ನಾಳೆ ವಿಧಾನಸೌಧದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಅದ್ದೂರಿ ಚಾಲನೆ..

masthmagaa.com:

ಮಾರ್ಚ್‌ 23 ರಿಂದ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಾರಂಭವಾಗಲಿದೆ. ಆರ್.ಆರ್.ಆರ್ ಸೇರಿದಂತೆ ಸಾಕಷ್ಟು ಹಿಟ್ ಚಿತ್ರಗಳಿಗೆ ಕಥೆ, ಚಿತ್ರಕಥೆ ಬರೆದಿರುವ ವಿ.ವಿಜಯೇಂದ್ರ ಪ್ರಸಾದ್ಅವರು ಚಿತ್ರೋತ್ಸವದ ಸ್ಮರಣ ಸಂಚಿಕೆಯನ್ನ ಉದ್ಘಾಟನಾ ಸಮಾರಂಭದಲ್ಲಿ ಬಿಡುಗಡೆಗೊಳಿಸಲಿದ್ದಾರೆ. ಇನ್ನೂ ಸಿಎಂ ಬಸವರಾಜ ಬೊಮ್ಮಾಯಿ ಚಿತ್ರೋತ್ಸವವನ್ನು ಉದ್ಘಾಟಿಸಲಿದ್ದಾರೆ.

ಈ ವರ್ಷದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಮಾರ್ಚ್‌ 23 ರಿಂದ 30 ರವರೆಗೂ 7 ದಿನಗಳ ಕಾಲ ನಡೆಯಲಿದೆ. ಸರಕಾರದಿಂದ ಹಣ ಬಿಡುಗಡೆ ಆಗಿಲ್ಲ ಎನ್ನುವ ಕಾರಣಕ್ಕಾಗಿ ಚಿತ್ರೋತ್ಸವ ನಡೆಯುತ್ತದೋ ಇಲ್ಲವೋ ಎಂಬುದರ ಬಗ್ಗೆ ತುಂಬಾ ಗೊಂದಲ ಮೂಡಿತ್ತು. ಕೊನೆಗೂ ಸರಕಾರ ಕಾರ್ಯಕ್ರಮಕ್ಕೆ ಹಣ ನೀಡಿ ಚಿತ್ರೋತ್ಸವದ ಕೆಲಸಗಳಿಗೆ ಚಾಲನೆ ನೀಡಿದೆ. ಇನ್ನೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಚಿತ್ರೋತ್ಸವದಲ್ಲಿ ನಾನಾ ರೀತಿಯ ಬದಲಾವಣೆ ಮಾಡುವ ಮೂಲಕ ಮತ್ತಷ್ಟು ನಿರೀಕ್ಷೆ ಮೂಡುವಂತೆ ಮಾಡಿದೆ.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಅಶೋಕ್‌ ಕಶ್ಯಪ್‌ ಸಿನಿಮಾ ಸ್ಪರ್ಧೆಯಲ್ಲಿ ಗೆದ್ದ ಸಿನಿಮಾಗಳ ಬಹುಮಾನ ಮೊತ್ತವನ್ನು ಹೇಳಿ ಅಚ್ಚರಿ ಮೂಡಿಸಿದ್ದರು. ಈ ಬಾರಿ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದ ಚಿತ್ರಕ್ಕೆ ಬರೋಬ್ಬರಿ ಹತ್ತು ಲಕ್ಷ ರೂಪಾಯಿ ಕೊಡುವ ಸಾಧ್ಯತೆ ಇದೆ. ಅಕಾಡೆಮಿ ಸರಕಾರಕ್ಕೆ ʻಈವರೆಗೂ ಅತ್ತುತ್ತಮ ಚಿತ್ರಕ್ಕೆ ಮೂರು ಲಕ್ಷ ರೂಪಾಯಿಗಳನ್ನು ಮಾತ್ರ ನೀಡಲಾಗುತ್ತಿತ್ತು. ಈ ಬಾರಿ ಹತ್ತು ಲಕ್ಷಕ್ಕೆ ಏರಿಸಿ ಎಂದುʼ ಶಿಫಾರಸ್ಸು ಮಾಡಿದೆ ಎನ್ನಲಾಗುತ್ತಿದೆ.

ಸಿನಿಮಾಗಳನ್ನು ಏಷಿಯನ್‌, ಭಾರತೀಯ ಹಾಗೂ ಕನ್ನಡ ಸಿನಿಮಾ ಎಂದು ಮೂರು ವಿಭಾಗಿಸಿದ್ದು ಅವುಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತಿಯ ಬಹುಮಾನಗಳನ್ನು ನೀಡಲಾಗುತ್ತಿದ್ದು, ಕ್ರಮವಾಗಿ ಹತ್ತು ಲಕ್ಷ ರೂ, ಐದು ಲಕ್ಷ ರೂ ಹಾಗೂ ಮೂರು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಅಧ್ಯಕ್ಷ ಅಶೋಕ ಕಶ್ಯಪ್‌ ತಿಳಿಸಿದ್ದರು. ಇನ್ನೂ ಒಟ್ಟು 50 ದೇಶಗಳ 200 ಸಿನಿಮಾಗಳನ್ನು ಈ ಆವೃತಿಯಲ್ಲಿ ಪ್ರದರ್ಶಿಸಲು ತೀರ್ಮಾನಿಸಲಾಗಿದ್ದು, ವಿಶ್ವದ 61 ಸಿನಿಮಾಗಳು ಬೆಂಗಳೂರು ಚಿತ್ರೋತ್ಸವದಲ್ಲಿ ಭಾಗಿಯಾಗಲಿವೆ ಎನ್ನಲಾಗುತ್ತಿದೆ.

ನಾಳೆ ವಿಧಾನಸೌಧದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಬಾಲಿವುಡ್ ನಿರ್ದೇಶಕ, ಸಿನಿಮಾಟೋಗ್ರಾಫರ್ ಗೋವಿಂದ್ ನಿಹಾಲಾನಿ, ನಟಿ ರಮ್ಯಾ ಕೃಷ್ಣ, ಅಭಿಷೇಕ್ ಅಂಬರೀಶ್, ಸಪ್ತಮಿ ಗೌಡ ವಿಶೇಷ ಅತಿಥಿಗಳಾಗಿ ಆಗಮಿಸುತ್ತಿದ್ದು, ಹರ್ಷಿಕಾ ಪೂಣಚ್ಚ ದೀಪ ಬೆಳಗುವ ಕಾರ್ಯಕ್ರಮಕ್ಕೆ ನೆರವು ನೀಡಲಿದ್ದಾರೆ.

-masthmagaa.com

Contact Us for Advertisement

Leave a Reply