ಮಯನ್ಮಾರ್‌: ನಾಗರಿಕರ ಮೇಲೆ ಸೇನೆ ದಾಳಿ, ಕನಿಷ್ಟ 100 ಸಾವು!

masthmagaa.com:

ಸರ್ಕಾರವನ್ನ ಕೆಳಗಿಳಿಸಿ ಆಡಳಿತ ವಶಪಡಿಸಿಕೊಂಡಿರೊ ಮಯನ್ಮಾರ್‌ ಸೇನೆ ಅಲ್ಲಿನ ಜನರ ಮೇಲೆ ತನ್ನ ಹಿಂಸಾಚಾರವನ್ನ ತೀವ್ರಗೊಳಿಸಿದೆ. ಹಳ್ಳಿಯೊಂದ್ರಲ್ಲಿ ಈ ಹಿಂದಿನ ಸರ್ಕಾರದ ಪೀಪಲ್ಸ್‌ ಡಿಫೆನ್ಸ್‌ ಫೋರ್ಸ್‌ನ ಕಚೇರಿ ಉದ್ಘಾಟನಾ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರ ಮೇಲೆ ಅಲ್ಲಿನ ಸೇನೆ ವೈಮಾನಿಕ ದಾಳಿ ನಡೆಸಿದೆ. ಈ ಘಟನೆಯಲ್ಲಿ ಕನಿಷ್ಟ 100 ಸಾವನ್ನಪ್ಪಿರಬಹುದು ಅಂತ ವರದಿಯಾಗಿದೆ. ಇನ್ನು 2021ರಲ್ಲಿ ಮಯನ್ಮಾರ್‌ ಆಡಳಿತವನ್ನ ಸೇನೆ ವಹಿಸಿಕೊಂಡ ನಂತ್ರ ಅಲ್ಲಿನ ಜನರು ನಿರಂತರ ಹೋರಾಟ ನಡೆಸುತ್ತಿದ್ದು, ಅವ್ರನ್ನ ಹತ್ತಿಕ್ಕಲು ಸೇನೆ ಪ್ರಯತ್ನ ಮಾಡ್ತಿದೆ. ಈ ಹಿನ್ನೆಲೆಯಲ್ಲಿ ಹಳ್ಳಿಯಲ್ಲಿ ಸೇರಿದ್ದ ಜನರನ್ನ ಗುರಿಯಾಗಿಸಿ ವೈಮಾನಿಕ ದಾಳಿ ನಡೆಸಿದೆ. ಈ ವೈಮಾನಿಕ ದಾಳಿ ಕುರಿತು ಪ್ರತಿಕ್ರಿಯಿಸರುವ ಜುಂಟಾ ವಕ್ತಾರ, ಸೇನಾ ವಿರೋಧಿಗಳ ಮೇಲೆ ಏರ್‌ಸ್ಟ್ರೈಕ್‌ ನಡೆಸಿದ್ದು, ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ ಅಂತ ಹೇಳಿದ್ದಾರೆ. ಇತ್ತ ಘಟನೆಯನ್ನ ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಆಂಟೊನಿಯೊ ಗುಟೆರಸ್‌ ಖಂಡಿಸಿ, ಮಯನ್ಮಾರ್‌ನಲ್ಲಿ ಜುಂಟಾ ತನ್ನ ಹಿಂಸಾಚಾರವನ್ನ ನಿಲ್ಲಿಸ್ಬೇಕು ಅಂತ ಆಗ್ರಹಿಸಿದ್ದಾರೆ. ಇನ್ನೊಂದ್‌ ಕಡೆ ಅಮೆರಿಕ ಕೂಡ ಈ ವೈಮಾನಿಕದಾಳಿಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಂದ್ಹಾಗೆ 2021ರಲ್ಲಿ ಆಂಗ್‌ ಸಾನ್‌ ಸೂಕಿ ನೇತೃತ್ವದ ಸರ್ಕಾರವನ್ನ ಕೆಳಗಿಳಿಸಿ ಸೇನೆ ಅಧಿಕಾರಿ ಪಡೆದಿತ್ತು. ಅಂದಿನಿಂದ ಇಲ್ಲಿವರೆಗೆ ಸೇನೆ ದಾಳಿಗೆ 3 ಸಾವಿರಕ್ಕೂ ಅಧಿಕ ನಾಗರಿಕರು ಬಲಿಯಾಗಿದ್ದಾರೆ ಅಂತ ಅಂದಾಜಿಸಲಾಗಿದೆ.

-masthmagaa.com

Contact Us for Advertisement

Leave a Reply