಲ್ಲದ್ರ ನಡುವೆ ಅಮಾನತು ಮಾಡಲಾಗಿದೆ ಅಂತ ಕಿಡಿಕಾರಿದ್ದಾರೆ.

ಇನ್ನು ಉತ್ತರ ಪ್ರದೇಶದ ಕೌಶಂಬಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಭಾರತ್ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕೈತ್​, ಕೃಷಿ ಕಾಯ್ದೆಗಳು ವಾಪಸ್ಸಾಗಿರೋದು ಪ್ರತಿಭಟನೆ ವೇಳೆ ಮೃತಪಟ್ಟ 750 ಪ್ರತಿಭಟನಾಕಾರರಿಗೆ ಶ್ರದ್ಧಾಂಜಲಿ ಅಂತ ಹೇಳಿದ್ದಾರೆ. ನಮ್ಮ ಪ್ರತಿಭಟನೆ ಮುಂದುವರಿಯುತ್ತೆ. ಯಾಕಂದ್ರೆ ಎಂಎಸ್​​ಪಿ ಮೇಲೆ ಕಾನೂನು ಇನ್ನೂ ಕೂಡ ಬಾಕಿ ಇದೆ ಅಂತ ಹೇಳಿದ್ದಾರೆ.

ಎಂಎಸ್​​ಪಿ ಕುರಿತು ಪ್ರತಿಕ್ರಿಯಿಸಿರೋ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್​, 2014ಕ್ಕೆ ಹೋಲಿಸಿದ್ರೆ ಎಂಎಸ್​​ಪಿ ಖರೀದಿಯನ್ನು ಡಬಲ್ ಮಾಡಲಾಗಿದೆ. ಈ ಹಿಂದೆ ಭತ್ತ ಮತ್ತು ಗೋದಿ ಬೆಳೆ ಮಾತ್ರವೇ ಎಂಎಸ್​ಪಿ ಅಡಿಯಲ್ಲಿ ಬರ್ತಿತ್ತು. ಆದ್ರೆ ನಂತರ ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಬಳಿಕ ಬೇಳೆ, ಎಣ್ಣೆಕಾಳುಗಳು ಮತ್ತು ಹತ್ತಿಯನ್ನೂ ಎಂಎಸ್​ಪಿ ವ್ಯಾಪ್ತಿಗೆ ತರಲಾಗಿದೆ ಅಂದ್ರು.

-masthmagaa.com

Contact Us for Advertisement

Leave a Reply