ತಪ್ಪಿತು ಪುಲ್ವಾಮಾ ರೀತಿಯ ಮತ್ತೊಂದು ದಾಳಿ..!

masthmagaa.com:

ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಕಳೆದ ವರ್ಷ ಸಿಆರ್​ಪಿಎಫ್​ ಯೋಧರು ಪ್ರಯಾಣಿಸುತ್ತಿದ್ದ ವಾಹನಕ್ಕೆ ಸ್ಫೋಟಕ ತುಂಬಿದ ಕಾರನ್ನು ಡಿಕ್ಕಿ ಹೊಡೆಸಿದ ಘಟನೆ ಮಾಸುವ ಮುನ್ನವೇ ಅಂಥದ್ದೇ ಮತ್ತೊಂದು ಯತ್ನಕ್ಕೆ ಉಗ್ರರು ಸ್ಕೆಚ್​ ಹಾಕಿರೋದು ಬೆಳಕಿಗೆ ಬಂದಿದೆ. ಆದ್ರೆ ಪೊಲೀಸರು, ಸಿಆರ್​ಪಿಎಫ್​ ಯೋಧರು, ಭಾರತೀಯ ಸೇನೆಯ ಸಮಯಪ್ರಜ್ಞೆ ಮತ್ತು ಜಂಟಿ ಕಾರ್ಯಾಚರಣೆಯಿಂದ ಅದು ವಿಫಲವಾಗಿದೆ.

ಇಂದು ಬೆಳಗ್ಗೆ ಪುಲ್ವಾಮಾ ಜಿಲ್ಲೆಯ ಚೆಕ್​ ಪಾಯಿಂಟ್​ ಬಳಿ ಕಾರೊಂದನ್ನು ನಿಲ್ಲಿಸಲು ಭದ್ರತಾ ಪಡೆಗಳು ಸೂಚಿಸಿವೆ. ಆದ್ರೆ ಚಾಲಕ ಕಾರನ್ನು ನಿಲ್ಲಿಸದೇ ಮುಂದಕ್ಕೆ ಹೋಗಿದ್ದಾನೆ. ಈ ವೇಳೆ ಕಾರನ್ನು ಚೇಸ್ ಮಾಡಿದ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿವೆ. ಈ ವೇಳೆ ಕಾರನ್ನು ಬಿಟ್ಟು ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ. ಕಾರಿನಲ್ಲಿ  20 ಕೆಜಿಯಷ್ಟು ಸುಧಾರಿತ ಸ್ಫೋಟಕ ಸಾಧನ (ಐಇಡಿ) ಇತ್ತು ಅಂತ ಐಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ.

ಸಂಭಾವ್ಯ ದಾಳಿಯ ಬಗ್ಗೆ ನಮಗೆ ಗುಪ್ತಚರ ಮಾಹಿತಿ ಸಿಕ್ಕಿತ್ತು. ಹೀಗಾಗಿ ನಾವು ನಿನ್ನೆಯಿಂದಲೇ ಐಇಡಿ ತುಂಬಿದ ವಾಹನಕ್ಕಾಗಿ ಹುಡುಕಾಟ ನಡೆಸುತ್ತಿದ್ದೆವು ಅಂತ ಅವರು ಹೇಳಿದ್ದಾರೆ. ಸದ್ಯ ಕಾರು ಸಮೇತ ಐಇಡಿಯನ್ನು ಪೊಲೀಸರು ಸ್ಫೋಟಿಸಿ ನಾಶ ಮಾಡಿದ್ದಾರೆ. ಇದರಿಂದ ಸುತ್ತಮುತ್ತಲಿನ ಹಲವು ಮನೆಗಳಿಗೆ ಹಾನಿಯಾಗಿದೆ. ಕಳೆದ ವರ್ಷ ಫೆಬ್ರವರಿ 14ರಂದು ಪುಲ್ವಾಮಾದಲ್ಲೇ ನಡೆದ ಉಗ್ರರ ದಾಳಿಯಲ್ಲಿ 40 ಯೋಧರು ಹುತ್ಮಾತ್ಮರಾಗಿದ್ದರು.

https://twitter.com/ANI/status/1265869848132718593

ಜಮ್ಮು-ಕಾಶ್ಮೀರದಲ್ಲಿ ಕಳೆದ ಎರಡು ತಿಂಗಳಿನಿಂದ ಉಗ್ರರ ಕಾಟ ಜಾಸ್ತಿಯಾಗಿದೆ. ಈ ಅವಧಿಯಲ್ಲಿ ಒಟ್ಟು 38 ಉಗ್ರರನ್ನು ಹೊಡೆದುರುಳಿಸಲಾಗಿದೆ. ಇದ್ರಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಮತ್ತು ಮೋಸ್ಟ್ ವಾಂಟೆಡ್ ಉಗ್ರ ರಿಯಾಜ್ ನೈಕೂ ಕೂಡ ಒಬ್ಬ. ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಯ 30 ಮಂದಿ ಯೋಧರು ಕೂಡ ಹುತಾತ್ಮರಾಗಿದ್ದಾರೆ ಕಳೆದ ಎರಡು ತಿಂಗಳಲ್ಲಿ.

-masthmagaa.com

Contact Us for Advertisement

Leave a Reply