ಕಾಬೂಲ್​ ಏರ್​ಪೋರ್ಟ್​ನಲ್ಲಿ ಸರಣಿ ಬಾಂಬ್ ಸ್ಫೋಟ: 85 ಜನ ಸಾವು

masthmagaa.com:

ಅಫ್ಘನಿಸ್ತಾನದ ಕಾಬೂಲ್​​ ಏರ್​ಪೋರ್ಟ್​​ ಬಳಿ ನಿನ್ನೆ ರಾತ್ರಿ ನಡೆದ ಸರಣಿ ಸ್ಫೋಟದಲ್ಲಿ ಕನಿಷ್ಠ 60 ಜನ ಮೃತಪಟ್ಟಿದ್ದಾರೆ. ನೂರಾರು ಜನ ಗಾಯಗೊಂಡಿದ್ದಾರೆ. ಉಗ್ರರು ತಮ್ಮನ್ನ ತಾವು ಸ್ಫೋಟಿಸಿಕೊಳ್ಳೋ ಮೂಲಕ ಈ ದಾಳಿ ನಡೆಸಿದ್ದಾರೆ. ಏರ್​ಪೋರ್ಟ್​ನ ಪ್ರಮುಖ ಗೇಟ್​ ಮತ್ತು ಏರ್​ಪೋರ್ಟ್​ ಸಮೀಪದ ಹೋಟೆಲ್​​ ಬಳಿ ಸ್ಫೋಟ ಸಂಭವಿಸಿದೆ. ಈ ಹೋಟೆಲ್​​ನಲ್ಲಿ ಅಫ್ಘನಿಸ್ತಾನದಿಂದ ಹೊರಹೋಗಬೇಕು ಅಂದುಕೊಂಡಿದ್ದವರು ತಂಗಿದ್ದರು. ದಾಳಿಯಲ್ಲಿ ಅಮೆರಿಕದ 13 ಯೋಧರು ಪ್ರಾಣ ಕಳ್ಕೊಂಡಿದ್ದಾರೆ ಅಂತ ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಹೇಳಿಕೊಂಡಿದೆ. ಕಳೆದ 10 ವರ್ಷದಲ್ಲಿ ಅಮೆರಿಕ ಸೇನೆಗಾದ ದೊಡ್ಡ ನಷ್ಟ ಇದು. 2011ರಲ್ಲಿ ಕಾಬೂಲ್​​ನಲ್ಲಿ ಅಮೆರಿಕದ ಸೇನಾ ವಿಮಾನವನ್ನ ಹೊಡೆದುರುಳಿಸಿದಾಗ 31 ಯೋಧರು ಮೃತಪಟ್ಟಿದ್ದರು. ಈಗ 13 ಮಂದಿ. ತಾಲಿಬಾನ್​​ಗೆ ಹೆದರಿ ಜನ ಅಲ್ಲಿಂದ ಜಾಗ ಖಾಲಿ ಮಾಡ್ತಿರುವಾಗಲೇ ಸ್ಫೋಟ ಸಂಭವಿಸಿರೋದು ಜನ ಮತ್ತು ವಿವಿಧ ದೇಶಗಳ ಆತಂಕವನ್ನ ಮತ್ತಷ್ಟು ಹೆಚ್ಚಿಸಿದೆ. ದಾಳಿಯ ಹೊಣೆಯನ್ನ ಐಸಿಸ್​ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಅದ್ರಲ್ಲೂ ಐಸಿಸ್​​ನ ಅಂಗಸಂಸ್ಥೆಯಾದ ಐಸಿಸಿಸ್​ ಕೆ ಅನ್ನೋ ಉಗ್ರ ಸಂಘಟನೆ ದಾಳಿ ನಡೆಸಿದ್ದು ತಮ್ಮವರೇ ಅಂತ ಹೇಳಿಕೊಂಡಿದೆ.​ ನಿನ್ನೆಯಷ್ಟೇ ಪಾಶ್ಚಿಮಾತ್ಯ ದೇಶಗಳ ಗುಪ್ತಚರ ಇಲಾಖೆಗಳು ಕಾಬೂಲ್​ ಏರ್​ಪೋರ್ಟ್​​ನಲ್ಲಿ ಭಯೋತ್ಪಾದನೆ ದಾಳಿ ನಡೀಬಹುದು. ಹೀಗಾಗಿ ಏರ್​ಪೋರ್ಟ್​​ಗೆ ಬರಬೇಡಿ ಅಂತ ಎಚ್ಚರಿಸಿತ್ತು. ಜಿ7 ಶೃಂಗಸಭೆಯಲ್ಲಿ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕೂಡ, ಕಾಬೂಲ್ ಏರ್​ಪೋರ್ಟ್​ನಲ್ಲಿ ಐಸಿಸ್​​ ಕೆ ದಾಳಿ ನಡೆಸೋ ಅಪಾಯವಿದೆ ಅಂತ ಹೇಳಿದ್ರು. ಇದರ ನಡುವೆಯೇ ಏಕೈಕ ಸುರಕ್ಷಿತ ಪ್ರದೇಶ ಎನಿಸಿಕೊಂಡಿದ್ದ ಕಾಬೂಲ್​ ಏರ್​ಪೋರ್ಟ್​​ನಲ್ಲಿ ಭಯೋತ್ಪಾದಕ ದಾಳಿ ನಡೆದುಬಿಟ್ಟಿದೆ.

-masthmagaa.com

Contact Us for Advertisement

Leave a Reply