ಬೆಳಗಾವಿಯಲ್ಲಿ ಹೋರಾಟದ ಕಿಚ್ಚು! ಕರವೇ

masthmagaa.com:

ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸಗೊಳಿಸಿದವರನ್ನು ಕೂಡಲೇ ಬಂಧಿಸಬೇಕು, ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ಬಂಧಿಸಬೇಕೆಂದು ಆಗ್ರಹಿಸಿ ಕರವೇ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು ಇವತ್ತು ಬೀದಿಗಿಳಿದಿದ್ವು. ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣ ಮತ್ತು ನಾರಾಯಣಗೌಡರ ಬಣ ಎರಡೂ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿವೆ. ಸಾವಿರಾರು ಮಂದಿ ಒಟ್ಟುಗೂಡಿ ಲಾರಿಗಳನ್ನು ಅಡ್ಡಗಟ್ಟಿ, ಲಾರಿಗಳ ಮೇಲೆ ಹತ್ತಿ ಎಂಇಎಸ್ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಅದರಲ್ಲೂ ಕೆಲ ಮಹಿಳೆಯರು ಕೂಡ ಬಸ್ ಮೇಲೆಲ್ಲಾ ಹತ್ತಿ ಪ್ರತಿಭಟಿಸಿದ್ದು, ಅವರನ್ನು ಕೆಳಗಿಳಿಸಲು ಪೊಲೀಸರು ಹರಸಾಹಸ ಪಡಬೇಕಾಯ್ತು. ಇನ್ನು ಹಿರೇಬಾಗೇವಾಡಿಯಿಂದ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಹೊರಟಿದ್ದ ಕರವೇ ಬಣಗಳ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಯ್ತು. ಈ ವೇಳೆ ಮಾತಾಡಿದ ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಬುಧವಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸಭೆ ಇದೆ. ಈಗಲೇ ಎಂಇಎಸ್ ನಿಷೇಧಿಸದೇ ಇದ್ರೆ ಮುಂದಿನ ಹೋರಾಟದ ಬಗ್ಗೆ ಆ ಸಭೆಯಲ್ಲಿ ನಿರ್ಧರಿಸ್ತೀವಿ ಅಂದ್ರು. ಇನ್ನು ಕರವೇ ಮತ್ತೊಂದು ಬಣದ ಅಧ್ಯಕ್ಷ ನಾರಾಯಣಗೌಡ್ರು ಮಾತಾಡಿ, ಸುವರ್ಣ ಸೌಧದಲ್ಲಿ ಮುಟ್ಟಾಳರು ಕುಳಿತಿದ್ದಾರೆ ಅಂತ ಕಿಡಿಕಾರಿದ್ರು. ಇದ್ರ ಬೆನ್ನಲ್ಲೇ ನೂಕಾಟ ತಳ್ಳಾಟ ಉಂಟಾಗಿದ್ದರಿಂದ ಅವರನ್ನು ಪೊಲೀಸರು ವಶಕ್ಕೆ ಪಡೆದ್ರು. ಬರೀ ಬೆಳಗಾವಿ ಮಾತ್ರವಲ್ಲ.. ಬಾಗಲಕೋಟೆ, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಕನ್ನಡ ಪರ ಸಂಘಟನೆಗಳು ಬೆಳಗಾವಿ ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿವೆ. ಇನ್ನು ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತಾಡಿದ ವಾಟಾಳ್ ನಾಗರಾಜ್​​, ಎಂಇಎಸ್ ಬ್ಯಾನ್ ಮಾಡದೇ ಇದ್ರೆ ಕರ್ನಾಟಕ ಬಂದ್​​​​ಗೆ ಕರೆ ನೀಡ್ಬೇಕಾಗುತ್ತೆ ಅಂತ ಎಚ್ಚರಿಕೆ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply