ಅಫ್ಘಾನಿಸ್ತಾನ ಬಿಟ್ಟು ಹೋಗಲು ಜನರ ಹರ ಸಾಹಸ!

masthmagaa.com:

ಅಫ್ಘನಿಸ್ತಾನ ರಾಜಧಾನಿ ಕಾಬೂಲ್​ ಏರ್​​ಪೋರ್ಟ್​ನಲ್ಲಿ ಕೋಲಾಹಲ ಮತ್ತು ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ. ಜನ ಹೆದರಿಕೊಂಡು ಏರ್​ಪೋರ್ಟ್​​ನ ಕಾಂಪೌಂಡ್​ ಹತ್ತಿ ದೇಶದಿಂದ ಹೊರಹೋಗೋಕೇ ಒಂದೇ ಒಂದು ಮಾರ್ಗವಾದ ಕಾ ಏರ್​ಪೋರ್ಟ್​ಗೆ ನುಗ್ದಿದ್ದಾರೆ. ಏರ್​ಪೋರ್ಟ್​ ಸಂತೆಗಿಂತ ಕಡೆಯಾಗಿದೆ. ಅಮೆರಿಕದ ವಿಮಾನವೊಂದರ ಜೊತೆಗೆ ಜನ ಓಡಿ ಹೋಗ್ತಿರೋ ವಿಡಿಯೋಗಳು ವೈರಲ್ ಆಗಿದೆ. ಒಂದು ವಿಮಾನದ ಚಕ್ರ ಮತ್ತು ರೆಕ್ಕೆಗಳ ಮೇಲೆಲ್ಲಾ ಕೂತು ದೇಶದಿಂದ ಹೊರಹೋಗಲು ಪ್ರಯತ್ನಿಸಿ ರನ್​ವೇ ಮೇಲೆ ಉದುರಿ ಹಲವರು ಪ್ರಾಣ ಕಳ್ಕೊಂಡಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಅಮೆರಿಕ ಯೋಧರು ಫೈರಿಂಗ್ ಮಾಡಿದ್ದಾರೆ.

– ಕಾಬೂಲ್​ನಲ್ಲಿರೋ ಅಫ್ಘನಿಸ್ತಾನ ಅಧ್ಯಕ್ಷರ ಭವನವನ್ನ ತಮ್ಮ ಕಂಟ್ರೋಲ್​ಗೆ ತೆಗೆದುಕೊಂಡ ತಾಲಿಬಾನಿಗಳು, ಅದರೊಳಗೆ ಆರಾಮಾಗಿ ಸಿಕ್ಕಿದ್ದನ್ನೆಲ್ಲಾ ತಿನ್ನುತ್ತಿರೋ ವಿಡಿಯೋ ವೈರಲ್ ಆಗಿದೆ.

–  ಸರ್ಕಾರಿ ಉದ್ಯೋಗಿಗಳು ಕಚೇರಿ ಕೆಲಸಕ್ಕೆ ವಾಪಸ್ ಬರುವಂತೆ ತಾಲಿಬಾನಿಗಳು ಸೂಚನೆ ಕೊಟ್ಟಿದ್ದಾರೆ.

– ಉಜ್ಬೇಕಿಸ್ತಾನ ಗಡಿ ಪ್ರವೇಶಿಸಲು ಯತ್ನಿಸಿದ ಅಫ್ಘನಿಸ್ತಾನದ ಸೇನಾ ಜೆಟ್​​ವೊಂದನ್ನ ಉಜ್ಬೇಕಿಸ್ತಾನ ಹೊಡೆದುರುಳಿಸಿದೆ. ಅದಕ್ಕೂ ಮೊದಲು ವಿಮಾನದ ಪೈಲಟ್​ ಇಜೆಕ್ಟ್ ಆಗಿ ಬದುಕುಳಿದಿದ್ದಾನೆ ಅಂತ ಉಜ್ಬೆಕಿಸ್ತಾನ ರಕ್ಷಣಾ ಇಲಾಖೆ ಹೇಳಿದೆ.

– ಇನ್ನು 2001ರಿಂದ 2014ರವರೆಗೆ ಅಫ್ಘನಿಸ್ತಾನ ಅಧ್ಯಕ್ಷರಾಗಿದ್ದ ಹಮೀದ್ ಕರ್ಝಾಯಿ ತಾಲಿಬಾನಿ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ ಅಂತ ವರದಿಯಾಗಿದೆ. ತಾಲಿಬಾನಿಗಳಿಗೆ ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ಮಾಡುವ ಮೂವರು ಸದಸ್ಯರ ಸಮಿತಿಯಲ್ಲಿ ಈ ಕರ್ಝಾಯಿ ಕೂಡ ಇದ್ದಾರೆ.

– ಅಫ್ಘನಿಸ್ತಾನದಲ್ಲಿ ತಾಲಿಬಾನಿಗಳ ಯಶಸ್ಸಿಗೆ ಪ್ಯಾಲೇಸ್ಟೀನ್​ನ ಮುಸ್ಲಿಂ ಮೂಲಭೂತವಾದ ಸಂಘಟನೆಯಾದ ಹಮಾಸ್​ ಅಭಿನಂದನೆ ತಿಳಿಸಿದೆ. ಜೊತೆಗೆ ಇದು ಅಮೆರಿಕದ ಕಾನೂನುಬಾಹಿರ ಅಧಿಪತ್ಯದ ಸೋಲು. ಧೈರ್ಯ ಮತ್ತು ಸಾಹಸದ ಗೆಲುವು ಅಂತ ಹೇಳಿದೆ.

– ಅಫ್ಘನ್ ಅಧ್ಯಕ್ಷ ಅಶ್ರಫ್​ ಘನಿ ಕಾಬೂಲ್​​ನಿಂದ ಬೇರೆ ದೇಶಕ್ಕೆ ಹೋಗುವಾಗ ನಾಲ್ಕು ಕಾರು ಮತ್ತು ಒಂದು ಹೆಲಿಕಾಪ್ಟರ್​ಗಳಲ್ಲಿ ದುಡ್ಡಿನ ರಾಶಿಯನ್ನ ತುಂಬಿಕೊಂಡು ಹೋಗಿದ್ರು ಅಂತ ವರದಿಯಾಗಿದೆ. ಎಷ್ಟರಮಟ್ಟಿಗೆ ಅಂದ್ರೆ ಹೆಲಿಕಾಪ್ಟರ್​ನಲ್ಲಿ ಒಂದಷ್ಟು ದುಡ್ಡನ್ನ ತೆಗೆದುಕೊಂಡು ಹೋಗೋಕೆ ಆಗಲಿಲ್ಲ ಅಂತ ಅದನ್ನೇ ಅಲ್ಲೇ ಬಿಟ್ಟು ಹೋಗಿದ್ದಾರಂತೆ.

– ಅಫ್ಘನಿಸ್ತಾನದ ಪ್ರಮುಖ ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಯಾದ ಟೋಲೋ ನ್ಯೂಸ್​ ಕಾಂಪೌಂಡ್​ ಒಳಗೆ ಬಂದಿದ್ದ ತಾಲಿಬಾನಿಗಳು ಕಂಪನಿಯ ಭದ್ರತಾ ಸಿಬ್ಬಂದಿ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನ ಪರಿಶೀಲಿಸಿದ್ದಾರೆ. ಜೊತೆಗೆ ಸರ್ಕಾರ ಕೊಟ್ಟಿದ್ದ ಶಸ್ತ್ರಾಸ್ತ್ರಗಳನ್ನ ವಶಪಡಿಸಿಕೊಂಡಿದ್ದಾರೆ. ಜೊತೆಗೆ ಟೋಲೋ ನ್ಯೂಸ್​ ಕಾಂಪೌಂಡ್​ ಅನ್ನ ಸೇಫಾಗಿ ಇಡ್ತೀವಿ ಅಂತಾನೂ ತಾಲಿಬಾನಿಗಳು ಭರವಸೆ ಕೊಟ್ಟಿದ್ದಾರೆ.

– ಇನ್ನು ಚೀನಾದ ವಿದೇಶಾಂಗ ಸಚಿವ ವಾಂಗ್​ ಇ ಮತ್ತು ತಾಲಿಬಾನ್​ ನಿಯೋಗದ ಜೊತೆ ಜುಲೈ 28ನೇ ತಾರೀಖು ಮಾತುಕತೆ ನಡೆದಿತ್ತು ಅಂತ ಗೊತ್ತಾಗಿದೆ. ಈ ಸಭೆಯಲ್ಲಿ ತಾಲಿಬಾನ್​ ಸಂಘಟನೆಯ ಸಹ ಸಂಸ್ಥಾಪಕ ಮತ್ತು ಉಪ ನಾಯಕ ಮುಲ್ಲಾ ಅಬ್ದುಲ್​ ಘನಿ ಬರಾದರ್ ಕೂಡ ಭಾಗಿಯಾಗಿದ್ದ.

– ಅಫ್ಘನಿಸ್ತಾನದ ಈ ಸ್ಥಿತಿಗೆ ಅಮೆರಿಕ ಅಧ್ಯಕ್ಷ ಬೈಡೆನ್ನೇ ಕಾರಣ, ಬೈಡೆನ್​ ದ್ರೋಹ ಎಸಗಿದ್ದಾರೆ ಅಂತ ಅಫ್ಗನ್​ ಪ್ರಜೆಗಳು ಅಮೆರಿಕದ ವೈಟ್​ ಹೌಸ್ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಅಫ್ಘನಿಸ್ತಾನದ ಮಾಜಿ ಪತ್ರಕರ್ತರೊಬ್ರು ಮಾತನಾಡಿ, ತಾಲಿಬಾನಿಗಳು ಪಾಕಿಸ್ತಾನ ಜೊತೆ ಸೇರ್ಕೊಂಡ್​ ಮಧ್ಯ ಏಷ್ಯಾದ ಎಲ್ಲಾಕಡೆ ನಿಯಂತ್ರಣ ಸಾಧಿಸ್ತಾರೆ ಎಂದಿದ್ದಾರೆ.

– ಈ ಮಧ್ಯೆ ಅಮೆರಿಕದ ಡಿಪಾರ್ಟ್​ಮೆಂಟ್​ ಆಫ್​ ಸ್ಟೇಟ್​ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, ಅಫ್ಘನಿಸ್ತಾನದಲ್ಲಿರೋ ವಿದೇಶಿ ಪ್ರಜೆಗಳು ಮತ್ತು ಅಲ್ಲಿಂದ ಹೊರಬರೋಕೆ ಇಷ್ಟವಿರೋ ಅಫ್ಘನ್​ ಪ್ರಜೆಗಳಿಗೆ ಹೊರಬರಲು ಅವಕಾಶ ಕೊಡಬೇಕು.ಅವರನ್ನ ಸೇಫಾಗಿ ಕರೆತರಲು ಅಮೆರಿಕ ಇತರೆ ದೇಶಗಳ ಜೊತೆಗೆ ಪ್ರಯತ್ನ ನಡೆಸುತ್ತಿದೆ. ರಸ್ತೆ, ವಿಮಾನ ನಿಲ್ದಾಣ ಮತ್ತು ಗಡಿಗಳು ಓಪನ್​ ಇರಬೇಕು. ಅಫ್ಘನಿಸ್ತಾನದಲ್ಲಿ ಸದ್ಯ ಜನರ ಜೀವ ಮತ್ತು ಆಸ್ತಿಪಾಸ್ತಿಗಳ ರಕ್ಷಣೆಗೆ ತಾಲಿಬಾನಿಗಳೇ ಜವಾಬ್ದಾರರು ಅಂತ ಹೇಳಿದೆ.

– ಇನ್ನು ಕಾಬೂಲ್​​ ಏರ್​ಪೋರ್ಟ್​ನಲ್ಲಿ ಗಂಭೀರ ಪರಿಸ್ಥಿತಿ ಹಿನ್ನೆಲೆ ಅಲ್ಲಿನ ಏರ್​ಸ್ಪೇಸ್​ ಅನ್ನ ಬಂದ್ ಮಾಡಲಾಗಿದೆ. ಹೀಗಾಗಿ ಅಲ್ಲಿಗೆ ಹೋಗಬೇಕಿದ್ದ ಭಾರತದ ಏರ್ ಇಂಡಿಯಾ ಪ್ರಯಾಣಿಕ ವಿಮಾನ ಹಾರಾಟ ನಡೆಸಿಲ್ಲ. ಇನ್ನು ಶಿಕಾಗೊ-ಡೆಲ್ಲಿ ವಿಮಾನ ಸೇರಿದಂತೆ ಹಲವು ವಿಮಾನಗಳು ಅಫ್ಘನ್​ ಏರ್​ಸ್ಪೇಸ್ ಮೇಲೆ ಹಾರಿ ಬರಬೇಕಿತ್ತು ಅವುಗಳನ್ನ ಯುಎಇ ಸೇರಿದಂತೆ ಇತರ ಗಲ್ಫ್​​ ಏರ್​ಸ್ಪೇಸ್​​ಗೆ ಡೈವರ್ಟ್ ಮಾಡಲಾಗಿದೆ.

– ಅಫ್ಘನಿಸ್ತಾನದ ಪರಿಸ್ಥಿತಿಗೆ ಭಾರತದಲ್ಲಿರೋ ಅಫ್ಘನ್​ ಪ್ರಜೆಗಳು ಕಣ್ಣೀರು ಹಾಕಿದ್ದಾರೆ. 20 ವರ್ಷಗಳಿಂದ ನಾವು ಮಾಡಿದ ಸಾಧನೆ ಇಷ್ಟುಬೇಗ ಹೋಗುತ್ತೆ ಅಂದುಕೊಂಡಿರಲಿಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ ಅಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಪಲಾಯನ ಮಾಡ್ಬಾರ್ದಿತ್ತು. ಅವರು ಮಾಡಿದ್ದು ತಪ್ಪು. ಅವರಿಂದ ನಾವು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ವಿ. ಇದು ನಮಗೆ ನೋವಾಗಿದೆ ಅಂತ ದುಖಃ ತೋಡಿಕೊಂಡಿದ್ದಾರೆ. ಇನ್ನು ಭಾರತದಲ್ಲಿ ಓದುತ್ತಿರೋ ವಿದ್ಯಾರ್ಥಿಯೊಬ್ಬ, ನನ್ನ ಓದು ಮುಗಿದ ಬಳಿಕ ಅಲ್ಲಿಗೆ ವಾಪಸ್​ ಹೋಗ್ಬೇಕು ಅಂತಿದ್ದೆ. ಆದ್ರೆ ಈಗ ಸೇಫಲ್ಲ ಅನಿಸ್ತಿದೆ. ಹಾಗಂತ ಭಾರತದಲ್ಲಿದ್ರೂ ಇಲ್ಲಿನ ಸರ್ಕಾರ ನಮ್ಗೆ ವಿಸಾ ಕೊಡಲ್ಲ. ಹೀಗಾಗಿ ತಮ್ಮ ಪರಿಸ್ಥಿತಿ ತರಗೆಲೆ ರೀತಿಯಾಗಿದೆ. ಯಾವ ಕಡೆ ಗಾಳಿ ಬಿಸುತ್ತೋ ಆ ಕಡೆ ವಾಲೋದಷ್ಟೇ ಎಂದಿದ್ದಾರೆ. ಇನ್ನು 11 ವರ್ಷದಿಂದ ಭಾರತದಲ್ಲಿರೋ ಅಫ್ಘನ್​ ಮೂಲದ ವೈದ್ಯರೊಬ್ರು ಮಾತನಾಡಿ, ಒಂದುಕಾಲದಲ್ಲಿ ನಾನು ಕಾಬೂಲ್​​ನಲ್ಲಿ ಕಣ್ಣಿನ ಡಾಕ್ಟರ್​ ಆಗಿದ್ದೆ. ಒಂದ್ಸಲ ತಾಲಿಬಾನಿಗಳು ಬಂದು ತಮ್ಮ ಸದಸ್ಯರಿಗೆ ಚಿಕಿತ್ಸೆ ಕೊಡಲು ಸೂಚಿಸಿದ್ರು. ನಾನು ಅವರಿಗೆ ಸಹಾಯ ಮಾಡಲು ನಿರಾಕರಿಸಿದೆ ಅಂದ್ರು. ಈಗ ನಮ್ಮ ಕಡೆಯವರು ಅಲ್ಲಿ ಭಯದಲ್ಲಿ ಜೀವನ ನಡೆಸ್ತಿದ್ದಾರೆ. ಭಾರತ ಸರ್ಕಾರ ಅಫ್ಘನ್ನರಿಗೆ ವೀಸಾ ನೀಡಿ ಭಾರತಕ್ಕೆ ಬರಲು ಅವಕಾಶ ಮಾಡಿಕೊಡಬೇಕು ಅಂತ ಆಗ್ರಹಿಸಿದ್ದಾರೆ.

– ಇನ್ನು ಇಂಥಾ ಟೈಮಲ್ಲಿ ಭಾರತದಲ್ಲಿರೋ ಅಫ್ಘನ್​ ಪ್ರಜೆಗಳಿಗೆ ಸಹಾಯ ಮಾಡಲು ಅಂತಿದ್ದ ಅಫ್ಘನ್​ ರಾಯಭಾರ ಕಚೇರಿಯ ಅಧಿಕೃತ ಟ್ವಿಟ್ಟರ್ ಖಾತೆಯೇ ಹ್ಯಾಕ್ ಆಗಿದೆ. ಹ್ಯಾಕರ್​​ಗಳು ಆ ಖಾತೆಯಿಂದ ಒಂದು ಟ್ವೀಟ್ ಕೂಡ​ ಮಾಡಿದ್ದು, ನಾವೆಲ್ಲರೂ ನಾಚಿಕೆಯಿಂದ ತಲೆ ಬಾಗಿದ್ದೇವೆ. ಘನಿ ಬಾಬಾ ತನ್ನವರೊಂದಿಗೆ ಓಡಿಹೋಗಿದ್ದಾನೆ. ನಮ್ಮನ್ನ ಕ್ಷಮಿಸಿಬಿಡಿ ಅಂತ ಟ್ವೀಟ್​​ನಲ್ಲಿತ್ತು. ತಕ್ಷಣ ಎಚ್ಚೆತ್ತ ಅಫ್ಘನ್​ ರಾಯಭಾರ ಕಚೇರಿ ಅಧಿಕಾರಿಗಳು ಈ ಖಾತೆ ಹ್ಯಾಕ್​ ಆಗಿದೆ, ಈ ಟ್ವೀಟ್​ ನಾವ್ ಮಾಡಿದಲ್ಲ ಅಂತ ಹೇಳಿದ್ದಾರೆ.

– ಅಫ್ಘನಿಸ್ತಾನದಲ್ಲಿ ಸಿಲುಕಿರೋ ಭಾರತೀಯ ಪ್ರಜೆಗಳನ್ನ ವಾಪಸ್ ಕರೆಸಿಕೊಳ್ಳಲು ಪ್ರಯತ್ನ ಪಡ್ತಿದ್ದೀವಿ ಅಂತ ಭಾರತದ ವಿದೇಶಾಂಗ ಇಲಾಖೆ ಹೇಳಿದೆ. ಈ ಸಂಬಂಧ ಅಫ್ಘನಿಸ್ತಾನದಲ್ಲಿರೋ ಸಿಖ್​ ಮತ್ತು ಹಿಂದೂ ಸಮುದಾಯದ ಜೊತೆ ಸಂಪರ್ಕದಲ್ಲಿದ್ದೇವೆ. ಜೊತೆಗೆ ಅಫ್ಘನಿಸ್ತಾನದ ಅಭಿವೃದ್ಧಿಗೆ ನಮ್ಮ ಜೊತೆ ಸಹಕರಿಸಿದ್ದ ಅಫ್ಘನ್ನರ ಜೊತೆಗೂ ನಾವಿದ್ದೇವೆ. ಇವತ್ತು ಕಾಬೂಲ್​ ಏರ್​ಪೋರ್ಟ್​ನಿಂದ ವಾಣಿಜ್ಯ ವಿಮಾನಗಳ ಹಾರಾಟವನ್ನ ಸಸ್ಪೆಂಡ್​ ಮಾಡಲಾಗಿದೆ. ಹೀಗಾಗಿ ಅವರನ್ನ ವಾಪಸ್ ಕರೆಸಿಕೊಳ್ಳೋ ಕಾರ್ಯಾಚರಣೆ ಸದ್ಯಕ್ಕೆ ನಿಂತಿದೆ. ವಿಮಾನಗಳ ಹಾರಾಟ ಶುರುವಾದ ಬಳಿಕ ಈ ಕಾರ್ಯಾಚರಣೆ ಮುಂದುವರಿಯುತ್ತೆ ಅಂತಾನೂ ಭಾರತದ ವಿದೇಶಾಂಗ ಇಲಾಖೆ ಹೇಳಿದೆ. ಇವತ್ತು ಭಾರತದ ವಾಯುಸೇನೆ ವಿಮಾನ ಕಾಬೂಲ್​ ಏರ್​ಪೋರ್ಟ್​ನಲ್ಲಿ ಲ್ಯಾಂಡ್​ ಆಗಿದೆ. ಆದ್ರೆ ನಮ್ಮವರನ್ನ ಮಾತ್ರ ಅದರಲ್ಲಿ ಹೇಗೆ ಕರ್ಕೊಂಡ್​ ಅನ್ನೋದು ಚಾಲೆಂಜಿಂಗ್​ ಕೆಲಸ. ಇವತ್ತು ಕಾಬೂಲ್​ ಏರ್​ಪೋರ್ಟ್​ನಲ್ಲಿ ಸಾಕಷ್ಟು ಅವಾಂತರಗಳಾಗಿವೆ. ಅಮೆರಿಕದ ಸೇನಾ ವಿಮಾನದ ಚಕ್ರ, ರೆಕ್ಕೆಗಳ ಮೇಲೆ ಜನ ಕೂತಿದ್ದು ಕಂಡುಬಂತು. ಹೀಗೆ ಮಾಡ್ಕೊಂಡು 5 ಜನ ಪ್ರಾಣ ಕೂಡ ಕಳ್ಕೊಂಡಿದ್ದಾರೆ.

– ಅಂದಹಾಗೆ ಇಡೀ ಅಫ್ಘಾನಿಸ್ತಾನದಲ್ಲಿರೋ ಹಿಂದೂ ಪಾಪ್ಯುಲೇಶನ್ ಸಂಖ್ಯೆ ಜಸ್ಟ್ 50. ಅದರಲ್ಲಿ ಇರೋದು ಒಬ್ಬರೇ ಒಬ್ಬ ಅರ್ಚಕ. ಕಾಬೂಲ್ ನಲ್ಲಿರೋ ರತನ್ ನಾಥ್ ದೇವಸ್ಥಾನದ ಅರ್ಚಕ ರಾಜೇಶ್ ಕುಮಾರ್ ಶರ್ಮಾ. ಇವರನ್ನ ಹೇಗಾದರೂ ಮಾಡಿ ಭಾರತಕ್ಕೆ ಕರೆತನ್ನಿ, ಅದಕ್ಕೆ ನಾವು ದುಡ್ಡು ಕೊಡ್ತೀವಿ. ಅವರಿಗೆ ಇಲ್ಲೇ ಒಂದು ದೇವಸ್ಥಾನ ಕಟ್ಟಿಕೊಡೋಣ ಅಂತ ಭಾರತದ ವಿಪ್ರ ಸೇನೆ ಸರ್ಕಾರಕ್ಕೆ ಆಗ್ರಹ ಮಾಡಿತ್ತು. ಆದ್ರೆ ಈ ಸಂಬಂಧ ಪ್ರತಿಕ್ರಿಯಿಸಿರೋ ಅರ್ಚಕ ರಾಜೇಶ್ ಶರ್ಮಾ, ನಾನು ಈ ದೇಗುಲ ಬಿಟ್ಟು ಎಲ್ಲೂ ಹೋಗಲ್ಲ. ನನ್ನ ಪೂರ್ವಜರು ಕೂಡ ನೂರಾರು ವರ್ಷಗಳಿಂದ ಈ ದೇಘುಲದ ಸೇವೆ ಮಾಡ್ತಾ ಬಂದಿದ್ದಾರೆ. ಈಗ ತಾಲಿಬಾನಿಗಳೇನಾದ್ರೂ ನನ್ನನ್ನ ಕೊಂದರೆ ಅದು ಈ ದೇಗುಲಕ್ಕೆ ನನ್ನ ಸೇವೆ ಅಂತ ಭಾವಿಸ್ತೀನಿ’ ಅಂದಿದ್ದಾರೆ ಅಂತ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

– ಮತ್ತೊಂದುಸಲ ಅಫ್ಘನಿಸ್ತಾನ ವಿಚಾರವಾಗಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸಭೆ ಕರೆದಿದೆ ಭಾರತ. ಆಗಸ್ಟ್ ತಿಂಗಳಿನಲ್ಲಿ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನ ಭಾರತಕ್ಕಿದೆ.

– ಅಫ್ಘನಿಸ್ತಾನ ಕ್ರಿಕೆಟ್​ ತಂಡ ಈ ಬಾರಿ ನಡೆಯಲಿರೋ ಟಿ-20 ವಿಶ್ವಕಪ್​​ನಲ್ಲಿ ಭಾಗವಹಿಸಲಿದೆ ಅಂತ ಅಫ್ಘನಿಸ್ತಾನ ಕ್ರಿಕೆಟ್​ ಬೋರ್ಡ್ ತಿಳಿಸಿದೆ. ಇನ್ನು ಅಫ್ಘನಿಸ್ತಾನದ ಕ್ರಿಕೆಟರ್​ಗಳಾದ ರಶೀದ್​ ಖಾನ್ ಮತ್ತು ಮೊಹಮ್ಮದ್​ ನಬಿ ಯುಎಇನಲ್ಲಿ ಸೆಪ್ಟೆಂಬರ್​ 19ರಿಂದ ಆರಂಭವಾಗಲಿರೋ ಐಪಿಎಲ್​​ನಲ್ಲಿ ಭಾಗವಹಿಸಲಿದ್ದಾರೆ ಅಂತ ಸನ್​ರೈಸರ್ಸ್ ಹೈದ್ರಾಬಾದ್​ ತಂಡ ಮಾಹಿತಿ ನೀಡಿದೆ.

– ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ಕಂಟ್ರೋಲ್​​ಗೆ ತಗೊಂಡ ಬಳಿಕ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಭವಿಷ್ಯ ನುಡಿದಿದ್ದಾರೆ.ಒಂದು ವರ್ಷದ ಬಳಿಕ ತಾಲಿಬಾನ್, ಪಾಕ್ ಅಥವಾ ಚೀನಾ ಭಾರತದ ಮೇಲೆ ದಾಳಿ ನಡೆಸಲಿದೆ ಅಂತ ಟ್ವೀಟ್ ಮಾಡಿದ್ದಾರೆ. ಮುಂದಿನ ಒಂದು ವರ್ಷ ತಾಲಿಬಾನ್ ತನ್ನ ಸರ್ಕಾರದಲ್ಲಿ ಉದಾರವಾದಿಗಳಿಗೆ ಅವಕಾಶ ನೀಡುತ್ತೆ. ಅದೇ ಸ್ಥಳೀಯ ಮಟ್ಟದಲ್ಲಿ ಕಟ್ಟರ್​ಪಂಥಿಗಳಿಗೆ ನೇತೃತ್ವ ವಹಿಸಲಾಗುತ್ತೆ. ನಂತರ ಒಂದು ವರ್ಷದಲ್ಲಿ ಬುಡ ಗಟ್ಟಿ ಮಾಡಿಕೊಳ್ಳಲಿರುವ ತಾಲಿಬಾನ್​, ಪಾಕಿಸ್ತಾನ ಅಥವಾ ಚೀನಾ ಜೊತೆಗೆ ಸೇರಿಕೊಂಡು ಭಾರತದ ಮೇಲೆ ದಾಳಿ ನಡೆಸುತ್ತೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply