masthmagaa.com:

ಕೊರೋನಾ ವೈರಸ್​ಗೆ ರಷ್ಯಾದ ‘ಸ್ಪುತ್ನಿಕ್-V’ ಲಸಿಕೆ ಲಭ್ಯವಿದ್ದರೂ ಜಗತ್ತಿನ ಇತರ ರಾಷ್ಟ್ರಗಳು ರಷ್ಯಾ ಲಸಿಕೆಯನ್ನು ಅನುಮಾನದ ಕಣ್ಣುಗಳಿಂದಾನೇ ನೋಡ್ತಿವೆ. ಆ ಲಸಿಕೆ ಮಾನವ ಪ್ರಯೋಗ ಸರಿಯಾಗಿ ನಡೆಸಿಲ್ಲ, ಅರ್ಜೆಂಟ್​ನಲ್ಲೇ ಲಸಿಕೆಗೆ ಅನುಮೋದನೆ ಕೊಟ್ಟಿದ್ದಾರೆ ಅಂತ ರಷ್ಯಾ ಲಸಿಕೆಯನ್ನು ಬಹುತೇಕ ದೇಶಗಳು ಸೀರಿಯಸ್​ ಆಗಿ ತೆಗೆದುಕೊಂಡಿಲ್ಲ. ಎಲ್ಲರ ದೃಷ್ಟಿ ನೆಟ್ಟಿರೋದು ಆಕ್ಸ್​ಫರ್ಡ್​ ಯುನಿವರ್ಸಿಟಿ ಮತ್ತು ಅಸ್ಟ್ರಾಝೆನೆಕಾ ಅಭಿವೃದ್ಧಿಪಡಿಸುತ್ತಿರುವ ಲಸಿಕೆ ಮೇಲೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಈ ಲಸಿಕೆ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಸದ್ಯ ಭಾರತ ಸೇರಿದಂತೆ ಜಗತ್ತಿನ ವಿವಿಧ ದೇಶಗಳಲ್ಲಿ ಈ ಲಸಿಕೆಯ 2 ಮತ್ತು 3ನೇ ಹಂತದ ಮಾನವ ಪ್ರಯೋಗ ನಡೆಯುತ್ತಿದೆ. ಆದ್ರೆ ಆಕ್ಸ್​ಫರ್ಡ್​ ಲಸಿಕೆಗೆ ಸಂಬಂಧಪಟ್ಟಂತೆ ಬ್ರೆಜಿಲ್​ನಿಂದ ಕೆಟ್ಟ ಸುದ್ದಿಯೊಂದು ಬರ್ತಿದೆ. ಅದೇನಂದ್ರೆ ಆಕ್ಸ್​ಫರ್ಡ್​-ಅಸ್ಟ್ರಾಝೆನೆಕಾ ಲಸಿಕೆಯ ಮಾನವ ಪ್ರಯೋಗದಲ್ಲಿ ಭಾಗಿಯಾಗಿದ್ದ ಸ್ವಯಂಸೇವಕ ಮೃತಪಟ್ಟಿದ್ದಾನೆ. ಕೊರೋನಾ ಲಸಿಕೆ ಪ್ರಯೋಗದ ವೇಳೆ ಸ್ವಯಂಸೇವಕನೊಬ್ಬ ಮೃತಪಟ್ಟಿರೋದು ಇದೇ ಮೊದಲು. ಸ್ವಯಂಸೇವಕ ಮೃತಪಟ್ಟ ಬಗ್ಗೆ ಬ್ರೆಜಿಲ್ ಸರ್ಕಾರವೇ ಅಧಿಕೃತವಾಗಿ ಹೇಳಿದೆ. ಆದ್ರೆ ಆತನಿಗೆ ಲಸಿಕೆ ನೀಡಲಾಗಿತ್ತೋ ಅಥವಾ ಇಲ್ಲವೋ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಸ್ವಯಂಸೇವಕರ ವೈದ್ಯಕೀಯ ಗೌಪ್ಯತೆಯನ್ನು ಕಾಪಾಡುವ ಉದ್ದೇಶದಿಂದ ಮಾಹಿತಿ ನೀಡಲು ಸಾಧ್ಯವಿಲ್ಲ ಅಂತ ಸರ್ಕಾರ ಹೇಳಿದೆ. ಮೃತಪಟ್ಟ ​ಸ್ವಯಂಸೇವಕನಿಗೆ 28 ವರ್ಷ ವಯಸ್ಸಾಗಿತ್ತು ಅಂತ ಬ್ರೆಜಿಲ್ ಮಾಧ್ಯಮಗಳು ವರದಿ ಮಾಡಿವೆ.

‘ಆಕ್ಸ್​ಫರ್ಡ್​ ಲಸಿಕೆಯ ಮಾನವ ಪ್ರಯೋಗದ ಸುರಕ್ಷತೆ ಬಗ್ಗೆ ಯಾವುದೇ ಗೊಂದಲಗಳಿಲ್ಲ. ಲಸಿಕೆಯ ಮಾನವ ಪ್ರಯೋಗ ಮುಂದುವರಿಸಲಾಗುತ್ತದೆ. ಬ್ರೆಜಿಲ್​ನಲ್ಲಿ ನಡೆದ ಘಟನೆ ಬಗ್ಗೆ ಅಧ್ಯಯನ ನಡೆಸಲಾಗುತ್ತೆ’ ಅಂತ ಆಕ್ಸ್​ಫರ್ಡ್ ಯುನಿವರ್ಸಿಟಿ ಹೇಳಿದೆ. ಇತ್ತೀಚೆಗಷ್ಟೇ ಅಮೆರಿಕದಲ್ಲಿ ಇದೇ ಲಸಿಕೆ ಪ್ರಯೋಗಕ್ಕೆ ಒಳಗಾದ ಸ್ವಯಂಸೇವಕರಲ್ಲಿ ವಿವರಿಸಲಾಗದ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಅದರ ಪ್ರಯೋಗವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಬಳಿಕ ಮತ್ತೆ ಆರಂಭ ಮಾಡಲಾಗಿತ್ತು. ಆದ್ರೀಗ ಇದೇ ಲಸಿಕೆಯ ಸ್ವಯಂಸೇವಕ ಮೃತಪಟ್ಟಿರೋದ್ರಿಂದ ಆಕ್ಸ್​ಫರ್ಡ್ ಲಸಿಕೆ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ.

ಮೃತಪಟ್ಟ ವ್ಯಕ್ತಿಗೆ ಲಸಿಕೆಯನ್ನು ನೀಡಿರಲಿಲ್ಲ, ಆತನಿಗೆ ‘ಪ್ಲಸಿಬೊ’ ಅಂದ್ರೆ ಡುಪ್ಲಿಕೇಟ್​ ಲಸಿಕೆ ನೀಡಲಾಗಿತ್ತು ಅಂತ ಮೂಲಗಳು ತಿಳಿಸಿವೆ. ಸಾಮಾನ್ಯವಾಗಿ ಸ್ವಯಂಸೇವಕರಲ್ಲಿ ಅರ್ಧದಷ್ಟು ಜನರಿಗೆ ಒರಿಜಿನಲ್‌ ಲಸಿಕೆಯನ್ನ ನೀಡಲಾಗುತ್ತದೆ. ಇನ್ನುಳಿದವರಿಗೆ ಪ್ಲಸಿಬೊ ನೀಡುತ್ತಾರೆ. ಈ ವಿಚಾರ ಸ್ವತಃ ಸ್ವಯಂ ಸೇವಕರಿಗೂ ಗೊತ್ತಿರೋದಿಲ್ಲ. ಆದ್ರೆ ಲಸಿಕೆಯ ಪ್ರಯೋಗ ನಡೆಸುವ ಕಂಪನಿ ಅಥವಾ ಸಂಸ್ಥೆ ಬಳಿ ಎಲ್ಲಾ ಮಾಹಿತಿ ಇರುತ್ತೆ. ಯಾರಿಗೆ ಲಸಿಕೆ ಕೊಡಲಾಗಿದೆ, ಯಾರಿಗೆ ಪ್ಲಸಿಬೊ ಕೊಡಲಾಗಿದೆ ಅನ್ನೋದು ಕಂಪನಿಗೆ ಗೊತ್ತಿರುತ್ತೆ. ಸ್ವಯಂಸೇವಕರಲ್ಲಿ ಎರಡೂ ಲಸಿಕೆಗಳು ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದನ್ನ ತಿಳಿಯಲು ಈ ರೀತಿ ಮಾಡಲಾಗುತ್ತದೆ.

ಭಾರತದಲ್ಲಿ 2021ರ ಆರಂಭದಲ್ಲಿ ಕೊರೋನಾಗೆ ಲಸಿಕೆ ಸಿಗುವ ಸಾಧ್ಯತೆ ಇದೆ ಅಂತ ಕೇಂದ್ರ ಸರ್ಕಾರ ಹೇಳ್ತಿದೆ. ಎಲ್ಲರೂ ಲಸಿಕೆಗಾಗಿ ಕಾಯ್ತಿರೋ ಇಂತಹ ಸಂದರ್ಭದಲ್ಲೇ ಸ್ವಯಂಸೇವಕನೊಬ್ಬ ಬಲಿಯಾಗಿರೋದು ಸಹಜವಾಗಿಯೇ ಜನರ ಆತಂಕವನ್ನು ಹೆಚ್ಚಿಸಿದೆ. ಆದ್ರೆ ಲಸಿಕೆ ಪ್ರಯೋಗ ಮಾಡಿದ ನಂತರ ಆತ ಮೃತಪಟ್ಟನಾ ಅಥವಾ ಲಸಿಕೆ ಕೊಡೋಕೂ ಮೊದಲೇ ಆತ ಮೃತಪಟ್ಟನಾ ಅನ್ನೋ ಬಗ್ಗೆ ಸ್ಪಷ್ಟನೆ ಸಿಗಬೇಕಿದೆ ಅನ್ನೋದನ್ನ ಮರೆಯಬಾರದು.

-masthmagaa.com

Contact Us for Advertisement

Leave a Reply