ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆ!

masthmagaa.com:

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ದೊಡ್ಡ ಬೆಳವಣಿಗೆಯಾಗಿದೆ. ನಳೀನ್‌ ಕುಮಾರ್‌ ಕಟೀಲ್‌ ಅವರ ನಂತರ ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷ ಯಾರು ಅನ್ನೋ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಶಿಕಾರಿಪುರ ಕ್ಷೇತ್ರದ ಶಾಸಕ, ಮಾಜಿ ಸಿಎಂ ಬಿಎಸ್‌ವೈ ಅವ್ರ ಪುತ್ರ ಬಿ ವೈ ವಿಜಯೇಂದ್ರ ಅವರಿಗೆ ಬಿಜೆಪಿ ಹೈಕಮಾಂಡ್‌ ರಾಜ್ಯದ ಚುಕ್ಕಾಣಿಯನ್ನ ನೀಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ತಕ್ಷಣವೇ ಜಾರಿ ಬರುವಂತೆ, ರಾಜ್ಯ ಬಿಜೆಪಿ ನೂತನ ಅಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ಅವ್ರನ್ನ ನೇಮಕ ಮಾಡಿ ಆದೇಶಿಸಿದ್ದಾರೆ. ಈ ಮೂಲಕ ಯಡಿಯೂರಪ್ಪ ಅವರಿಗೆ ಬಿಜೆಪಿ ದೀಪಾವಳಿ ಗಿಫ್ಟ್‌ ನೀಡಿದೆ. ಮೇ ತಿಂಗಳಲ್ಲೇ ಎಲೆಕ್ಷನ್‌ ಮುಗಿದಿತ್ತು, ಹೊಸ ಸರ್ಕಾರ ಬಂದು ಸುಮಾರು 7 ತಿಂಗಳೇ ಕಳೆದಿತ್ತು. ಹೀಗಿದ್ರು ಕೂಡ ಬಿಜೆಪಿ ಹೈಕಮಾಂಡ್‌ ವಿರೋಧ ಪಕ್ಷ ನಾಯಕ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಯಾರನ್ನೂ ನೇಮಕ ಮಾಡಿರ್ಲಿಲ್ಲ. ಈ ಹುದ್ದೆಗಳಿಗೆ ದೊಡ್ಡ ಪೈಪೋಟಿ ಕೂಡ ನಡೆದಿತ್ತು. ಮತ್ತೊಂದ್‌ ಕಡೆ ಬಿಎಸ್‌ವೈ ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದಾಗ ಲಿಂಗಾಯತ ಸಮುದಾಯ ಬಿಜೆಪಿ ಮೇಲೆ ಮುನಿಸಿಕೊಂಡಿದೆ ಅನ್ನೋ ವಿಶ್ಲೇಷಣೆ ಆಗಿತ್ತು. ಚುನಾವಣೆಯಲ್ಲಿ ಬಿಜೆಪಿ ಇದ್ರ ಎಫೆಕ್ಟ್‌ನ್ನ ಕೂಡ ಅನುಭವಿಸಿತ್ತು. ಈಗ ಕೊನೆಗೂ ಅಳೆದು ತೂಗಿ ಹೈಕಮಾಂಡ್‌ ಬಿಎಸ್‌ವೈ ಪುತ್ರನ ಹೆಗಲಿಗೆ ರಾಜ್ಯ ಬಿಜೆಪಿ ನೊಗವನ್ನ ಹೊರಸಿದೆ. ಈ ಮೂಲಕ ಬಿಎಸ್‌ವೈ ಹಾಗು ಲಿಂಗಾಯತ ಸಮುದಾಯವನ್ನ ಒಂದ್‌ ರೀತಿ ಸಂತೃಪ್ತಿ ಪಡಿಸೋ ಪ್ರಯತ್ನ ಮಾಡಿದೆ.

-masthmagaa.com

Contact Us for Advertisement

Leave a Reply