ಕೇಂದ್ರ ಸರ್ಕಾರವನ್ನ ಬೆಂಬಲಿಸಿದ ರಾಹುಲ್‌ ಗಾಂಧಿ! ಹೇಳಿದ್ದೇನು?

masthmagaa.com:

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮೂರು ಯುರೋಪ್‌ ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಬ್ರುಸೆಲ್ಸ್‌ನಲ್ಲಿರುವ ಯುರೋಪಿಯನ್‌ ಪಾರ್ಲಿಮೆಂಟ್‌ನ ಕೆಲ ಸದಸ್ಯರ ಜೊತೆ ಸಭೆ ನಡೆಸಿದ್ದಾರೆ ಅಂತ ತಿಳಿದು ಬಂದಿದೆ. ಈ ಸಭೆಯಲ್ಲಿ ಮಣಿಪುರದ ಮಾನವ ಹಕ್ಕುಗಳ ಪರಿಸ್ಥಿತಿ ಸೇರಿದಂತೆ ಇತರ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಅಂದ್ಹಾಗೆ ಮಣಿಪುರ ಹಿಂಸಾಚಾರವನ್ನ ಉಲ್ಲೇಖಿಸಿ ಭಾರತದಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿ ಕುರಿತು ಯುರೋಪಿಯನ್ ಪಾರ್ಲಿಮೆಂಟ್ ಜುಲೈನಲ್ಲಿ ನಿರ್ಣಯ ಅಂಗೀಕರಿಸಿತ್ತು. ಆಗ ಪ್ರತಿಕ್ರಿಯಿಸಿದ್ದ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂಧಮ್ ಬಗ್ಚಿ, ‘ಭಾರತದ ಅಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡೋದನ್ನ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದು ವಸಾಹತುಶಾಹಿ ಮನಸ್ಥಿತಿಯನ್ನು ತೋರಿಸುತ್ತದೆʼ ಅಂತ ಹೇಳಿದ್ದರು.

ಇತ್ತ ಬೆಲ್ಜಿಯಂನ ಈವೆಂಟ್‌ ಒಂದ್ರಲ್ಲಿ ಮಾತಾಡಿರುವ ರಾಹುಲ್‌, ರಷ್ಯಾ – ಯುಕ್ರೇನ್‌ ಯುದ್ಧದ ವಿಚಾರದಲ್ಲಿ ಭಾರತ ಹೊಂದಿರುವ ನಿಲುವನ್ನ ವಿಪಕ್ಷಗಳು ಒಪ್ಪಿಕೊಳ್ಳುತ್ತವೆ ಅಂತ ಹೇಳಿದ್ದಾರೆ. ಜೊತೆಗೆ ನಾವು ರಷ್ಯಾದ ಜೊತೆ ಸಂಬಂಧವನ್ನ ಹೊಂದಿದ್ದೇವೆ. ಈ ಕಾರಣಕ್ಕೆ ಪ್ರಸ್ತುತ ಸರ್ಕಾರ ಯಾವ ಪೊಸಿಷನ್‌ನಲ್ಲಿ ಇದ್ಯೋ ಅದು ಬಿಟ್ಟು ಬೇರೆ ಪೊಸಿಷನ್‌ನಲ್ಲಿ ವಿರೋಧ ಪಕ್ಷ ಇರಲ್ಲ ಅಂತ ನಾನು ಭಾವಿಸುತ್ತೇನೆ ಎಂದಿದ್ದಾರೆ. ಅಂದ್ರೆ ಕೇಂದ್ರ ಸರ್ಕಾರ ಹಾಗೂ ವಿಪಕ್ಷಗಳ ನಿಲುವು ಒಂದೇ ಅನ್ನೋ ಅರ್ಥದಲ್ಲಿ ರಾಹುಲ್‌ ಹೇಳಿಕೆ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply