ಅಮರ್ ಜವಾನ್ ಜ್ಯೋತಿ ವಾರ್ ಮೆಮೋರಿಯಲ್ ಜ್ಯೋತಿಯಲ್ಲಿ ಲೀನ!

masthmagaa.com:

50 ವರ್ಷದಿಂದ ಉರಿಯುತ್ತಿದ್ದ ಅಮರ್‌ ಜವಾನ್‌ ಜ್ಯೋತಿಯನ್ನ ನ್ಯಾಶನಲ್ ವಾರ್‌ ಮೆಮೋರಿಯಲ್‌ ಜ್ಯೋತಿಯೊಂದಿಗೆ ವಿಲೀನಗೊಳಿಸಲಾಗಿದೆ. ಇಂಡಿಯಾ ಗೇಟ್‌ನಿಂದ ರಾಜಧಾನಿಯ ಹೃದಯ ಭಾಗ ದಲ್ಲಿರುವ, ಅಮರ್‌ ಜವಾನ್‌ ಜ್ಯೋತಿಯಿಂದ 400 ಮೀಟರ್‌ ದೂರದಲ್ಲಿರುವ ನ್ಯಾಶನಲ್‌ ವಾರ್‌ ಮೆಮೊರಿಯಲ್‌ ವರೆಗೆ ಸೈನಿಕರು ಜ್ಯೋತಿಯನ್ನ ಹೊತ್ತು ಮೆರವಣಿಗೆ ಮೂಲಕ ಬಂದ್ರು.

ಈ ಎರಡು ಜ್ಯೋತಿ ಪ್ರತ್ಯೇಕ ನಿರ್ವಹಣೆ ಕಷ್ಟ ಅಂತ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದ್ರೆ ಕೆಲವರು ಇದಕ್ಕೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ಇದು ಇತಿಹಾಸವನ್ನ ಅಳಿಸುವ ಪ್ರಯತ್ನ ಅಂತ ಹೇಳಿದ್ದಾರೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ಕೆಲವರಿಗೆ ದೇಶಭಕ್ತಿ ಮತ್ತು ತ್ಯಾಗವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ’ ಅಂತ ಹೇಳಿದ್ದಾರೆ. ಆದ್ರೆ ಇದಕ್ಕೆ ಉತ್ತರ ಕೊಟ್ಟಿರುವ ಕೇಂದ್ರ ಸರ್ಕಾರ, ‘ನಾವು ಜ್ಯೋತಿಯನ್ನ ನಂದಿಸ್ತಾ ಇಲ್ಲ. ಬದಲಿಗೆ ಅದನ್ನ ನ್ಯಾಶನಲ್ ವಾರ್‌ ಮೆಮೋರಿಯಲ್‌ ಜ್ಯೋತಿಯೊಂದಿಗೆ ವಿಲೀನಗೊಳಿಸ್ತಾ ಇದ್ದೀವಿ’ ಅಂತ ಹೇಳಿದೆ.

ಈಗ ಅಮರ್‌ ಜವಾನ್‌ ಜ್ಯೋತಿಯ ಬಗ್ಗೆ ಒಂದಷ್ಟು ಮಾಹಿತಿಯನ್ನ ತಿಳಿದುಕೊಳ್ಳೋಣ.
ಮೊದಲ ಮಹಾಯುದ್ಧದಲ್ಲಿ ಪ್ರಾಣ ಕಳೆದುಕೊಂಡ ಬ್ರಿಟಿಷ್ ಭಾರತೀಯ ಸೇನೆಯ ಸೈನಿಕರ ನೆನಪಿಗಾಗಿ, ಬ್ರಿಟಿಷರು ಇಂಡಿಯಾ ಗೇಟ್ ಅನ್ನು ನಿರ್ಮಿಸಿದರು. ನಂತರ ಇದೇ ಜಾಗದಲ್ಲಿ 1971 ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಜಯಗಳಿಸಿದ ನಂತರ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಸೈನಿಕರ ನೆನಪಿಗೆ ಅಮರ್ ಜವಾನ್ ಜ್ಯೋತಿ ನಿರ್ಮಿಸಲಾಯ್ತು.ಪ್ರತೀ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನದಂದು ದೇಶದ ಪ್ರಧಾನ ಮಂತ್ರಿ ಈ ಅಮರ್ ಜವಾನ್ ಜ್ಯೋತಿಗೆ ಗೌರವ ಸಲ್ಲಿಸುವ ಸಂಪ್ರದಾಯ ಇತ್ತು. ಆದ್ರೆ 2020ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮರ್‌ ಜವಾನ್‌ ಜ್ಯೋತಿ ಬದಲಾಗಿ ನ್ಯಾಶನಲ್‌ ವಾರ್‌ ಮೆಮೋರಿಯಲ್‌ ಜ್ಯೋತಿಗೆ ಗೌರವವನ್ನು ಸಲ್ಲಿಸಿದ್ರು.

ಹಾಗಾದ್ರೆ ನ್ಯಾಶನಲ್‌ ವಾರ್‌ ಮೆಮೋರಿಯಲ್‌ ಜ್ಯೋತಿ ಯಾವುದು?
ಇದು ಭಾರತದ ಪರವಾಗಿ ಇದುವರೆಗೆ ಎಲ್ಲ ಕದನಗಳಲ್ಲಿ ಹೋರಾಡಿ ವೀರಮರಣ ಅಪ್ಪಿದ ಯೋಧರ ಸ್ಮರಣಾರ್ಥ ಇರೋ ಸ್ಮಾರಕ. ಡೆಲ್ಲಿಯ ರಾಜಪಥದಲ್ಲಿದೆ. ಇದನ್ನ 2019 ಫೆಬ್ರವರಿಯಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದರು. ಈಗ ಈ ನ್ಯಾಶನಲ್ ವಾರ್ ಮೆಮೋರಿಯಲ್ ನಲ್ಲೇ ಅಮರ್ ಜವಾನ್ ಜ್ಯೋತಿಯನ್ನೂ ಸೇರಿಸಲಾಗಿದೆ.

-masthmagaa.com

Contact Us for Advertisement

Leave a Reply