ಆಫ್ಘನಿಸ್ತಾನದಲ್ಲಿ ಕಾರ್ ಬಾಂಬ್ ಸ್ಫೋಟ: ಕನಿಷ್ಠ 21 ಸಾವು, ಅಮೆರಿಕಕ್ಕೆ ಶಾಕ್!

masthmagaa.com:

ಆಫ್ಘನಿಸ್ತಾನದ ಲೋಗರ್ ಪ್ರಾಂತ್ಯದ ರಾಜಧಾನಿ ಪುಲ್​-ಇ-ಆಲಂನಲ್ಲಿ ಕಾರ್​ ಬಾಂಬ್ ಸ್ಫೋಟವಾಗಿ ಕನಿಷ್ಠ 21 ಜನ ಮೃತಪಟ್ಟಿದ್ದು, ಸುಮಾರು 100 ಜನ ಗಾಯಗೊಂಡಿದ್ದಾರೆ. ಒಂದ್ಕಡೆ ಆಫ್ಘನಿಸ್ತಾನದಿಂದ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ತಮ್ಮ ಸೇನೆಯನ್ನ ಸಂಪೂರ್ಣವಾಗಿ ವಾಪಸ್​ ಕರೆಸಿಕೊಳ್ಳಲು ಸಿದ್ಧತೆ ನಡೆಸುತ್ತಿರುವಾಗಲೇ ಈ ಘಟನೆ ನಡೆದಿದೆ. ಸ್ಫೋಟದ ಹಿಂದ ತಾಲಿಬಾನಿಗಳ ಕೈವಾಡ ಇದೆ ಅಂತ ಆಫ್ಘನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಹೇಳಿದ್ದಾರೆ. ಸದ್ಯದ ಬಿಕ್ಕಟ್ಟನ್ನ ಶಾಂತಿಯುತವಾಗಿ ಪರಿಹರಿಸಿಕೊಳ್ಳಲು ತಾಲಿಬಾನಿಗಳಿಗೆ ಇಷ್ಟವಿಲ್ಲ ಅನ್ನೋದಕ್ಕೆ ಇದೇ ಸಾಕ್ಷಿ. ಹೀಗೆ ಮಾಡುವ ಮೂಲಕ ಅವರು ಪರಿಸ್ಥಿತಿಯನ್ನ ಮತ್ತಷ್ಟು ಬಿಗಡಾಯಿಸುತ್ತಿದ್ದಾರೆ. ಟೈಮನ್ನ ವೇಸ್ಟ್ ಮಾಡ್ತಿದ್ದಾರೆ ಅಂತ ಅಶ್ರಫ್ ಘನಿ ಕಿಡಿಕಾರಿದ್ದಾರೆ. ಆದ್ರೆ ತಾಲಿಬಾನ್​ ಕಡೆಯಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇನ್ನು ಆಫ್ಘನಿಸ್ತಾನದ ಬಗ್ರಾಮ್​ ಏರ್​ಬೇಸ್​ ಬಳಿ ಮತ್ತೊಂದು ಸ್ಫೋಟ ಸಂಭವಿಸಿದ್ದು ಇಬ್ಬರು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. 25ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಅಂದ್ಹಾಗೆ ಆಫ್ಘನಿಸ್ತಾನದಲ್ಲಿ ಇನ್ನುಳಿದಿರೋದು ಸುಮಾರು 2,500 ಅಮೆರಿಕ ಯೋಧರು ಮಾತ್ರ. ಅವರೆಲ್ಲರನ್ನ ಸೆಪ್ಟೆಂಬರ್​ 11ರೊಳಗೆ ವಾಪಸ್ ಕರೆಸಿಕೊಳ್ಳೋದಾಗಿ ಜೋ ಬೈಡೆನ್ ಇತ್ತೀಚೆಗೆ ಘೋಷಿಸಿದ್ರು. ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿದ್ದಾಗ 2020ರ ಫೆಬ್ರವರಿಯಲ್ಲಿ ತಾಲಿಬಾನ್ ಮತ್ತು ಟ್ರಂಪ್ ಸರ್ಕಾರ ನಡುವೆ ಒಪ್ಪಂದ ಏರ್ಪಟ್ಟಿತ್ತು. ಇದರ ಪ್ರಕಾರ ಸೇನೆಯನ್ನ ವಾಪಸ್ ಕರೆಸಿಕೊಳ್ಳಲು ಮೇ 1ರ ಡೆಡ್​ಲೈನ್ ಫಿಕ್ಸ್ ಮಾಡಿತ್ತು ಅಮೆರಿಕ. ಅಂದ್ರೆ ಇವತ್ತಿಗೆ ಸರಿಯಾಗಿ ಆಫ್ಘನಿಸ್ತಾನದಲ್ಲಿ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ಯಾವುದೇ ಯೋಧರು ಇರಬಾರದಿತ್ತು. ಆದ್ರೆ ಅದು ಸಾಧ್ಯವಾಗಿಲ್ಲ. ಬೈಡೆನ್ ಬಂದ ನಂತರ ಸೆಪ್ಟೆಂಬರ್ 11ರ ಡೆಡ್​ಲೈನ್ ಇಟ್ಟುಕೊಂಡ್ರು. ಹೀಗಾಗಿ ಈ ಹಿಂದಿನ ಒಪ್ಪಂದ ಮುರಿದ ಅಮೆರಿಕ ಮೇಲೆ ತಾಲಿಬಾನ್ ಸಿಟ್ಟಾಗಿದೆ. ಜೊತೆಗೆ ಅಮೆರಿಕ ತನ್ನ ಸೇನೆಯನ್ನ ಆಫ್ಘನಿಸ್ತಾನದಿಂದ ವಾಪಸ್ ಕರೆಸಿಕೊಳ್ಳೋವಾಗ ತಾಲಿಬಾನಿಗಳು ದಾಳಿ ನಡೆಸೋ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಅಮೆರಿಕದ ರಕ್ಷಣಾ ಇಲಾಖೆ – ಪೆಂಟಗಾನ್, ಮಿಡಲ್ ಈಸ್ಟ್​ನಲ್ಲಿ ಒಂದು ವಿಮಾನವಾಹಕ ಯುದ್ಧನೌಕೆಯನ್ನ ಇರಿಸೋಕೆ ನಿರ್ಧರಿಸಿದೆ. ಜೊತೆಗೆ ಆರ್ಮಿ ರೇಂಜರ್ಸ್ ಮತ್ತು ಕನಿಷ್ಠ 4 ಬಿ-52 ಬಾಂಬರ್​ಗಳನ್ನ ಆಫ್ಘನಿಸ್ತಾನಕ್ಕೆ ಕಳಿಸಿಕೊಡಲು ನಿರ್ಧರಿಸಿದೆ.

-masthmagaa.com

Contact Us for Advertisement

Leave a Reply